ನೀ ಸಿಗದೆ ನಾನೆಂತು ತಿಳಿವೆನೇ ನನ್ನ
ಸಾಣೆ ಗೆರೆಮಿಂಚದೆ ತಿಳಿವರೇ ಹೊನ್ನ?
ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು
ಆತ್ಮ ಸೆರೆಯಿದ್ದೂ ಅರಿತಿರದ ಭವಿಯು
ನಾನೊಂದು ಕಗ್ಗಾಡು ನನ್ನ ನಾ ಅರಿಯೆ
ಬೆಳಕಾಗಿ ಒಳತೂರಿ ದಾರಿಗಳ ತೆರೆಯೆ!
ನನ್ನ ಗೂಢಗಳಲ್ಲಿ ಇಳಿಯುವಾ ಹೆಣ್ಣೆ
ಸೋಕಿದಲ್ಲೆಲ್ಲ ರಸ ಮಿಡಿವ ಹಣ್ಣೆ!
ಸಂಗಮಿಸಿ ಎಲ್ಲ ಹೂ ಗಂಧ ಮಕರಂದ
ನಿನ್ನಲ್ಲಿ ಸಿಕ್ಕಿತೇ ನನ್ನಂತರಂಗ!
ಅಂತರಂಗದ ಬೆಳಕ ತೆರೆವ ಶ್ರೀರಾಗ
ಕೋಟಿ ಕನಸಿಗೆ ಮೂಲ, ನಿನ್ನಿಂದ ಭೋಗ
ನೀ ತೆರೆವ ಪಾತ್ರದಲಿ ನಾ ನಂಬಿ ಹರಿವೆ
ಗುರಿ ತಲುಪಿ ನಾ ಕೊನೆಗೆ ಕಡಲಲ್ಲಿ ನೆರೆವೆ!
*****
ಪುಸ್ತಕ: ನಿನಗಾಗೇ ಈ ಹಾಡುಗಳು