Home / ಕವನ / ಅನುವಾದ / ಸತ್ಪುರುಷ ಪರೀಕ್ಷೆ

ಸತ್ಪುರುಷ ಪರೀಕ್ಷೆ

ಡಾ. ರವೀಂದ್ರನಾಥ ಠಾಕೂರರವರ ಕವಿತೆಗಳ ಭಾವಾನುವಾದವು.

ಭಾ. ಷ.

ಒಂದು ದಿನ ವರವಾರಣಾಸಿಯೊ |
ಳೀಂದುಶೇಖರ-ವಿಶ್ವನಾಥನ |
ಮಂದಿರದ ಮುಂಗಡೆಯೊಳುದುರಿತು, ಹೊನ್ನಿನುರುಪದಕ ||
ಚಂದದಿಂ ಬರೆದಿರ್ದರದರೊಳು |
“ಸಂದ ಸತ್ಕರ್ಮಗಳ ಗೈದವ |
ಗಿಂದಿರೆಯ ವರನೊಲಿದು ಕಳುಹಿದನೀಮಹಾವರವ” ||೧||

ನೆರೆದ ಭೂಸುರರಿದನು ಕಾಣುತ |
ಭರದಿ ಸಾರಿದರೆಲ್ಲ ಕಡೆಯಲಿ |
“ಬರುವದಿಲ್ಲಿಗೆ ವರವಕೊಳ್ಳಲು ಯೋಗ್ಯರಾದವರು ||
ನೆರೆದ ಸಭೆಯಲಿ ವೇಳೆತಾವೆಸ |
ಗಿರುವ ಸತ್ಕಾರ್ಯಗಳ ಸರ್ವರು |
ಪರಮಪೂಜ್ಯನ ನೋಡಿ ಕೊಡುವೆವು ವರವನೆಂ” ದೆನುತ ||೨||

ಅರಿವುತೀಸೋಜಿಗದ ಸುದ್ದಿಯ |
ಹರುಷದಲಿ ಬಹುಜನರು-ಮುನಿಗಳು, |
ಪರಮಭಕ್ತರು, ಧರ್ಮನಿಷ್ಠರು, ಸುಕೃತ ಶಾಲಿಗಳು ||
ತರತರದ ಬಿರುದಾಂತು ಮೆರೆಯುವ |
ವರಮಠಾಧಿಪರಾರ್ಯರರಸರು, |
ಹರಿದು ಬಂದರು ವಾರಣಾಸಿಗೆ ತಾನು ತಾನೆನುತ ||೩||

ತಂಡ ತಂಡದಿ ಬರ್ವ ಜನರನು |
ಕಂಡು ಭೂಸುರವರರು ವರಸಭೆ |
ಗೊಂಡು, ಕೇಳುತಲವರ ಕಾರ್ಯವ, ತಿರುಗಿ ಕಳುಹಿದೊಡೆ ||
ಕಂಡು ಕಾಣದೆ ಮೋಹವಶದಿಂ |
ಕೆಂಡವನು ಪಿಡಿವುತ್ತ ಮನದೊಳ |
ಗಂಡಲೆವ ಕೀಟಕದ ತೆರದಲಿ ಮರುಗುತೈದಿದರು ||೪||

ಸಂದುವೀಪರಿಯಿಂದ ವರುಷಗ |
ಳೊಂದೆರಡು, ಬಳಿಕೊಂದು ದಿನ ತಾ |
ಬಂದನಲ್ಲಿಗೆ ಪರಮ ಧಾರ್ಮಿಕನೆನಿಪ ಭೂವರನು ||
ಸಂದ ‘ಸಾಮ್ರಾಜ್ಯವನು ಧನವನು |
ಮಂದಿ ಮಾರ್ಬಲವಾನೆ ಕುದುರೆಗ |
ಳೊಂದುಳಿಯದಂದದಲಿ ದಾನವ ಮಾಡಿ ದೀನರಿಗೆ ||೫||

ಬಂದ ಭೂಪನ ಕಂಡು ಸಭಿಕರು |
ವಂದಿಸುತ, “ಭೂವರನೆ, ನಿನ್ನಯ |
ಸಂದ ಸದ್ಗುಣಗಣವ ನಿನ್ನಯ ದಾನ ಶೂರತೆಯು ||
ಚಂದದಿಂ ಕೇಳಿಹೆವು ಕೊಳ್ಳೈ |
ಇಂದಿರೆಯ ವರನಿತ್ತವರವನು” |
ಎಂದೆನುತ ನೀಡಿದರು ಪದಕವನಾಮಹೀವತಿಗೆ ||೬||

ಪರಮ ಧಾರ್ಮಿಕನೆನಿಪ ಭೂಪನು |
ಹರುಷದಿಂ ಸಭಿಕರನು ವಂದಿಸಿ |
ವರವ ಕೊಂಡನು, ನೋಡು, ನೋಡೀ ಮಹಾಚಮತ್ಕೃತಿಯ ||
ವರ ಸುವರ್ಣದ ಪದಕವರಸನು |
ಕರದಿ ಪಿಡಿವನಿತರೊಳು ತಟ್ಟನೆ |
ಉರುಳಿ ಬಿದ್ದಿತು, ನೋಡೆ ಸಭಿಕರು, ಮಣ್ಣ ಹಂಚಾಯ್ತು || ೭ ||

ಅರರೆ! ಏನಚ್ಚರಿಯೊ! ಭೂಪನು |
ಮರುಗಿ ಮನದೊಳು ಪೋಗಲಿತ್ತಲು |
ತಿರುಗಿ ಪದಕವು ಮೊದಲಿನಂತಾಯ್ತೇನ ಪೇಳುವೆನು ||
ವರಮಹೀಸುರರೊಲಿದು ಕೊಟ್ಟರು |
ವರವ ನೀಪರಿಯಿಂದ ಮೂವರಿ |
ಗರರೆ! ಚೋದ್ಯವು! ಧಿಕ್ಕರಿಸಿತದು ಮೊದಲಿನಂದದಲಿ || ೮ ||

ಈಯವಧಿಯಲ್ಲಿ ಹಲವು ಕಡೆಯಿಂ |
ಕಾಯಕಷ್ಟವ ಮಾಡಲಾರದ |
ರಾಯವಿಲ್ಲದೆ ದೀನರಾಗಿಹ ಬಡಕುಟುಂಬಿಕರು ||
ಬಾಯಿಯಿಲ್ಲದರಂಗಹೀನರು |
ತಾಯಿಯರಸುವ ಕರುವಿನಂದದಿ |
ಜೀಯ ! ದಯಮಾಡೆನುತ ಬಂದರು ನಿಂದರಾಪುರದಿ ||೯||

ಜನರೊಳುರೆ ಕೀರ್ತಿಯನ್ನು ಪಡೆದಿಹ |
ಘನಸುಶೀಲರು ವರವ ಪಡೆಯಲು |
ಘನತರದ ಸಂಭ್ರಮದಿ ಬರುತಿರೆ ನೋಡುತ್ತಾ ಜನರ ||
ಮನದಿ ಕನಿಕರವಿನಿತು ಮಾತ್ರವು |
ಜನಿಸದಿರ್ದರು ಧನವ ಧಾನ್ಯವ |
ಜನರು ಸೈ ಸೈಯೆನ್ನುವಂದದಿ ಸೂರೆಗೈಯುವರು ||೧೦||

ಇರುತಿರಲು, ವರವಿಶ್ವನಾಥನ |
ದರುಶನಕೆನುತ ವಾರಣಾಸಿಗೆ |
ಹೊರಟನೊಬ್ಬನು ತೊಳಲಿ ಬಳಲುತ ದಿನವೇಷದಲಿ ||
ಅರಿಯನವನೀ ವರದ ವಾರ್ತೆಯ |
ನರಿಯ ನಾಡಂಬರದ ನಡತೆಯ |
ಸೊರಗಿ ಸಣ್ಣಾಗುವನು ದೀನರ ದುಃಖವನ್ನು ನೋಡಿ ||೧೧||

ಒಂದು ದಿನ ಮಧ್ಯಾಹ್ನ ಸಮಯದಿ
ಬಂದನಾತನು ವಾರಣಾಸಿಗೆ |
ಸಂದ ವಿಶ್ವೇಶ್ವರನ ಮಂದಿರದೆಡೆಗೆ ಮುದದಿಂದ ||
ಮಂದಿರದ ಸುತ್ತಲಿನ ಮಾರ್ಗದಿ |
ನಿಂದಿಹರು ದುಃಖದಲಿ ಬಹುವಿಧ |
ದಿಂದ ಗೋಳಿಡುವದನು ಕೇಳುತ ಮನದಿ ಮರುಗಿದನು ||೧೨||

ನೊಂದು ಮನದಲಿ ಮುಂದೆ ಬರುತಿರ |
ಲೊಂದು ಕಡೆಯಲಿ ಬಹಳ ದುಃಖದಿ |
“ತಂದೆಯೇ! ಕಣ್ಣಿಲ್ಲ, ಕುಂಟನು ಮೂರು ದಿನದಿಂದ ||
ಒಂದು ಹಿಡಿ ಕೂಳಿಲ್ಲ, ಸಾಯುವೆ” |
ನೆಂದೆನುತ ಮೊರೆಯಿಡಲು ಕೇಳುತ |
ಮುಂದಕಡಿಯಿಡಲಾರದಲೆ ತಾ ನಡೆದನವನೆಡೆಗೆ ||೧೩||

ಓಡುತೋಡುತ್ತಲ್ಲಿ ಗೈದುತ |
ನೋಡುತಾತನ ತನುವ “ಕಂದನೆ, |
ಮಾಡಲೇಂ ಕೊಡಲಾರೆನನ್ನವ ದೀನನಾಗಿಹೆನು ||
ಬೇಡಿಕೊಳ್ಳೈ ಹರಿಯನಾತನು |
ಮಾಡುವನು ಕರುಣೆಯನು, ಪೂರ್ವದಿ |
ಮಾಡಿರುವ ಕರ್ಮಗಳ ಫಲವನು ಮೀರಲಾರಳವೂ” ||೧೪||

ಎನುತೆನುತ ಕಣ್ಣೀರ ಸುರಿಸುತ |
ಮನದಿ ಕಳವಳ ಪಡುತಲಾತನ |
ಸನುಮತಿಸುತ್ತೈದಿದನು ವಿಶ್ವೇಶ್ವರನ ಮಂದಿರಕೆ ||
ಜನರ ಸಂದಣಿಯಲ್ಲಿ ತಾನತಿ |
ವಿನಯದಿಂದೊಳಗೈದಿ ದೇವರಿ |
ಗನುನಯದಿ ಪೊಡಮಟ್ಟು ಕಣ್ಣೀರಿಡುತ ಭಕ್ತಿಯಲಿ ||೧೫||

ಮರಳಿ ಬರುತಿರಲಲ್ಲಿ ನೆರೆದಿಹ |
ವರ ಸಭಾಪತಿ ಕಂಡು ವಿನಯದಿ |
ಕರೆವುತಾತನ ನಿತ್ತನವನಿಗೆ ವರದ ಪದಕವನು ||
ಅರಿಯದಲದೇನೆಂಬುದಾತನು |
ಕರದಿ ಪಿಡಿಯಲು, ಸಭಿಕರೆಲ್ಲರು,
ಹರುಷವಿಸ್ಮಯಗಳಲಿ ಬೆಪ್ಪಾಗಿರ್ದರೇನೆಂಬೆ || ೧೬||

ಕರದಿ ಪಿಡಿಯಲು, ಪದಕವಾತನು |
ಪರಮತೇಜಃಪುಂಜವಾಯಿತು |
ವರಸುವರ್ಣದ ವರ್ಣವುಜ್ವಲವಾಗಿ ಬೆಳಗಿದುದು ||
ಭರದಿ ಸಭಿಕರು ಬಂದು ವಿನಯದೊ |
ಳೆರಗಿ ಪೇಳಿದರಾಮಹಾತ್ಮಗೆ |
ಪರಮ ಮಹಿಮನ ವರದ ಪೂರ್ವಾಪರ ವಿಚಾರಗಳ ||೧೭||

ತಾತ್ಪರ್ಯ

ನೋಡಿ ವಸ್ತ್ರಾಭರಣ ಕಾಂತಿಯ |
ನೋಡಿ ಬಾಹ್ಯಾಚರಣೆ ನುಡಿಗಳ |
ಮಾಡದಿರು ನಿರ್ಣಯವನೀಂ ಸತ್ಪುರುಷರಿವರೆಂದು ||
ನೋಡು ಮೊದಲವರಂತರಂಗವ |
ನೋಡು ಬಳಿಕಾ ಜನರ ಕೃತ್ಯವ |
ಮಾಡದಿರು ನಿಂದೆಯನು ದೀನರ ಹೀನರಿವರೆಂದು ||೧೮||

ಜಗವನಾಳುವ ಭೂಪ ಭೂಸುರ |
ಸುಗುಣಿ ಸಜ್ಜನ ಸಾಧುಸಂತರ |
ಅಗಣಿತದ ಬಹಿರಂಗ ಕೀರ್ತಿಯು ಸತ್ಯವಾಗಿರದೆ ||
ಜಗದಿ ಜನಿಸಿದ ಸಕಲಮಾನವ |
ಖಗಮೃಗಾದಿಗಳನ್ನು ಪ್ರೀತಿಸಿ |
ಜಗದ ಪಾಲಕನಂತೆ ನಡೆವುದೆ ಪರಮಧರ್ಮವದು ||೧೯||
*****

Tagged:

Leave a Reply

Your email address will not be published. Required fields are marked *

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...