Home / ಕವನ / ಕವಿತೆ / ತುಂತುರುಗಳು

ತುಂತುರುಗಳು

ಪೋಪೋಪೆಡೆ ಹಿಟ್ಲರ ಪಡೆ
ಹಾಕಿದರೂ ಮಟ್ಟ
ಧೃತಿಗೆಡದಲೆ ಹೊಗೆಯುಗುಳುವ
ಚರ್ಚಿಲ್ಲನ ಚುಟ್ಟ;
ಜಡಿದರು ಮಳೆ, ಪೊತ್ತರು ಇಳೆ
ಉರಿಬಿಸಿಲಿನ ಕಾಟ
ವಿರಮಿಸುತಲಿ ಮಲಗುವ ಸೋ-
ಮಾರಿಯ ಸಿಗರೇಟ;
ಜ್ಞಾಪಿಸುವೊಲು ನಿಂತಿವೆ ಭ-
ದ್ರಾವತಿಯೊಳು, ರಮಣಿ
ಗಗನವನೇ ತಿನಿಯುವವೊಲು
ಹೊಗೆಯುಗುಳುವ ಚಿಮಣಿ!
* * *

“ಯಾವ ಅಟಾಮಿಕ್ಯು ಬಾಂಬು
ನನ್ನ ಮಂದೆ ನಿಲ್ವುದು?
ಯಾವ ಡೈನಮೈಟು ತಾನೆ
ನನ್ನ ಧುರದಿ ಗೆಲ್ವುದು?
ಯಾವುದಕ್ಕೊ ಈ ಜಗದಿ
ನನ್ನ ಮಾನ ಸಲ್ವುದು?”
ಎಂದು ವೃಥಾ ಕೂಗಿ ಕರಟ
ಆರ್ಭಟಿಸುತಲುರಿವುದು!
* * *

ಬಿಸಿನೀರ ಕಾವಿನಿಂ
ದವಳ ಮೊಗ ಕೆಂಪೇರಿ
ದುದ ಕಂಡು ನನ್ನ ಮನ ಕುದಿಯಿತಲ್ಲ!
ಬಿಸಿನೀರೆ! ನೀ ಧನ್ಯ!
ಅವಳ ಮೊಗವನು ನೀನು
ಮುತ್ತಿಟ್ಟು ಕೆಂಪೇರಿಸಿರುವೆಯಲ್ಲ!
* * *

“ಹಗಲು ಇರುಳು ನಾನು ಕಾದ
ಸವಿಯ ಹಣ್ಣ ತಿರುಳನು
ಸವಿದು ತಿಂಬರಲಾ ಜನರು
ಬಗೆಯುತೆನ್ನ ಕರುಳನು
ಹಾಳು ಜನರು ಕಾಲನಿಡಲಿ
ಕೈಯಕೊಡುವೆ” ನೆನ್ನುತ
ಬಾಳೆ ಹಣ್ಣ ಸಿಪ್ಪೆಯಿಹುದು
ರಸ್ತೆಯೊಳೇ ಕಾಯುತ!
* * *

“ಧೂಳು ಹಾರದಿರಲೆನುತ್ತ
ಟಾರ ರೋಡು ಹಾಕಿದ!
ಅಹುದು, ಒಪ್ಪಿಕೊಂಬೆ, ನನ್ನ
ನೇನೊ ಸೋಲ್ಗೆ ನೂಕಿದ!
ಆದರೇನು ಮಾಡಬಲ್ಲ?
ನಾನುಗುಳ್ವೆ ಕರಿಹೊಗೆ!”
ಎನುತದೊಂದು ಮುರುಕು ಕಾರು
ಸಾರುತಿತ್ತು ಊರಿಗೇ!
* * *

ಭೂತವಾದರು ಸರಿಯೆ ಮನುಜಗೆ
ಹೆದರಿ ನಿಲ್ಲದು ಅರೆಚಣ,
ಎಷ್ಟು ಧೈರ್ಯವೊ ಮೂಗ ಮೇಲೆಯೆ
ಬಂದು ಕೂರ್ವುದು ಈ ನೊಣ!

* * *
ಕರಿಯ ಹುಡುಗಿಯು ನಗಲು ಕಾಣುವ
ಬಿಳಿಯ ಹಲ್ಲಿನ ಮಿಂಚೊಲು
ಬೆಂಗಳೂರಿನ ಟಾರ ರೋಡೊಳು.
ಬೆಣಚು ಕಲ್ಲಿನ ಗೊಂಚಲು!
* * *

ಮರಗಳೆಲೆಯ ನಡುವೆ ಕಾಂಬ
ತುಂಬುವೆರೆಯ ಚೆಲುವಿಗೆ
ಸಾಟಿಯೇನು ಬರಿಯ ಕಣ್ಗೆ
ತೋರ್ವ ಚಂದ್ರಮಂಡಲ?-
ಒಡಲು ಕಂಡು ಕಾಣದಂಥ
ಅರ್ಧ ನಗ್ನ ಸುಂದರಿ
ಮನ ಸೆಳೆವೊಲು ಸೆಳೆವಳೇನು
ಪೂರ್ಣನಗ್ನ ರಮಣಿಯು!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...