ಬ್ರೆಡ್‌ಗೆ ಚೀಸ್ ಹಚ್ಚಿ ತಿನ್ನುವಾಗ
ಪಿಝಾಹಟ್‌ದಲ್ಲಿ ಕುಳಿತಾಗ
ಸ್ಟಾರ್ ಹೋಟೆಲಿನ ಮಂದ ಬೆಳಕಿನ ಜಾಝ್‌ದಲ್ಲಿ
ಶಾಪಿಂಗ್ ಮಳಿಗೆಯಲ್ಲಿ ಏ/ಸಿ ಕಾರಿನಲ್ಲಿ
ಇರುವಾಗಲೂ ಇಲ್ಲಿ
ಎಲ್ಲರೆದೆಯಲಿ ಹಕ್ಕಿಗಳೇನೇನೋ
ಮಾತಾಡುತ್ತವೆ.
ಏನೆಲ್ಲ ಐಶಾರಾಮಿ ಬದುಕು ವಿದೇಶಗಳಲಿ
ಆದರೂ ಮನಸು ಮನಸುಗಳಿಗೇಕೋ
ಒಂಟಿತನ ಆತಂಕ
ಕಳೆದು ಹೋಗುವ ಭಯ ತಲ್ಲಣ
ಇದ್ದಕ್ಕಿದ್ದಂತೆ ಒಮ್ಮೊಮ್ಮೆ ಮರಳಿ
ಊರಿಗೆ ಹೊರಟೇ ಬಿಡಬೇಕೆನ್ನುವ
ಉಮ್ಮಳ ಕೊನೆಗೆ
ನಮ್ಮ ನಾವೇ ಸಮಾಧಾನಿಸಿಕೊಳ್ಳುವ
ಸಂತೈಯಿಸಿಕೊಳ್ಳುವ ಎಲ್ಲದರ ಲೆಕ್ಖಾಚಾರ
ಸಮೃದ್ಧಿಯ ನಡುವೆಯೂ ಒಮ್ಮೊಮ್ಮೆ
ಮನಸು ಭಾರ ಮರುಭೂಮಿ.
ಹಬ್ಬ ಜಾತ್ರೆಗಳ ವಿಶೇಷತೆಗಳು
ಮದುವೆ ಗೃಹಪ್ರವೇಶಗಳ ಸಂಭ್ರಮ
ಸಂಬಂಧಿಕರ ಭೇಟಿ ಮಾತು – ಹರಟೆ
ತುಂಟ ಹುಡುಗರ ತುಂಟಾಟಗಳನೆಲ್ಲ ಹೊತ್ತ
ಅಂಚೆ ಪತ್ರಗಳು ಬರುತ್ತವೆ
ಮನಸು ಬೆಚ್ಚಗಾಗಿ ಕಣ್ಣು ಮಂಜಾಗುವುದು
ಎಲ್ಲದಕೂ ಸ್ಪರ್ಧೆ ಬಿಳಿಯರೊಂದಿಗೆ
ಆಫೀಸು ಶಾಲೆ ಕಾಲೇಜು ಎಲ್ಲೆಲ್ಲೂ-
ದೂರ ದೂರ ಇರಬೇಡಿ ದೇಶಬಿಟ್ಟು ಬಂದವರಿಲ್ಲಿ
ಜಾತಿ ಮತ ಭಾಷೆ ಯಾವುದಾದರೇನು
ಭಾರತೀಯರಲ್ಲವೇ ನೀವೆಲ್ಲ
ನಿಮ್ಮತನಕಾಗಿ ಒಗ್ಗೂಡಿ
ಹಕ್ಕಿಗಳೆಲ್ಲರೆದೆಯೊಳಗೆ ಗರಿಬಿಚ್ಚುತ್ತವೆ.
ಈಗ ವಾರಾಂತ್ಯದ ಪಾರ್ಟಿ, ಹಬ್ಬಗಳಿಗೆ
ಹಪಹಪಿಸುತ್ತೇವೆ.
ಕೊಳಲು, ಸಿತಾರ್, ಮೃದಂಗದವರು
ಜೋಕ್ಸ್, ಡಾನ್ಸ್, ಶಾಯರಿಯವರು
ದಸರಾ, ದೀಪಾವಳಿ ಪ್ರಿಯರು
ರೇಶ್ಮೆ ಸೀರೆ ಉಟ್ಟು ನಮಸ್ಕರಿಸುವವರು
ರಾಜಕೀಯ, ಇತಿಹಾಸ, ವಿಜ್ಞಾನ ತಂತ್ರಜ್ಞಾನಗಳ
ಚರ್ಚಿಸುವವರು ಎಲ್ಲ ಸೇರುತ್ತೇವೆ
ವಿದೇಶಿಗರನ್ನು ಆಹ್ವಾನಿಸಿ
ಸಂಸ್ಕೃತಿ, ಸಾಧನೆ ಬಿಂಬಿಸುತ್ತಿದ್ದಂತೆ
ಫೋಟೋಗಳು ಕ್ಲಿಕ್ ಆಗುತ್ತವೆ
ನಮ್ಮ ಐಡೆಂಟಿಟಿಗೆ ನಮಗೆ ಹೆಮ್ಮೆ
ಇನ್ನಷ್ಟೂ ವರ್ಷ ಇರಬೇಕೆನಿಸುತ್ತದೆ.
*****
ಪುಸ್ತಕ: ಇರುವಿಕೆ