
೧
ನೆನೆಯಲಾಗಿ ನಿಮಿ-
ಷಾರ್ಧದಲ್ಲಿ ಅನಿ-
ಮಿಷರ ಮೀರಿ ನೆಗೆ-
ಯುತ್ತ ಬಂದು ಈ
ಜೀವನಕ್ಕೆ ಜೀ-
ವನವನೆರೆದು ಸಂ-
ತೈಸುವಂಥ ಏ-
ಕಾಂತದೇಕ ಮಾ-
ತ್ರಾಧಿಕಾರಿ ಪ್ರೇ-
ಮಾವತಾರಿ ಮಮ
ಪ್ರಾಣದಾನಿ ಸಂ-
ಜೀವ ವರದ ಶ್ರೀ
ರಾಮಚಂದ್ರನಿಗೆ
ಓಂ ನಮೋ ನಮೋ!
೨
ತವಕದಿಂದ ಲವ-
ಲವಿಕೆಯೊಡನೆ ತಿಳಿ-
ವಳಿಕೆಯಿತ್ತು ತಿಳಿ
ತಿಳಿಸಿ ಹೇಳಿ ಅತಿ
ಹಿತದ ಸ್ಮಿತದ ಸವಿ
ಮಾತಿನಿಂದ ರಮಿ-
ರಮಿಸಿ ಮೇಲೆ ತಾ-
ನಪ್ಪಿ ಒಪ್ಪಿಸುವ
ಅ೦ತರಂಗದಧಿ-
ನಾಥ ನೂತ್ನ ಚೈ-
ತನ್ಯಚಾರಿ ಮಮ
ಚಿತ್ತ ಚೋರ ಶ್ರೀ
ರಂಗನಾಥನಿಗೆ
ಓಂ ನಮೋ ನಮೋ!
೩
ಇತ್ತ ಇತ್ತ ಒಂ-
ದೊಂದು ಮುತ್ತಿನೊಳ-
ನಾಡನಾಳುತಿಹ
ಚಿನ್ಮಯಾನಂದ-
ದಂತರಾಳದ ವಿ-
ಶಾಲ ವೈಭವ ವಿ-
ವಿಕಾಸ ಶೀಲ ಸುಂ
ದರ ಗಭೀರ ಗ೦-
ಭೀರ ಧೀರ ಚಾ-
ರಿತ್ರ್ಯ ಶಾಲಿ ಸೌಂ-
ದರ್ಯ ಧರ್ಮವಿದ
ಮಮ ಮನೋಹರಗೆ
ಶ್ರೀವಿನಾಯಕಗೆ
ಓಂ ನಮೋ ನಮೋ!
*****
















