ಪಾದರಕ್ಷೆಯ ಪುಣ್ಯ

ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಯಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ, ಮೊದಲಿನಂತೆಯೇ ಅವರನ್ನು ಸತ್ಕರಿಸಲು ನಿಶ್ಚಯಿಸಿದರು. ತಮ್ಮ ಮನೆಯೊಳಗಿನ ಒಂದು ಕೋಣೆಯಲ್ಲಿ ಗುರುಗಳು ಇಳಿದುಕೊಳ್ಳಲು ಏರ್ಪಡಿಸಿದರು. ಆದರೆ ಗುರುಗಳಿಗೆ ಬಿನ್ನಹಮಾಡಿ ದಕ್ಷಿಣೆಕೊಡಮಾಡುವುದು ಏತರಿಂದ – ಎಂದು ಆ ದಂಪತಿಗಳು ಯೋಚಿಸತೊಡಗಿದರು. ಅವರಿಗೊಂದು ಯುಕ್ತಿ ಹೊಳೆಯಿತು – “ಗುರುಗಳಿಗೆ ಪ್ರತ್ಯೇಕವಾದ ಒಂದು ಜೊತೆ ಚಮ್ಮಳಿಗೆಗಳಿವೆ. ಹೇಗಾದರೂ ಅವುಗಳನ್ನು ಅವರು ಉಪಯೋಗಿಸುವದಿಲ್ಲ. ಚೀಲದಲ್ಲಿ ಬಯತಿರಿಸಿರುತ್ತಾರೆ. ಅವುಗಳನ್ನು ಅವರಿಗೆ ಗೊತ್ತಾಗದಂತೆ ಒಯ್ದು ಮಾರಿ ಬಂದರಾಯಿತು. ತಕ್ಕಷ್ಟು ಹಣ ಬರುತ್ತದೆ. ಅದನ್ನೇ ಖರ್ಚು ಮಾಡಿ, ಗುರುಗಳಿಗೆ ಬಿನ್ನಹಮಾಡಿಸಿ ಮೇಲೆ ದಕ್ಷಿಣೆ ಕೊಡಬಹುದು.

ಗಂಟಿನಲ್ಲಿದ್ದ ಆ ಚಮ್ಮಳಿಗೆಗಳನ್ನು ಗುರುಗಳಿಗೂ ಅವರ ಸೇವಕನಿಗೂ ಗೊತ್ತಾಗದಂತೆ ಎತ್ತಿತಂದು ಕೊಟ್ಟವಳು ಹೆಂಡತಿ. ಅವುಗಳನ್ನು ಪೇಟೆಗೊಯ್ದು ಮಾರಿಕೊಂಡು ಮೂವತ್ತು ರೂಪಾಯಿ ತಂದವನು ಗಂಡ. ಆ ಬಳಿಕ ಗೋದಿ, ಅಕ್ಕಿ, ಬೇಳೆ, ಬೆಲ್ಲ, ಬೆಣ್ಣೆ, ಎಣ್ಣಿ ಮೊದಲಾದವುಗಳನ್ನು ಕೊಂಡುತಂದರು. ಗೊತ್ತು ಮಾಡಿದ ದಿವಸ ಹೂರಣಕ್ಕೆ ಹಾಕಿ ಹೋಳಿಗೆ ಮಾಡಿದರು. ತುಪ್ಪವಂತೂ ಬೆಣ್ಣೆ ಕಾಸಿದ್ದಿತ್ತು.

ಗುರುಗಳ ಸ್ನಾನ, ಪೂಜೆ ಆದ ಬಳಿಕ ಆ ದಂಪತಿಗಳು ಪಾದಪೂಜೆಗೆ ಕುಳಿತರು. ಅದು ಮುಗಿದ ಮೇಲೆ ಕರಣಪ್ರಸಾದ ತೆಗೆದುಕೊಂಡು ಗುರುಗಳಿಗೆ
ಉಣಬಡಿಸುವ ಏರ್ಪಾಡು ನಡೆಸಿದರು. ಹೋಳಿಗೆ – ತುಪ್ಪದ ಊಟದಿಂದ ಗುರುಗಳು ಸಂತೃಪ್ತರಾದರು. ಶಿಷ್ಯ ಮಕ್ಕಳು ಗುರುಗಳ ಕಾಲಿಗೆರಗಿ ಇಪ್ಪತ್ತು ರೂಪಾಯಿ ಗುರುದಕ್ಷಿಣೆಯಿಟ್ಟರು. ಗುರುಗಳಿಗೆ ಅತಿಶಯ ಆನಂದವಾಗಿ ಅವರ ಔದಾರ್ಯವನ್ನು ಹೊಗಳ ತೊಡಗಿದರು.

ಗಂಡಹೆಂಡಿರು ಕೈಮುಗಿದು – “ಅದೆಲ್ಲ ತಮ್ಮ ಪಾದರಕ್ಷೆಯ ಪುಣ್ಯ” ಎಂದು ವಿನಯಿಸಿದರು.

ಸೇವಕನನ್ನು ಕರೆದು ಗುರುಗಳು ಮುಂದಿನ ಪಯಣದ ಸಿದ್ಧತೆ ನಡೆಸಿದರು. ಗಂಡಹೆಂಡಿರನ್ನು ಕರೆದು ಅವರ ಭಕ್ತಿಯನ್ನೂ ಔದಾರ್ಯವನ್ನೂ ಕೊಂಡಾಡಿದರು. ದಂಪತಿಗಳಿಬ್ಬರೂ ಗುರುಗಳ ಕಾಲಿಗೆರಗಿ – ‘ತಮ್ಮ ಪಾದರಕ್ಷೆ ಯ ಪುಣ್ಯ’ ಎನ್ನುತ್ತ ಆಶೀರ್ವಾದ ಪಡೆದರು.

ಮುಂದಿನೂರು ತಲುಪಿ ಬೀಡು ಬಿಟ್ಟಾಗ ಗುರುಗಳು ತಮ್ಮ ಚಮ್ಮಳಿಗೆಗಳನ್ನು ಹುಡುಕಾಡಿದರೆ ಸಿಗಲೇ ಇಲ್ಲ. ಸೇವಕನನ್ನು ಕೇಳಿದರು – “ಎಲ್ಲಿ ಮಾಯವಾದವು?”

ಗುರುಗಳಿಗಂತೂ ಏನೂ ತಿಳಿಯಲಿಲ್ಲ. ಕೊನೆಗೆ ಸೇವಕನೇ ಅನುಮಾನಿಸುತ್ತ ನುಡಿದನು-

“ಹಿಂದಿನೂರಿನ  ಶಿಷ್ಯಮಕ್ಕಳು ಮಾತುಮಾತಿಗೆ ‘ತಮ್ಮ ಪಾದರಕ್ಷೆಯ ಪುಣ್ಯ’ ವೆನ್ನುತ್ತಿದ್ದರು. ಅವರೇ ಪುಣ್ಯಕಟ್ಟಿಕೊಂಡಂತೆ ಕಾಣುತ್ತದೆ.”

“ಗುರುದಕ್ಷಿಣೆ ಈ ಬಗೆಯಾಗಿ ಸಿಕ್ಕಿತೆನ್ನೋಣ – ಗುರುವಿನಿಂದ ದಕ್ಷಿಣೆ” ಎಂದರು ಗುರುಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೧೭
Next post ಪ್ರಜಾರಾಜ್ಯದ ಅಣಕಾಟ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…