Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಕ್ಟೋಬರ್ ೯, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಕ್ಟೋಬರ್ ೯, ೧೯೪೨

ಪ್ರಿಯ ಕಿಟಿ,

ಇವತ್ತು ನಿನಗೊಂದು ನಿರಾಸೆಯ ಸಂಗತಿಯ ಹೇಳುವುದಿದೆ. ನಮ್ಮ ಯಹೂದಿ ಮಿತ್ರರನ್ನೆಲ್ಲಾ ಗುಂಪು ಗುಂಪಾಗಿ ಎಳೆದೊಯ್ಯಲಾಗುತ್ತಿದೆ. ಒಂದು ಚೂರು ಕರುಣೆ ಇಲ್ಲದವರಂತೆ, ಗೆಸ್ಟಪೋ [ ನಾಝಿ ಸರಕಾರದಲ್ಲಿಯ ಸಿಕ್ರೇಟ್ ಪೋಲಿಸರು]ಗಳು ಇವರನ್ನಲ್ಲೆಲ್ಲಾ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ. ದನದ ಗಾಡಿಗಳಲ್ಲಿ ತುಂಬಿ ತುರುಕಿ, ವೆಸ್ಟರ ಬ್ರಾಕ್‌ನ ಡ್ರೆಂಟ್ ಎಂಬಲ್ಲಿಯ ಬೃಹತ್ ಯಹೂದಿ ಕ್ಯಾಂಪ್‌ಗಳಿಗೆ ರವಾನಿಸಲಾಗುತ್ತಿದೆ. ವೆಸ್ಟರ್‌ಬ್ರಾಕ್ ಹೆಸರು ಭಯ ಮೂಡಿಸುತ್ತೆ: ಶೌಚದ ಸಣ್ಣಕೋಣೆಯಲ್ಲಿ ನೂರಾರು ಜನರನ್ನು ತುರುಕಲಾಗುತ್ತದೆ. ಅಲ್ಲದೇ ಅಲ್ಲಿ ಬೇಕಾದಷ್ಟು ಶೌಚಾಲಯಗಳು ಇಲ್ಲ. ಪ್ರತ್ಯೇಕ ವಾಸದ ವ್ಯವಸ್ಥೆಗಳಿಲ್ಲ. ಎಲ್ಲ ಗಂಡು ಹೆಣ್ಣು, ಮಕ್ಕಳು ಎಲ್ಲರೂ ಒಂದೆ ಕಡೆ ನಿದ್ರಿಸಬೇಕು. ಇದರಿಂದಾಗಿ ಭಯಬೀಳಿಸುವಂತಹ ಅನೈತಿಕ ಸಂಗತಿಗಳ ಕೇಳಬೇಕಾಗಿದೆ. ಅಲ್ಲಿರುವ ಅನೇಕ ಮಹಿಳೆಯರು, ಮತ್ತು ಹುಡುಗಿಯರೂ ಕೂಡಾ ಯಾವ ಕ್ಷಣದಲ್ಲಾದರೂ ಗರ್ಭಿಣಿಯರಾಗಬಹುದು.

ಅಲ್ಲಿಂದ ಪಾರಾಗುವುದು ಕೂಡಾ ಅಸಾಧ್ಯವೇ. ಕ್ಯಾಂಪಿನಲ್ಲಿಯ ಬಹಳ ಜನರು ತಮ್ಮ ಬೋಳಿಸಿದ ತಲೆಯಿಂದ ಮತ್ತು ಕೆಲವರು ತಮ್ಮ ಯಹೂದಿ ಹೊರ ಚಹರೆಯಿಂದ ಕ್ಯಾಂಪಿನ ಜನರೆಂದು ಗೊತ್ತಾಗುತ್ತಿದ್ದರು.

ಹಾಲಂಡಿನಲ್ಲಿ ಕೂಡಾ ಇದು ಇಷ್ಟೇ ಕೆಟ್ಟದ್ದಾಗಿರಬಹುದೇನೋ? ದೂರದ ಮತ್ತು ಕ್ರೂರ ಪ್ರದೇಶಗಳಿಗೆ ಇಂತವರು ಕಳಿಸಲ್ಪಡುತ್ತಿರುವರೇನೋ? ಅವರಲ್ಲಿ ಬಹಳಷ್ಟು ಜನ ಕೊಲೆಗೀಡಾಗುತ್ತಿರಬಹುದೆಂದು ನಮ್ಮ ಊಹೆ. ಇವರನ್ನೆಲ್ಲಾ ಉಸಿರುಗಟ್ಟಿಸಿ ಕೊಲ್ಲಲಾಗುತ್ತಿದ್ದ ಸಂಗತಿಯನ್ನು ಇಂಗ್ಲಿಷ ರೇಡಿಯೋ ಪ್ರಸಾರಮಾಡುತ್ತದೆ.

ಬಹುಶಃ ಇದು ಸಾಯಿಸಲು ಇರುವ ಶೀಘ್ರ ಮಾರ್ಗ.ನಾನು ತುಂಬಾ ವಿಚಲಿತಗೊಂಡಿದ್ದೇನೆ. ಮೇಪ್ ಈ ಎಲ್ಲಾ ಕಣ್ಣೀರಿನ ಕಥೆಗಳನ್ನು ಹೇಳುವಾಗ ನನ್ನ ಕಣ್ಣೀರು ಬತ್ತಿ ಹೋಗಿತ್ತು. ಆಕೆ ಕೂಡಾ ನನ್ನಷ್ಟೇ ಘಾಸಿಗೊಂಡಿದ್ದಳು. ಮೊನ್ನೆ ಮೊನ್ನೆಯ ಉದಾಹರಣೆ, ಒಬ್ಬ ವಯಸ್ಸಾದ ಬಡ ಯಹೂದಿ ಹೆಂಗಸೊಬ್ಬಳು ತನ್ನ ಮನೆಬಾಗಿಲ ಬಳಿ ಕುಳಿತಿದ್ದಳು: ಆಕೆಗೆ ಅಲ್ಲಿಯೇ ಕಾಯುವಂತೆ ಹೇಳಿ ಗೆಸ್ಟಪೋಗಳು ಆಕೆಯನ್ನು ಕರೆದೊಯ್ಯಲು ಕಾರು ತರಲು ಹೋಗಿದ್ದರು. ಆಕಾಶದಲ್ಲಿ ಹಾರುತ್ತಿದ್ದ ಇಂಗ್ಲಿಷ ವಿಮಾನಗಳ ಕಡೆ ಶೂಟ್ ಮಾಡುತ್ತಿದ್ದ ಗನ್‌ಗಳು , ಸರ್ಚ ಲೈಟ್‌ಗಳ ಕಣ್ಣು ಕೋರೈಸುವ ಬೆಳಕು ಇವುಗಳನ್ನೆಲ್ಲಾ ಕಂಡು ಆ ಬಡ ಮುದುಕಿ ವಿಪರೀತ ಹೆದರಿದ್ದಳು. ಆದರೆ ಮೇಪ್‌ಗೆ ಆಕೆಯನ್ನು ಕರೆದುಕೊಂಡು ಹೋಗಿ ರಕ್ಷಿಸಲು ಆಗಲಿಲ್ಲ. ಅಲ್ಲಿ ಆ ಸಮಯದಲ್ಲಿ ಆ ಧೈರ್ಯ ಯಾರಿಗೂ ಇರಲಿಲ್ಲ. ಜರ್ಮನ್ನರು ಸ್ವಲ್ಪವೂ ಕರುಣೆ ಇಲ್ಲದಂತೆ ಹೊಡೆ ಬಡಿಯುತ್ತಲೇ ಇದ್ದರು. ಎಲಿ ವೊಸನ್ ಕೂಡಾ ತಟಸ್ಥಳಾಗಿದ್ದಾಳೆ. ಆಕೆಯ ಬಾಯ್‌ಫ್ರೆಂಡ್ ಜರ್ಮನಿಗೆ ಹೋಗಬೇಕಾಗಿದೆ. ತಮ್ಮ ಮನೆಗಳ ಮೇಲೆ ಹಾರಾಡುವ ವಿಮಾನಗಳಲ್ಲಿಯ ಯೋಧರು ಎಲ್ಲಾದರೂ ಮಿಲಿಯನ್ ಕೀಲೋ ತೂಕದ ಬಾಂಬಗಳನ್ನು ಈ ಡರ್‍ಕನ ತಲೆ ಮೇಲೆ ಎಸೆದು ಬಿಟ್ಟರೆ ಎಂದು ಆಕೆ ಹೆದರಿದ್ದಾಳೆ. ಆತ ಮಿಲಿಯನ್ ಬಾಂಬುಗಳನ್ನು ಸಹಿಸಲಾರ ಆದರೆ ಒಂದೇ ಒಂದು ಸಾಕು ಎಂಬ ಜೋಕು ಸಪ್ಪೆಯೆನಿಸುತ್ತದೆ. ಡರ್‍ಕ ಮಾತ್ರ ಹೋಗುತ್ತಿಲ್ಲ. ಟ್ರೇನ್‌ಗಟ್ಟಲೆ ಹುಡುಗರನ್ನು ಪ್ರತಿನಿತ್ಯ ಕರೆದೊಯ್ಯಲಾಗುತ್ತದೆ. ದಾರಿ ಮಧ್ಯೆ ಎಲ್ಲಿಯಾದರೂ ಟ್ರೇನು ನಿಂತರೆ ಕೆಲವೊಮ್ಮೆ ಈ ಹುಡುಗರು ಕೆಲವರು ಅಲ್ಲಿಂದ ಗೊತ್ತಿಲ್ಲದಂತೆ ಪಾರಾಗುವರು. ಅದರಲ್ಲಿ ಕೆಲವರು ಮಾತ್ರ ಯಶಸ್ವಿಯಾಗುವರು. ಹಾಗೆಂದು ಇದೇ ನಾನು ಕೇಳಿದ ಕೊನೆಯ ಕೆಟ್ಟ ಸುದ್ದಿಯಲ್ಲ. ನೀನೆಂದಾದರೂ ಒತ್ತೆಯಾಳುಗಳ ಕುರಿತಾಗಿ ಕೇಳಿದ್ದೆಯಾ? ಅದು ವಿಧ್ವಂಸಕಕ್ಕೆ ಇರುವ ಇತ್ತೀಚಿನ ಹೊಸ ಶಿಕ್ಷೆ. ಅದರಂತಹ ದಾರುಣವಾದ ಸಂಗತಿಯನ್ನು ನೀನು ಊಹಿಸಬಲ್ಲೆಯಾ?

ಪ್ರಮುಖ ಪ್ರಜೆಗಳು, ಮುಗ್ಧ ಜನರುಗಳೆಲ್ಲಾ ತಮ್ಮ ಅದೃಷ್ಟವನ್ನು ಕಾಯುತ್ತ ಕೂರುವಂತೆ ಸೆರೆಮನೆಯಲ್ಲಿ ದೂಡಲಾಗುತ್ತದೆ. ವಿಧ್ವಂಸಕ್ಕೆ ಕಾರಣರಾದವರು ಸಿಗದೇ ಹೋದಲ್ಲಿ ಈ ಗೆಸ್ಟಪೋಗಳು [ ನಾಝೀ ಪೋಲಿಸರು] ಒಂದೈದು ಒತ್ತೆಯಾಳುಗಳನ್ನು ಗೋಡೆಗೆ ಹಿಡಿದು ಜಜ್ಜಿ ಸಾಯಿಸುತ್ತಾರೆ. ಅವರ ಸಾವಿನ ಸುದ್ದಿ ಸಂಗತಿಗಳು ಆಗಾಗ ಪೇಪರುಗಳಲ್ಲಿ ಬರುತ್ತಲೇ ಇರುತ್ತದೆ. ಇಂತಹ ಉದ್ರಿಕ್ತ ಕ್ರಮವನ್ನು ಆಕಸ್ಮಿಕ ದುರ್ಘಟನೆ ಎಂದು ಬಣ್ಣಿಸಲಾಗುತ್ತದೆ. ಜರ್ಮನ್‌ರು ಅದೆಷ್ಟು ಒಳ್ಳೆಯವರು. ಒಂದು ಕಾಲಕ್ಕೆ ನಾನೂ ಅವರಲ್ಲಿ ಒಬ್ಬಳಾಗಿದ್ದೆ ಎಂಬುದನ್ನು ಯೋಚಿಸಿದರೆ! ಇಲ್ಲ, ಹಿಟ್ಲರ್ ನಮ್ಮ ರಾಷ್ಟ್ರೀಯತೆಯನ್ನು ಬಹು ಹಿಂದೆಯೇ ಕಸಿದುಕೊಂಡಿದ್ದಾನೆ. ಜರ್ಮನ್‌ರು ಮತ್ತು ಯಹೂದಿಗಳು ಇಂದು ಜಗತ್ತಿನಲ್ಲಿ ಬದ್ಧ ವೈರಿಗಳು.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...