Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಸೋಮವಾರ, ಸೆಪ್ಟೆಂಬರ ೨೮, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಸೋಮವಾರ, ಸೆಪ್ಟೆಂಬರ ೨೮, ೧೯೪೨

ಪ್ರೀತಿಯ ಕಿಟಿ,

ನಿನ್ನೆ ಎಲ್ಲ ಹೇಳಿಮುಗಿಸುವ ಮೊದಲೇ ನಾನು ನಿಲ್ಲಿಸಬೇಕಾಗಿತ್ತು. ನಾನಿಂದು ನಿನಗೆ ಇನ್ನೊಂದು ಕಲಹದ ಬಗ್ಗೆಯೇ ಹೇಳಬೇಕು. ಅದಕ್ಕೆ ಮುಂಚೆ ಇದನ್ನು ಕೇಳು.

ಯಾಕೆ ದೊಡ್ಡವರು ಅಷ್ಟು ಸುಲಭವಾಗಿ, ಅದೂ ಅಲ್ಲದೇ ತೀರಾ ಅಲ್ಪ ಸಂಗತಿಗಳಿಗೆ ಸಿಕ್ಕಾಪಟ್ಟೆ ಜಗಳವಾಡುತ್ತಾರೆ? ಇಲ್ಲಿಯವರೆಗೆ ನಾನು ಚಿಕ್ಕಮಕ್ಕಳು ಮಾತ್ರ ಜಗಳವಾಡುವರು ಎಂದುಕೊಂಡಿದ್ದೆ. ಬೆಳೆದಂತೆ ಆ ಗುಣ ಹೊರಟುಹೋಗುತ್ತದೆ ಎಂತಲೂ ಅಂದುಕೊಂಡಿದ್ದೆ. ಖಂಡಿತವಾಗಿ ಅಲ್ಲಿ ಜಗಳಕ್ಕೆ ನಿರ್ದಿಷ್ಟ ಕಾರಣ ಇರುತ್ತದೆ. ಆದರೆ ಇವರದು ಕಾಲು ಕೆರೆದು ಮಾಡುವ ಜಗಳ. ನಾನು ಅವರಂತೆ ಜಗಳವಾಡುವುದನ್ನು ಕಲಿಯಬೇಕು ಎನ್ನಿಸುತ್ತಿದೆ. ಆದರೆ ಈ ಹೆಚ್ಚಿನ ವಾದಗಳಿಗೆಲ್ಲ ನಾನೇ ವಸ್ತುವಾಗಿರುವವರೆಗೂ ನಾನು ಹಾಗೆ ಮಾಡಲಾಗದೇನೋ ಅಥವಾ ನನಗೆ ಹಾಗೆ ಜಗಳವನ್ನು ಆಡಲು ಬರದು. [ಈ ದೊಡ್ಡವರು ಜಗಳಕ್ಕೆ ಚರ್ಚೆ ಎಂದೇ ಕರೆಯುವರು] ನನ್ನ ಕುರಿತ ಅವರಲ್ಲಿಯ ಅಭಿಪ್ರಾಯ ಯಾವುದೊಂದೂ ಸರಿಯಿಲ್ಲ. ನನ್ನ ಹೊರಚಹರೆ, ನಡತೆ, ಸ್ವಭಾವ ಎಲ್ಲವೂ ಎ ದಿಂದ ಝೆಡ್‌ವರೆಗೂ ಚರ್ಚೆಗೆ ಗುರಿಯಾಗಿವೆ. ಎಲ್ಲ ಕಠೋರ ನುಡಿಗಳನ್ನು, ಬೈಗುಳಗಳನ್ನು ನಾನು ಸುಮ್ಮನಿದ್ದು ಸಹಿಸಿಕೊಳ್ಳಬೇಕೆಂಬ ನಿರೀಕ್ಷೆ ಅವರದು. ಆದರೆ ಅದು ನನಗೆ ಅಭ್ಯಾಸವಿಲ್ಲ. ಅದು ನನ್ನಿಂದಾಗದು. ಈ ಎಲ್ಲ ಅಪಮಾನಗಳನ್ನು ಸಹಿಸಿಕೊಳ್ಳಲು ನಾನಿಲ್ಲ. ಆನ್ ಫ್ರಾಂಕ್ ನಿನ್ನೆ ಮೊನ್ನೆ ಹುಟ್ಟಿಲ್ಲ ಎಂಬುದನ್ನು ಅವರಿಗೆ ತೋರಿಸುವೆ. ಆನಂತರವಾದರೂ ಅವರು ಅಚ್ಚರಿಗೊಳ್ಳಬಹುದು. ಮತ್ತು ನಾನವರಿಗೆ ಪಾಠ ಹೇಳಿಕೊಡುತ್ತಿದ್ದೇನೆ ಎಂದು ಗೊತ್ತಾದ ಮೇಲಾದರೂ ಅವರೆಲ್ಲ ತಮ್ಮ ಬಾಯಿಗಳನ್ನು ಹೊಲಿದುಕೊಳ್ಳಬಹುದು. ಹಾಗೇ ವರ್ತಿಸಲೇ? ತೀರಾ ಅನಾಗರಿಕತೆ! ನನಗಂತೂ ಶ್ರೀಮತಿ ವ್ಯಾನ್ಡ್ಯಾನ್‌ರ ಹೇಸಿಗೆ ಭರಿಸುವ ಅದರಲ್ಲೂ ಮೂರ್ಖ ಸ್ವಭಾವಗಳನ್ನು ಪದೇ ಪದೇ ನೋಡಿ ನೋಡಿ ಸಾಕಾಗಿದೆ. ನಾನು ಅವರಂತೆ ವರ್ತಿಸಲು ಶುರು ಮಾಡುತ್ತೇನೇನೋ? ಆ ದಿನ ಕೂಡಾ ದೂರವಿಲ್ಲ ಅನಿಸುತ್ತದೆ. ಅವರು ಕೊಟ್ಟಿದ್ದನ್ನೆ ಅವರಿಗೆ ಮರಳಿ ಕೊಡುವೆ. ಅದೂ ಸೇರಿಗೆ ಸವ್ವಾಸೇರಿನಷ್ಟು. ಆನಂತರವಾದರೂ ಅವರು ತಮ್ಮ ರಾಗ ಬದಲಾಯಿಸಬಹುದು.

ನಿಜಕ್ಕೂ ನಾನಷ್ಟು ಕೆಟ್ಟ ಸ್ವಭಾವದವಳೇ? ಅವರೆಲ್ಲ ಹೇಳುವಂತೆ ದುರಹಂಕಾರದ, ಮೊಂಡ ಬುದ್ದಿಯ, ಮೂರ್ಖ, ಆಲಸಿ, ಇತ್ಯಾದಿ ಇತ್ಯಾದಿ? ಇಲ್ಲ ಖಂಡಿತ ಇಲ್ಲ. ಉಳಿದವರಲ್ಲಿ ಇರುವಂತೆ ನನ್ನಲ್ಲಿಯೂ ದೋಷಗಳಿವೆ. ಅದು ನನಗೆ ಗೊತ್ತು. ಇವರುಗಳು ಸುಮ್ಮನೇ ಇದ್ದದ್ದನ್ನೆಲ್ಲಾ ಉತ್ಪ್ರೇಕ್ಷೆ ಮಾಡಿ ತೋರಿಸುವರು.

ಕಿಟಿ, ನಿನಗೆ ಗೊತ್ತಲ್ಲ. ಎಷ್ಟೋ ಸಂದರ್ಭಗಳಲ್ಲಿ ನಾನೆಷ್ಟು ಅವಹೇಳನ ಗೇಲಿಗಳಿಂದ ಕುದಿಯುವೆ ಎಂದು. ನನ್ನ ಕೋಪವನ್ನು ಎಷ್ಟು ದಿನಗಳರೆಗೆ ಅದುಮಿಡಬಲ್ಲೆ ಎಂಬುದು ನನಗೆ ಗೊತ್ತಿಲ್ಲ. ಖಂಡಿತ ಒಂದು ದಿನ ಅದು ಸ್ಪೋಟವಾಗುತ್ತೆ.

ಇನ್ನು ಹೆಚ್ಚಿನದೇನಿಲ್ಲ. ಈ ಕಲಹಗಳ ಬಗ್ಗೆ ಹೇಳಿ ಹೇಳಿ ನಿನಗೆ ಬೇಸರಗೊಳಿಸಿರಬೇಕು ನಾನು. ಆದರೆ ಇನ್ನೊಂದು ಬಹಳ ಕುತೂಹಲದ ಚರ್ಚೆಯ ಕುರಿತು ನಿನಗೆ ಹೇಳುವೆ. ಅದು ಊಟದ ಟೇಬಲ್ಲಿನ ಮೇಲೆ ನಡೆದ ವಿಚಾರ. ಅದು ಹೇಗೋ ನಾವು ಪಿಮ್‌ನ [ ಡ್ಯಾಡಿಯ ನಿಕ್ ನೇಮದು] ಅತಿಯಾದ ವಿನಯದ ಕುರಿತು ಮಾತಾಡತೊಡಗಿದೆವು. ತೀರಾ ಅಂದರೆ ತೀರಾ ಮೂರ್ಖರು ಮಾತ್ರ ಡ್ಯಾಡಿಯ ಬಗ್ಗೆ ಈ ವಿಚಾರ ಒಪ್ಪಬಹುದು. ಆ ತಕ್ಷಣ ಶ್ರೀಮತಿ ವ್ಯಾನ್ಡ್ಯಾನ್ ಹೇಳಿದರು “ನನ್ನದು ನನ್ನ ಗಂಡನಿಗಿಂತ ಕೊಂಚ ಹೆಚ್ಚೇ ಸೌಮ್ಯ ಸ್ವಭಾವ.”

ನೀನೆಂದಾದರೂ ಹೀಗೆ ಪ್ರಯತ್ನಿಸಿದ್ದೆಯಾ! ಶ್ರೀಮತಿ ವ್ಯಾನ್ಡ್ಯಾನ್ ಎಷ್ಟು ಚೆನ್ನಾಗಿ ಎಲ್ಲರ ಮುಂದೆ ತನ್ನನ್ನು ತೋರಿಸಿಕೊಳ್ಳಲು ಪ್ರಯತ್ನಿಸಿದಳು ಎಂಬುದನ್ನು ಈ ಮಾತು ತೋರಿಸುತ್ತದೆ. ಆದರೆ ವ್ಯಾನ್ಡ್ಯಾನ್‌ರಿಗೆ ಈ ಸಂಬಂಧ ತನ್ನ ಕುರಿತಾಗಿ ವಿವರಣೆ ನೀಡುವುದು ಸೂಕ್ತವೆಂದು ಅನ್ನಿಸಿರಬೇಕು. ನಾನು ತುಂಬಾ ವಿನಮ್ರದವನಾಗಲು ಬಯಸುವುದಿಲ್ಲ.- ನನ್ನ ಅನುಭವದ ಪ್ರಕಾರ ಇದೇನನ್ನು ನನಗೆ ತಂದುಕೊಡುವುದಿಲ್ಲ. ಎಂದು ಹೇಳಿ ನನ್ನ ಕಡೆ ತಿರುಗಿ ನನ್ನ ಮಾತು ಕೇಳು, ಆನ್, ನೀನು ಕೂಡಾ ತೀರಾ ಸೌಜನ್ಯದ ಮೂರ್ತಿಯಾಗಲು ಹೋಗಬೇಡ. ಅದು ನಿನಗೇನೂ ತಂದುಕೊಡುವುದಿಲ್ಲ ಅಂದರು.

ಅಮ್ಮ ಈ ಮಾತನ್ನು ಒಪ್ಪಿದರು. ಆದರೆ ಶ್ರೀಮತಿ ವ್ಯಾನ್ಡ್ಯಾನ್ ಯಾವಾಗಲೂ ತಮ್ಮ ಮೂಗಿನ ನೇರಕ್ಕೆ ಯೋಚಿಸುವವರು. ಅವರ ಮುಂದಿನ ರಿಮಾರ್ಕಗಳು ಡ್ಯಾಡಿ ಮತ್ತು ಮಮ್ಮಿಯ ಕುರಿತು, ಬದುಕಿನ ಬಗ್ಗೆ ನಿಮ್ಮದು ವಿಚಿತ್ರವಾದ ದೃಷ್ಟಿಕೋನ. ಆನ್‌ಳ ವಿಲಕ್ಷಣತೆ ಸಹ ಅದನ್ನೇ ಹೇಳುತ್ತೆ. ನಾನು ಚಿಕ್ಕವಳಿದ್ದಾಗ ಎಲ್ಲವೂ ಬೇರೆಯೇ ಆಗಿತ್ತು. ಮತ್ತು ನನಗೆ ಸ್ಪಷ್ಟವಾಗಿದ್ದೆಂದರೆ ಇಂದಿನ ನಿಮ್ಮ ಆಧುನಿಕ ಮನೆಯಲ್ಲಿಯೂ ಇಂತಹದ್ದು ಕಾಣುತ್ತಿಲ್ಲ. ಎಂದರು. ಇದು ಮಮ್ಮಿ ತನ್ನ ಮಕ್ಕಳನ್ನು ಬೆಳೆಸುತ್ತಿರುವುದರ ಕುರಿತು ಆಕೆಯ ನಕಾರಾತ್ಮಕ ಮಾತಿನ ಧಾಳಿಯಾಗಿತ್ತು.

ಆ ಕ್ಷಣ ಶ್ರೀಮತಿ ವ್ಯಾನ್ಡ್ಯಾನ್ ಕೋಪದಿಂದ ಕೆಂಪಾಗಿದ್ದರು. ಅದೇ ಮಮ್ಮಿ ಶಾಂತ, ಪ್ರಶಾಂತವಾಗಿದ್ದರು. ಅತಿ ಉಮೇದು ಉತ್ಸುಕತೆಗೆ ಹುಚ್ಚಾಗುವ ಜನ ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ ತೀರಾ ವೈಕಲ್ಯಕ್ಕೆ ಒಳಗಾಗುವರು. ಆದರೆ ಮಮ್ಮಿ ಒಂದಿನಿತೂ ಕ್ಷೆಭೆಗೊಂಡಿರಲಿಲ್ಲ. ಬದಲಿಗೆ ಆದಷ್ಟು ಬೇಗ ಈ ಚರ್ಚೆಗೆ ಪೂರ್ಣವಿರಾಮ ಹಾಕಲು ಕಾಯುತ್ತಿದ್ದರು. ಅವರೆಂದರು ಶ್ರೀಮತಿ ವ್ಯಾನ್ಡ್ಯಾನ್, ನನಗದು ಗೊತ್ತು. ಜೀವನದಲ್ಲಿ ಪ್ರತಿಯೊಬ್ಬನೂ ವಿನಮ್ರನಲ್ಲದವನೂ ಕೂಡಾ ಒಳ್ಳೆಯ ಹೆಸರನ್ನು ಗಳಿಸಬಹುದು. ನನ್ನ ಗಂಡ, ಮಾರ್‍ಗೊಟ್ ಮತ್ತು ಪೀಟರ್ ಇವರೆಲ್ಲ ಬಹಳಷ್ಟು ವಿನಯಶೀಲರು. ಅದಕ್ಕೆ ಹೊರತಾಗಿ ನಿನ್ನ ಗಂಡ, ಆನ್, ನೀನು ಮತ್ತು ನಾನು ಅವರಿಗೆ ತದ್ವಿರುದ್ಧವೇನಲ್ಲ. ಹಾಗಾಗಿ ನಮ್ಮನ್ನು ನಾವು ಸಂಪೂರ್ಣವಾಗಿ ಹೀಗೆ ಎಂದು ಅಂದುಕೊಳ್ಳಬಾರದು. ಎಂದೊಡನೆ, ಶ್ರೀಮತಿ ವ್ಯಾನ್ಡ್ಯಾನ್ ಶ್ರೀಮತಿ ಫ್ರಾಂಕ್, ನೀವು ನನಗೆ ಅರ್ಥವೇ ಆಗುತ್ತಿಲ್ಲ. ನಾನಿಷ್ಟು ನಮ್ರ ಸಜ್ಜನಿಕೆಯವಳಾಗಿದ್ದು ನೀವು ಅದು ಹೇಗೆ ನನ್ನನ್ನು ಹಾಗೆ ಕರೆಯಬಹುದೆಂದು ಯೋಚಿಸಿದಿರಿ.?

ಮಮ್ಮಿ ಹೇಳಿದರು “ನೀವು ತುಂಬಾ ಮೇಲೆ ಬಿದ್ದು ಹೋಗುವವರೆಂದು ನಾನು ಹೇಳಲಿಲ್ಲ. ಆದರೆ ನೀವು ತೀರಾ ನಮ್ರ ಪ್ರವೃತ್ತಿಯವರೆಂದು ಯಾರೊಬ್ಬರು ಹೇಳಿರಲಿಕ್ಕಿಲ್ಲ.”

ಶ್ರೀಮತಿ ವ್ಯಾನ್ಡ್ಯಾನ್ “ಈ ಸಂಗತಿಯನ್ನು ಇಲ್ಲಿಯೇ ಈ ಕ್ಷಣಕ್ಕೆ ಇತ್ಯರ್ಥ್ಯಗೊಳಿಸೋಣ. ನನಗೆ ಗೊತ್ತಾಗಬೇಕು. ನಾನ್ಯವ ರೀತಿಯಲ್ಲಿ ಹಕ್ಕು ಸ್ಥಾಪಿಸುವ ಗುಣದವಳೆಂದು, ಆದರೆ ನನಗೊಂದು ವಿಚಾರ ಚೆನ್ನಾಗಿ ಗೊತ್ತು. ನಾನು ನನ್ನ ಬಗ್ಗೆ ಕಾಳಜಿ ಮಾಡಿಕೊಳ್ಳದಿದ್ದರೆ ನಾನು ಬೇಗನೇ ಉಪವಾಸ ಬೀಳಬೇಕಾಗುವುದು ಎಂಬುದು” ಎಂದರು.

ಅವರು ತಮ್ಮ ಸ್ವರಕ್ಷಣೆಯ ಕುರಿತಾಗಿ ಹೇಳಿದ ಈ ಅಸಂಬದ್ಧ ಟೀಕೆಗಳು ಮಮ್ಮಿಯನ್ನು ಗಹಗಹಿಸಿ ನಗುವಂತೆ ಮಾಡಿದವು. ಮಮ್ಮಿಯ ನಗು ಅವರನ್ನು ಇನ್ನಷ್ಟು ಕೆರಳಿಸಿದವು. ಶ್ರೀಮತಿ ವ್ಯಾನ್ಡ್ಯಾನ್ ಜರ್ಮನ್-ಡಚ್, ಡಚ್-ಜರ್ಮನ್ ಅಭಿವ್ಯಕ್ತಿಯ ರೀತಿಯಲ್ಲಿ ತಮ್ಮ ಗಂಟಲು ಕಟ್ಟುವವರೆಗೂ ಸಿಟ್ಟಿನಿಂದ ಸಿಡಿಸುತ್ತಲೇ ಇದ್ದರು. ಆನಂತರ ತಮ್ಮ ಕುರ್ಚಿಯಿಂದೆದ್ದು ಇನ್ನೇನು ಕೋಣೆಯಿಂದ ನಿರ್ಗಮಿಸುತ್ತಾರೆ ಎನ್ನುವಾಗಷ್ಟೇ ಅಕಸ್ಮಾತ್ತಾಗಿ ಅವರ ದೃಷ್ಟಿ ನನ್ನ ಮೇಲೆ ಬಿತ್ತು. ಅವರ ಮುಖಭಾವವನ್ನು ನೀನು ಆಗ ನೋಡಬೇಕಿತ್ತು!!

ದುರಾದೃಷ್ಟಕ್ಕೆ ಅವರು ಸುತ್ತಲೂ ತಿರುಗಿ ನಿಂತ ಆ ಕ್ಷಣ ನಾನು ನನ್ನ ತಲೆಯನ್ನು ಅಲ್ಲಾಡಿಸುತ್ತಾ ಇದ್ದೆ. ದುಃಖದಿಂದ. ಅದು ನಿರ್ದಿಷ್ಟ ಉದ್ದೇಶಕ್ಕಾಗಿರಲಿಲ್ಲ. ಹೀಗೆ ಸುಮ್ಮನೇ ಉದ್ದೇಶರಾಹಿತ್ಯವಾಗಿ ಇಡೀ ಸಂಭಾಷಣೆಯನ್ನು ತೀರಾ ಸೂಕ್ಷ್ಮವಾಗಿ ಅವಲೋಕಿಸುತ್ತಿರುವಂತೆ ಇದ್ದೆ.

ಶ್ರೀಮತಿ ವ್ಯಾನ್ಡ್ಯಾನ್ ಪುನಃ ಸುತ್ತಲೂ ತಿರುಗುತ್ತಾ ಕೆಟ್ಟ ಒರಟಾದ ಜರ್ಮನ್ ಬೈಗುಳಗಳ ಶುರುವಿಟ್ಟುಕೊಂಡರು., ಅದು ಒಬ್ಬ ಬಜಾರಿ ಹೆಂಗಸಿನಂತೆ.- ಅದೊಂದು ಅಪೂರ್ವ ದೃಶ್ಯವಾಗಿತ್ತು. ನನಗೆ ಚಿತ್ರಿಸಲು ಬರುತ್ತಿದ್ದರೆ ಅವರನ್ನು ಹಾಗೇ ಚಿತ್ರಿಸಲು ಬಯಸುತ್ತಿದ್ದೆ. ತೀರಾ ಕಳಪೆ ವ್ಯಕ್ತಿಯಂತೆ ಮೂರ್ಖತನದ, ಅವಿವೇಕದ ಕಿರುಚಾಟವಾಗಿತ್ತು ಆಕೆಯದು.

ಏನೇ ಇರಲಿ ನಾನೊಂದು ವಿಚಾರ ಕಲಿತಿದ್ದೇನೆ. ಜನರೊಂದಿಗೆ ಉತ್ತಮ, ಬೆಸುಗೆ ಬಾಂಧವ್ಯ ಇದ್ದಾಗಲೇ ನೀವು ಅವರನ್ನು ಅರಿತುಕೊಳ್ಳಲು ಸಾಧ್ಯ. ತದನಂತರವಷ್ಟೇ ನೀವು ಅವರ ನಿಜವಾದ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...