ಒಬ್ಬಾಕೆ ಹೆಣ್ಣು ಮಗಳಿದ್ದಳು. ಆಕೆ ನೀರು ಹೊಯ್ದುಕೊಂಡಿದ್ದಳು. ಅವರ ಮನೆಯಲ್ಲಿ ನಾಯಿಯೂ ಗಬ್ಬವಾಗಿತ್ತು. ತವರು ಮನೆಯವರು ಬುತ್ತಿತಂದರು. ನಾಯಿ ತನ್ನಲ್ಲೇ ಅಂದುಕೊಂಡಿತು – ಈಕೆ ಉಂಡ ಒಂದು ಅಗುಳಾದರೂ ನನಗೆ ಹಾಕಿದರೆ ಅದನ್ನೇ ನಾನು ತಿನ್ನುತ್ತೇನೆ. ಆದರೆ ಆ ಹೆಣ್ಣುಮಗಳದೇ ಒಂದು ಛಲ – ಈ ನಾಯಿಗೆ ಯಾಕೆ ಹಾಕಲಿ ತಿನ್ನಲಿಕ್ಕೆ? ಅದು ಹೀಗೇ ಉಪವಾಸ ಬೀಳಲಿ – ಎಂದು, ಎಮ್ಮೆಗೆ ಮುಸುರಿ ನೀರುಮಾಡಿ ಕುಡಿಸಿದಳು.
ನಾಯಿಗೆ ಸಂತಾಪವಾಗುತ್ತದೆ. ನನ್ನ ಮರಿ ಅವಳಿಗೆ ಹುಟ್ಟಲಿ, ಅವಳ ಕೂಸು ನನಗೆ ಹುಟ್ಟಲಿ – ಎಂದು ಅವಳಿಗೆ ಶಪಿಸುತ್ತದೆ. ಮುಂದೆ ಒಂಬತ್ತು ತಿಂಗಳು ತುಂಬಿದಾಗ ನಾಯಿಗೆ ಅವಳಿಜವಳಿ ಹೆಂಗೂಸು ಹುಟ್ಟಿದವು. ಹೆಣ್ಣುಮಗಳಿಗೆ ಎರಡು ನಾಯಕುನ್ನಿಗಳು ಹುಟ್ಟಿದವು.
ಒಂದು ತಗ್ಗಿನಲ್ಲಿ ನಾಯಿ ಈದಿತ್ತು. ಯಾರದೋ ಮನೆಯಿಂದ ರೊಟ್ಟಿಯನ್ನು ಕದ್ದುಕೊಂಡು ತಂದಿತು. ಇನ್ನೊಂದು ಮನೆಯಿಂದ ಅಂಗಿ ಕುಲಾಯಿ ಕದ್ದುಕೊಂಡು ತಂದಿತು. ಹೂಗಾರರ ತೋಟಕ್ಕೆ ಹೋಗಿ ಅವರು ಯಾರಿಂದಲೋ ಬೇಡಿತಂದ ಮುತ್ತಿನ ಕುಲಾಯಿ ಎತ್ತಿಕೊಂಡು ತಂದಿತು. ಅವಳಿಜವಳಿ ಹೆಣ್ಣುಮಕ್ಕಳು ಬೆಳೆದು
ದೊಡ್ಡವರಾದರು.
ಪ್ರಧಾನಿಯೊಡನೆ ರಾಜನು ಸಂಚಾರಕ್ಕೆ ಹೊರಟಿದ್ದನು. ಪ್ರಧಾನಿಯ ಕಣ್ಣು ಆ ಇಬ್ಬರ ಮೇಲೆಯೂ ಬಿದ್ದಿತು. ರಾಜನಿಗೆ ಹೇಳುತ್ತಾನೆ – “ಹುಡುಗಿಯರು ಚೆಲುವಾಗಿದ್ದಾರೆ. ಗವಿಯೊಳಗೆ ಇರುವರಂತೆ. ನೋಡೋಣ ಬನ್ನಿ.”
ರಾಜನೊಂದಿಗೆ ಗವಿಗೆ ಹೋಗಿ, ಅಲ್ಲಿ ಇಬ್ಬರೂ ಅಕ್ಕತಂಗಿಯರನ್ನು ಮಾತನಾಡಿಸುತ್ತಾನೆ – “ತಂಗೆಂದಿರೇ, ನಿಮ್ಮೂರು ಯಾವುದು ? ನಿಮ್ಮ ತಾಯಿಯ ಹೆಸರೇನು?”
“ಇದೇ ನಮ್ಮೂರು. ನಾಯಿಯೇ ನಮ್ಮ ತಾಯಿ” ಎಂದವರ ಮರುನುಡಿ.
“ನಮ್ಮೊಡನೆ ಬರುವಿರಾ?” ಎಂದು ಪ್ರಧಾನಿ ಕೇಳಲಿ, ಹಿರಿಯಳು – “ಬರುವೆನು ನಡೆಯಿರಿ” ಅನ್ನುತ್ತಾಳೆ. “ಈಗ ಹೋಗೂದು ಬೇಡ. ಅವ್ವ ಬಂದ ಬಳಿಕ ಅವಳನ್ನು ಕೇಳಿ ಹೋಗಾರಿ” ಎಂದು ಕಿರಿಯವಳು ಅಂದಳು. ಆದರೆ ಹಿರಿಯವಳು ಹೊರಟೇಬಿಡುತ್ತಾಳೆ, “ನೀನೊಬ್ಬಾಕೆ ಹೋದಮೇಲೆ ನಾಯೇಕೆ ಇರಬೇಕಿಲ್ಲಿ” ಎಂದು ಕಿರಿಯವಳೂ ಹೊರಟಳು.
ಅಕ್ಕತಂಗಿಯರು ರಾಜನ ಮನೆಯವರೆಗೆ ಮುತ್ತುಗಳನ್ನು ಚೆಲ್ಲುತ್ತ ಹೋದರು. ಸಣ್ಣಾಕೆ ಪ್ರಧಾನಿಯನ್ನೂ, ದೊಡ್ಡಾಕೆ ರಾಜನನ್ನೂ ಲಗ್ನವಾದರು. ಮುತ್ತು ಅರಮನೆಗೆ ಬರುವತನಕ ಸಾಕಾದವು. ಮುಂದೆ ಪ್ರಧಾನಿಯ ಮನೆಯವರೆಗೆ ಮುತ್ತು ಚೆಲ್ಲಲಿಕ್ಕಾಗಲಿಲ್ಲ.
ನಿತ್ಯದಂತೆ ನಾಯಿ ತೋಟಕ್ಕೆ ಬಂತು. ಆದರೆ ಹೆಣ್ಣುಮಕ್ಕಳಿಬ್ಬರೂ ಇರಲಿಲ್ಲ. ಗಾಬರಿಯಾಗಿ ಮುತ್ತು ಚೆಲ್ಲಿದ ದಾರಿಹಿಡಿದು ಅರಮನೆಯವರೆಗೆ ಹೋಯಿತು.
ದೊಡ್ಡಾಕೆ ಈಗ ರಾಣಿಯಾಗಿದ್ದಾಳೆ. ಆದರೆ ನಾಲ್ಕು ಜನರ ಮುಂದೆ ನಾಯಿಗೆ ತಾಯಿ ಅನ್ನಲಿಕ್ಕೆ ತಯಾರಿಲ್ಲ. ತಾಯಿಯ ಗುರುತು ಹಿಡಿದರೂ ಅದನ್ನು ಹೊಡೆದು ಹಾಕಬೇಕೆಂದು ವಿಚಾರಿಸಿದಳು. ರಾಜನು ಸಹ ಹಾಗೇ ಆಗಲೆಂದು ಹೇಳಿ, ನಾಯಿಯನ್ನು ಹೊಡೆದು ತಗ್ಗಿನಲ್ಲಿ ಹಾಕಿಸಿಬಿಟ್ಟನು. ನಾಯಿಯನ್ನು ಹೊಡೆದು ಹಾಕಿದ ಹೆಣ್ಣು ಮಗಳು ಅದೆಷ್ಟು ಪಾಪಿ ಎಂದು ಜನ ಮಾತಾಡಿತು.
ಅದೇ ಊರಲ್ಲಿ ಸಣ್ಣಮಗಳೂ ಇದ್ದಳು. ತಂಬಿಗೆ ತಗೊಂಡು ಹೊರಟಾಗ, ತಗ್ಗಿನಲ್ಲಿ ಬಿದ್ದದ್ದು ತನ್ನ ತಾಯಿಯೇ ಎಂದು ಗುರುತಿಸಿದಳು. ನಾಯಿಯ ಎಲುವುಗಳನ್ನೆಲ್ಲ ಸಂಗ್ರಹಿಸಿ ತಂದು ಸಂದುಕಿನಲ್ಲಿಟ್ಟಳು.
ದಿನ ಕಳೆದಂತೆ ರಾಜನ ಸಂಪತ್ತೆಲ್ಲ ನಾಶವಾಗಿ ಹೋಯಿತು. ಪ್ರಧಾನಿಯ ಪರಿಸ್ಥಿತಿಯು ಮಾತ್ರ ಉತ್ತಮವಾಯಿತು. ಸಂದುಕಿನಲ್ಲಿಟ್ಟ ಎಲುವುಗಳೆಲ್ಲ ಬಂಗಾರದ ಚಡಿ ಹಾಕಲಾರಂಭಿಸಿದವು. ಒಂದೊಂದು ಬಂಗಾರದ ಚಡಿಯನ್ನು ಹೊರಗೊಯ್ದು ತಮಗೆ ಬೇಕಾದ ಸಾಮಾನು ತರಹತ್ತಿದರು. ಸುಖ ಸಮೃದ್ಧಿ ತುಂಬಿ ಹೊರಸೂಸತೊಡಗಿತು.
ಅಕ್ಕನು ತಂಗಿಯ ಮನೆಗೆ ಹೋದಾಗ “ನಿಮ್ಮ ಈ ಸಂಪತ್ತಿಗೇನು ಕಾರಣ” ಎಂದು ಕೇಳುತ್ತಾಳೆ.
“ನೀ ಹೊಡಿಸಿ ಹಾಕಿಸಿದಂಥ ನಮ್ಮ ತಾಯಿಯ ಎಲುವುಗಳನ್ನೆಲ್ಲ ತಂದು ಸಂದುಕಿನಲ್ಲಿ ಇಟ್ಟೆ. ಅವು ದಿನಾಲು ಒಂದು ಬಂಗಾರದ ಚಡಿ ಕೊಟ್ಟವು” ಎಂದು ಹೇಳಿದಳು ತಂಗಿ.
ಅಕ್ಕ ತನ್ನ ಮನೆಗೆ ಹೋಗಿ, ಯಾವುದೋ ನಾಯಿಯನ್ನು ತರಿಸಿ ಹೊಡಿಸುತ್ತಾಳೆ. ಅದರ ಎಲುವುಗಳನ್ನೆಲ್ಲ ಮನೆಗೊಯ್ದು ಇಡುತ್ತಾಳೆ. ಮುಂದೆ ಕೆಲವೊಂದು ದಿನಗಳ ತರುವಾಯ ನೋಡುವಲ್ಲಿ ಆ ಎಲುವುಗಳೆಲ್ಲ ಪುಡಿಪುಡಿಯಾಗಿದ್ದವು. ಅಲ್ಲದೆ ಕೊಳೆತು ಹುಳು ತುಂಬಿದ್ದವು.
“ನೀನು ತಾಯಿಯನ್ನು ಕೊಂದು ಪಾಪಮಾಡಿದೆ. ಅದರ ಫಲವನ್ನು ನೀನೇ ಉಣ್ಣಬೇಕಾಗುತ್ತದೆ.” ಎಂದು ನಾಲ್ಕು ಜನರು ಬುದ್ದಿ ಹೇಳಿದರು ಆಕೆಗೆ.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು