ನೀನೆನ್ನ ಹೊಸತಿಲಿಗೆ ದುಃಖದೊಲು ಬಂದರೂ
ನನ್ನ ತೋಳ್-ತಳ್ಕೆಯಲಿ ಹಿಡಿಯುವಾಸೆ;
ನಿನ್ನ ಶ್ರೀಮುಖದಲ್ಲಿ ಇರುಳ ಕುರುಳಿನ ಛಾಯೆ
ಇಳಿದರೂ ನಿನ್ನನ್ನು ನೋಡುವಾಸೆ.
ನಿನ್ನ ತೋಳಿನ ಬಲದ ಮರಣ ವಜ್ರಾಘಾತ
ಬಂದರೂ ಈ ಬಾಳು ಪ್ರಜ್ವಲಿಸಲಿ;
ಎದೆಯ ಒಳಗೂಡಿನಲಿ ನೋವು ದನಿಗೈದರೂ
ನೀನು ನನ್ನವನೆಂದೆ ನುಡಿಯುತಿರಲಿ.
ನನ್ನ ಕಣ್ಣಂಚಿನಲಿ ಹರಿವ ಗಂಗಾ ಯಮುನೆ
ಕೆಳಗಿನೆದೆ ನಾಡಿನಲಿ ಸಂಗಮಿಸಲಿ;
ಎನಿತು ಹರಿದರು ಕೂಡ ನಿನಗೆ ಪ್ರಾರ್ಥನೆ ಸಲ್ಲಿಸಿ
ಪಾದ ಪರಿಸರದಲ್ಲಿ ಸುತ್ತುತಿರಲಿ.
*****
ರವೀ೦ದ್ರರ `Crossing’ 24














