ಒಬ್ಬ ಸಾಧಕ ದೈವವನ್ನು ಹುಡುಕಿ ಹೊರಟಿದ್ದ. ದಾರಿಯಲ್ಲಿ ಪೂಜಾರಿ ಸಿಕ್ಕ. ಪೂಜಾರಿಯ ಹತ್ತಿರ ಕೇಳಿದ- “ದೈವ ಎಲ್ಲಿದೆ?” ಎಂದು.
“ಅದು ಮಂದಿರದಲ್ಲಿ ಇರುವ ವಿಗ್ರಹದಲ್ಲಿ”- ಎಂದ. ಸಾಧಕನಿಗೆ ಉತ್ತರ ತೃಪ್ತಿ ಕೊಡಲಿಲ್ಲ.
ಮುಂದೆ ಹೋಗುತ್ತ-ಒಬ್ಬ ವ್ಯಾಪಾರಿ ಎದುರಾದ. ಅವನನ್ನು ಉದ್ದೇಶಿಸಿ “ದೈವ” ಎಲ್ಲಿದೆ ಗೊತ್ತೆ?” ಎಂದ “ಇದೊ ನನ್ನ ಬೆನ್ನು ಮೇಲಿನ ಮೂಟೆಯಲ್ಲಿದ್ದಾನೆ” ಎಂದ. ಏನೋ ಒಗಟಂತಿದೆ ಉತ್ತರ ಎಂದು ಮುಂದೆ ನಡೆದ. ಹೋಗುತ್ತಿರುವಾಗ ಒಂದು ಗೃಹಸ್ಥ ಎದುರಾದ.
“ತಮಗೆ ದೈವ ಎಲ್ಲಿದೆ ಗೊತ್ತಿದೆಯೇ?” ಎಂದು ಕೇಳಿದ. “ದೇವರ ಮನೆಯಲ್ಲಿ ಫೋಟೊದಲ್ಲಿದೆ” ಎಂದ ಗೃಹಸ್ಥ. ಫೋಟೋದಲ್ಲಿ ದೈವವನ್ನು ಬಂಧಿಸಿಡಲು ಸಾಧ್ಯವಿಲ್ಲವೆಂದುಕೊಳ್ಳುತ್ತ ಮುಂದೆ ನಡೆದ.
ಸಾಗರ ತಟದಲ್ಲಿ ಒಬ್ಬ ಮೀನುಗಾರ ಮೀನುಹಿಡಿಯುತ್ತಿದ್ದ. “ದೈವ ಎಲ್ಲಿ ಇದೆ ಗೊತ್ತೇ?”ಎಂದ ಸಾಧಕ.
“ಇದೊ ಜಾಲದಲ್ಲಿ” ಎಂದು ಮೀನುಗಳನ್ನು ತೋರಿಸಿದ. ಮನಸ್ಸಿಗೆ ಸಮ್ಮತವಾಗಲಿಲ್ಲ.
ಮುಂದೆ ನಡೆಯುತ್ತಾ ಕಾಡು ಸೇರಿದ. ವೃಕ್ಷದಲ್ಲಿ ಹಕ್ಕಿ ಹಾಡುತ್ತಿತ್ತು. “ಹಕ್ಕಿ, ಹಕ್ಕಿ, ದೈವ ಎಲ್ಲಿದೆ ಗೊತ್ತಾ?” ಎಂದ.
“ನನ್ನ ಜೆಂಟಿ ರೆಕ್ಕೆಯಲ್ಲಿ” ಎಂದು ಹೇಳಿತು.
ಅವನಿಗೆ ಏನೂ ಅರ್ಥವಾಗಲಿಲ್ಲ. ಒಂದು ಅತಿ ದೊಡ್ಡ ವೃಕ್ಷದಡಿ ನಿಂತು, ಮತ್ತೆ ಅದೇ ಪ್ರಶ್ನೆ ಕೇಳಿದ. ವೃಕ್ಷ ಹೇಳಿತು “ದೈವ ಬೇರಿನಲ್ಲಿದೆ” ಎಂದಿತು.
ಕಾಡು ಮುಗಿದಾಗ ಬೆಟ್ಟ, ಎದುರಾಯಿತು. “ಬೆಟ್ಟವೇ? ನಿನಗೆ ದೈವದ ಗುಟ್ಟು ಗೊತ್ತಾ?”ಎಂದು ಕೇಳಿದ.
“ನನ್ನ ಶಿಖರದಲ್ಲಿ ಅಭಿಷಕ್ತವಾಗಿರುವ ಮೌನವೇ ದೈವ” ಎಂದಿತು.
ಬೆಟ್ಟ ಗುಡ್ಡ ದಾಟಿ ವಿಶ್ರಮಿಸಿಕೊಳ್ಳಲು ಒಂದು ತೋಟಕ್ಕೆ ಬಂದ. ಅಲ್ಲಿ ವಿಧವಿಧ ಹೂ ಹಣ್ಣಿನ ಗಿಡ ಮರಗಳು ಇದ್ದವು.
ಮಾವಿನ ಮರದಡಿ ನಿಂತು ಕೇಳಿದ “ದೈವ ಎಲ್ಲಿದೆ ಗೊತ್ತೇ?” ಎಂದು.
“ಒಂದು ಹಣ್ಣು ಕಿತ್ತಿ ತಿನ್ನು ದೈವದ ರುಚಿ ಸವಿಯುವ ದೈವ ಕಾಣುವೆ” ಎಂದಿತು. ಸಾಧಕ ಹಣ್ಣನ್ನು ಕಿತ್ತು ತಿಂದು ಸಂತಸಗೊಂಡ.
ಒಂದು ಹೂವಿನ ಬಳಿ ಬಂದು ಮತ್ತೆ ಅದೇ ಪ್ರಶ್ನೆ ಕೇಳಿದ.
“ನನ್ನ ನಗುವಿನಲ್ಲಿ, ನನ್ನ ಗಂಧದಲ್ಲಿ ದೈವ” ಎಂದಿತು. ಮಧುರ ಪರಿಮಳವನ್ನು ಆಘ್ರಾಣಿಸಿ ಮತ್ತಷ್ಟು ಸಂತಸ ಗೊಂಡ.
ಅಲ್ಲೇ ಇದ್ದ ತಿಳಿ ಕೊಳವನ್ನು ಮತ್ತೆ ಅದೇ ಪ್ರಶ್ನೆ ಕೇಳಿದ. “ಬೊಗಸೆ ನೀರು ಕುಡಿ ದೈವವ ಸವಿ” ಎಂದಿತು ತಿಳಿ ಕೊಳ.
ಅಷ್ಟರಲ್ಲಿ ಮುಪ್ಪಡಿರಿದ ತೋಟ ಮಾಲಿ ಬಂದ. ಕೊನೆಗೆ ಇವನನ್ನೂ ಕೇಳಿಬಿಡುವ ಎಂದು ಮತ್ತೆ ಅದೇ ಪ್ರಶ್ನೆ ಕೇಳಿದ.
“ಅಯ್ಯೋ! ದೈವಕ್ಕಾಗಿ ಇಷ್ಟು ಹುಡುಕಾಡಬೇಕೆ? ದೈವ ಎಲ್ಲೆಲ್ಲೂ ಇದೆ. ನಿನ್ನಲ್ಲಿ, ನನ್ನಲ್ಲಿ, ಇಡೀ ಜಗದಲ್ಲಿ ಪ್ರಕೃತಿಯಲ್ಲಿ ವಿಕೃತಿಯಲ್ಲ” ಎಂದಾಗ ಸಾಧಕನ ಕಣ್ಣು ತೆರೆಯಿತು.
*****