ಬುದ್ಧನ ಮಾಡಿ
ಹೇಗಾದರು ಮಾಡಿ
ಮರದಿಂದ ಮಾಡಿ
ಮಣ್ಣಿಂದ ಮಾಡಿ
ಕಲ್ಲಿಂದ ಮಾಡಿ
ಹುಲ್ಲಿಂದ ಮಾಡಿ
ದಂತದಿಂದ ಮಾಡಿ
ಚಂದ್ರಕಾಂತದಿಂದ ಮಾಡಿ
ಬುದ್ಧನೆಂದರೆ ಬುದ್ಧ
ಮಾಯಾದೇವಿಯ ಕನಸು ಬುದ್ಧ
ಶುದ್ಧೋದನನ ನನಸು ಬುದ್ಧ
ಯಶೋಧರಾ ಬುದ್ಧ
ರಾಹುಲ ಬುದ್ಧ
ಗೌತಮ ಬುದ್ಧ
ಸಿದ್ದಾರ್ಥ ಬುದ್ಧ
ಸಕಲ ಪದಾರ್‍ಥ ಬುದ್ಧ
ಅಂಗಳ ದಾಟಿದ ಬಯಲು ದಾಟಿದ
ನದೀ ದಾಟಿದ ಬೆಟ್ಟ ದಾಟಿದ
ಒಂದಡಿಯಲ್ಲೆ ಎಲ್ಲ ದಾಟಿದ
ಎಲ್ಲ ದಾಟಿದವನೆ ಮರಳಿ ಬಂದವನು
ಎಲ್ಲರನ್ನೂ ಎದೆಗೆತ್ತಿಕೊಂಡವನು
ಕರವ ನೋಡಿರಿ ಅಭಯಹಸ್ತ
ಕಣ್ಣ ನೋಡಿರಿ ಕಾರುಣ್ಯಪೂರ್‍ಣ
ಅಧರ ನೋಡಿರಿ ಮಂದಹಾಸ
ಶಿರ ಕೋಟಿ ಸೂರ್‍ಯಪ್ರಕಾಶ
ಅಂಥ ಬುದ್ಧನಿಗೆ ಶರಣು
ಬುದ್ಧ ಶರಣಂ
*****