ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ
ಮೋಹಿಸುವುದೇ ಒಂದು ತೆವಲು
ಬದುಕ ಮೋಹಿಸುತ್ತೇವೆ
ಬದುಕಲು ಮೋಹಿಸುತ್ತೇವೆ,
ಮೋಹದಿಂದಲೇ ಉಸಿರು ಅದರಿಂದಲೇ ಬಸಿರು
ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು
ಬರೆಯುವುದನ್ನು ಮೋಹಿಸದೇ ಹಡೆಯುವುದು
ಹೇಗೆ? ಅಕ್ಷರ ಮೂಡುವುದು ಹೇಗೆ?
ಪದಕ್ಕೆ ಪದ ಜೊತೆಯಾಗಿ ಪಾದವಾಗುವುದು ಹೇಗೆ?
ಅರ್‍ಥ ಹುಟ್ಟುವುದು ಹೇಗೆ? ಅರ್ಥವೆನ್ನುತ್ತಲೇ
ನೆನಪಾಯಿತು ಅರ್ಥಶಾಸ್ತ್ರ
ಬದುಕೆಲ್ಲಾ ಅರ್ಥಶಾಸ್ತ್ರವೇ
ಕೂಡಿ ಕಳೆದು ಲೆಕ್ಕ ಹಾಕಿ
ಗುಣಿಸಿ ಬಾಗಿಸಿ ಬಂದ ಶೇಷದಿಂದ
ಒಂದಿಷ್ಟು ಹೊಸ ಉಸಿರು
ಮೋಹಿಸದಿದ್ದರೆ ನಾವು ಈ ಭೂಮಿ
ಈ ಬಾನು ಈ ನೆಲ ಈ ಆಕಾಶ
ಈಜುವುದು ಹೇಗೆ ಈ ಭವಸಾಗರ
ಈಸಬೇಕು ಇದ್ದ ಜೈಸಬೇಕು ನಡೆದಿದೆ ಉಪದೇಶ,
ದಡ ಕಾಣುವುದು ಹೇಗೆ?
ಮನುಷ್ಯರು ಮನುಷ್ಯರ ಮುಖ ನೋಡುವುದು ಹೇಗೆ?
ಮೋಹಿಸು ಎಂದು ಅದೇ ಹೆತ್ತ ಮಗು
ಹೇಳುತ್ತಿದ ಅಳುತ್ತಿದೆ ಗಾರ್‌ಗಾರ್ ಕೇಳಿಸದೇ
ಕೇಳಿಸದಿದ್ದರೆ ಜಗತ್ತೇ ಅತ್ತಂತೆ.
ಮೃತ್ಯು ಹೊಂಚು ಹಾಕಿ ಕುಳಿತಿದೆ
ಹಾವಿನ ಹೆಡೆಯ ನೆರಳಿನ ಕಪ್ಪೆ.
ಬದುಕಿರುವಷ್ಟು ದಿನ ಮೋಹಿಸುತ್ತೇವೆ
ಮೋಹಿಸುವುದರಿಂದಲೇ ಬದುಕುತ್ತೇವೆ
“ಇಲ್ಲವಾದರೇನಿದೆ ಇಲ್ಲಿ ಕಣ್ಣು ಕೀಳುವ
ಸೂಜಿ ಕೊಲುವ ಬಡಿಗೆ” ಅದರಡಿಗೇ
ಮದ್ದು ಗುಂಡು ರಕ್ತಪಾತ ಆಸ್ಪತ್ರೆ
ಔಷಧ ಪರಿಹಾರ ಚೆಕ್ಕು ಹಣ
ಸಾಗಿದೆ ಸಾಲಾಗಿ ಹೆಣ!
ಕಿತ್ತ ಕೈ ಕಾಲುಗಳು, ಚೆಲ್ಲಾಡಿದ
ಸರ ಬಳೆ ಕೈ ಚೀಲಗಳು
ಇವನ್ನೆಲ್ಲಾ ನಿಲ್ಲಿಸಲು ನೀವೂ ಮೋಹಿಸಿ
ಕೈಗೆ ಬಂದ ಬಂದೂಕನ್ನು ಮೇಲೆತ್ತುವ ಮೊದಲು
ಯುದ್ಧ ಘೋಷಿಸುವ ಮೊದಲು,
ಗಡಿಗಳಿಗೆ ತಂತಿ ಬಿಗಿಯುವ ಮೊದಲು
ಶವಪೆಟ್ಟಿಗೆ ಖರೀದಿಸುವ ಮೊದಲು
ಒಂದಿಷ್ಟು ಮೋಹಿಸಿ.
*****