ಘಟ್ಟದ ತಗ್ಗಿನ ಮಳೆ ಜಡಿಯಹತ್ತಿತ್ತು. ಮುರುಕಲು ಛತ್ರಿ ಹಿಡಿದು ಆಷ್ಟ ಮಠಗಳ ಕೋಟೆಗೆ ನುಗ್ಗಿ, ಪೇಜಾವರ ಯತಿವರ್ಯರ ಸಂದರ್ಶನ ಬಯಸಿ ಅವರ ದಿವಾನ್‌ಖಾನೆಗೆ ಅಡಿಯಿಟ್ಟೆ. ಹಿರಿಕಿರಿ ವಟುಗಳ ಮಧ್ಯೆ ಹಲಸಿನ ಹಪ್ಪಳ ಹುರಿಗಾಳು ಮೆಲ್ಲುತ್ತಾ ಯತಿಗಳು ವಿರಾಜಮಾನರಾಗಿದ್ದರು. ಧಡಾರನೆ ಅಡ್ಡ ಬೀಳದೆ ಕೈ ಜೋಡಿಸಿ ವಂದಿಸಿದ ಮಾತ್ರದಿಂದಲೇ ನನ್ನ ಪುರ್ವಾಪರವನ್ನು ಜ್ಞಾನಚಕ್ಷುಗಳಿಂದರಿತ ಯತಿಗಳು, `ಕುತ್ಕೊಳ್ಳಿ… ಪೇಪರ್ನವರೇನ್ರಿ?’ ಎಂದು ಬಿರುನೋಟ ಬೀರಿದರು.
ತಲೆಯಾಡಿಸಿ ಕುಂತೆ.
“ಯಾವ ಪೇಪರಿನೋರ್ರಿ?”
“ಲಂಕೇಶ್ ಪತ್ರಿಕೆ ”
“ಸಂತೋಷ …… ಆದರೆ?” ಗಡ್ಡ ಕೆರೆದುಕೊಂಡರು.
“ಆದರೆಂತದು ಸ್ವಾಮಿ?”
“ಲಂಕೇಶ್ ವೈಕುಂಠ ವಾಸಿಗಳಾದ ಮೇಲೆ ನಾವು ಆ ಪತ್ರಿಕೆ ಓದುವುದನ್ನೇ ಬಿಟ್ಟು ಬಿಟ್ಟಿದ್ದೇವೆ”
“ಹ್ಹಿಹಿಹಿ. ತಾವು ಹಂಗೆ ಹೇಳಿದ್ರೆಂಗೆ ಸ್ವಾಮಿ. ಇತ್ತೀಚೆಗೆ ಒಂದೆರಡು ಸಲ ಪತ್ರಿಕೆ ಟೀಕೆ ಮಾಡಿದಾಗ ಪ್ರತಿಕ್ರಿಯಿಸಿದ್ದೀರಿ”
“ಇರಬಹುದು ಮರೆತುಹೋಗಿದೆ” ಪೇಜಾವರ ದೇಶಾವರಿ ನಗೆ ಬೀರಿದರು. “ಸರಿಸರಿ ಬಂದ ವಿಷಯ?” ದಿಟ್ಟಿಸಿದರು.
“ತಮ್ಮ ಫನ ಸಂದರ್ಶನಕ್ಕಾಗಿ” ಅಂದೆ.
“ಹೇಳದೆ ಇರತಕ್ಕಂದ್ದನ್ನೆಲ್ಲಾ ಬರಿತಿರಾ ಕಣ್ರಿ ಆದರಿಂದ ಶ್ಯಾನೆ ನೋವಾಗುತ್ತಯ್ಯ”
“ಎಂದಾದರೂ ಹಾಗೆ ಬರೆದದ್ದುಂಟೆ ಯತಿವರ್ಯ?”
“ನೀವಲ್ಲದಿರಬಹುದು. ಒಟ್ಟಾರೆ ಪತ್ರಿಕೆಯವರ ಸಹವಾಸವೇ ಡೇಂಜರ್ರು… ಅಂದ್ಹಾಗೆ ನಿಮ್ಮ ನಾಮಧೇಯ?”
“ಕೊಳಲು ಅಂತಾರೆ”
“ಓಹ್! ನಮ್ಮ ಕೃಷ್ಣನ ಕೈಲಿ ಸಾ ಇರುತ್ತೆ. ಅಪಸ್ಪರ ಬಾರದಂತೆ ಕೇಳಬಹುದು” ಅಪ್ಪಣಿಸಿದರು. ಶುರು ಹಚ್ಚಿಕೊಂಡೆ.
“ಥೇಟ್ ಬಾಬರಿ ಮಸೀದಿ ಕೆಡವಿದಂಗೆಯಾ ಕನಕ ಗೋಪುರಾನೂ ಉಲ್ಡಿಸಿದ ಬಗ್ಗೆ ಒಂದೆರಡು ಮಾತು ಐತೆ ಸ್ವಾಮಿ” ಚೀಲ ತಡಕಿ ಪೆನ್ನು, ನೋಟ್ ಬುಕ್ಕು ಎತ್ತಿಕೂಂಡೆ.
“ನಿಲ್ಲಿಸಿ, ಬಾಬರಿ ಮಸೀದಿ ಕೆಡ್ಣವಿಸಿದ್ದು ನಾನಲ್ಲವೆಂದು ನೂರಾ ಎಂಟನೇ ಬಾರಿ ಹೇಳಿ ಆಗಿದೆ. ಕೆಡವೂದನ್ನು ತಡೆಗಟ್ಟಲು ಯತ್ನಿಸಿದೋರು ನಾವ್ರಿ”
“ಮಸೀದಿ ಉಲ್ಡಿಕೊಂಡಾಗ ಚಪ್ಪಾಳೆ ತಟ್ಟಿದಿರಂತಲ್ಲ?”
“ನಿಲ್ಲಿಸಿ ಕೆಡವದಿರಿ ಎಂದು ಗಮನ ಸೆಳೆಯಲು ಚಪ್ಪಾಳೆ ತಟ್ಟಿದ್ದುಂಟು”
“ಮಸೀದಿ ಬಿದ್ದಾಗ ಆನಂದ ಭಾಷ್ಪ ಸುರಿಸಿದಿರಂತೆ?.’
“ಯದ್ ಭಾವಂ ತದ್ ಭವತಿ…. ಅದು ಆನಂದ ಭಾಷ್ಪ ಅಲ್ಲ.. ಕಣ್ಣೀರು ಅಷ್ಟೆ”
“ಹೊಕ್ಕಳ್ಳಿ ಬಿಡಿ ಸ್ವಾಮಿ. ಓಲ್ಡ್ ಮ್ಯಾಟರೆಲ್ಲಾ ಯಾಕೆ? ಕನಕಗೋಪುರ ಉರುಳಿಸಿದ ನ್ಯೂ ಮಾಟರ್ಗೆ ಬರೋಣ”
“ಅದೂ ಓಲ್ಡ್ ಮ್ಯಾಟರ್ರೇ ಕಣ್ರಿ. ಕಟ್ಟಿ ಆಯಿತಲ್ಲ ಮತ್ತೆ ಯಾಕ್ರಿ ಆ ಮಾತು? ಹಾಗೆ ನೋಡಿದ್ರೆ ಅದು ಕನಕಗೋಪುರವೇ ಆಗಿರಲಿಲ್ಲ ನಿಮ್ಮಂತಹವರು ಕುರುಬ ಜನಾಂಗದ ತಲೆ ಕೆಡಿಸಿದಿರಿ. ಅವರಿಲ್ಲಿಗೆ ಬಂದು ಶ್ಯಾನೆ ದೊಂಬಿ ಮಾಡಿದರು. ಪುನಃ ಹೊಸ ಗೋಪುರ ಕಟ್ಟೀವಿ ಕನಕನ ಹೆಸರನ್ನೇ ಇಡ್ತೀವಿ ಅಂದ್ವಿ. ಊಟ ಹಾಕಿದ್ವಿ ಉಂಡರು, ಹೋದರು… ನಮಗೆ ಕೃಷ್ಣ ಅನ್ನತಕ್ಕಂತವನ ಭಯವೇ ಇಲ್ಲ… ಇನ್ನು ಇವರಿಗೆಲ್ಲಾ” ನಗೆ ಚೆಲ್ಲಿದರು.
“ಅದೆಂಗೋ ಸ್ವಾಮಿ, ಹೊಸ ಗೋಪುರದ ಉದ್ಘಾಟ್ನೆಯಾ ಭಯದಿಂದಲ್ವೆ ರಾತ್ರೋರಾತ್ರಿ ಮಾಡಿದ್ದು? ಇದು ನನ್ನ ಡೈಲಾಗಲ್ಲ. ಜನದ್ದು…”
“ಮಂಡೆ ಕೆಟ್ಟದೆ ಜನರದ್ದು. ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ರಾತ್ರಿ. ಶ್ರೀಕೃಷ್ಣ ಹುಟ್ಟಿದ್ದು ರಾತ್ರಿಯೇ ಅಲ್ಲವೋ. ಮೇಲಾಗಿ ರಾತ್ರಿಯೇ ಪ್ರಶಸ್ತ ಮುಹೂರ್ತವಿತ್ತು. ಇದೆಲ್ಲಾ ಶೂದ್ರ ಮುಂಡೇವ್ಕೆ ಕೊಂಚವೂ ಅರ್ಥವಾಗೋಗಲ್ಲ” ತೊದಲ್ನುಡಿದರು.
“ಆತು ಬಿಡ್ರಿ. ಕುರುಬರನ್ನೇ ಕೈಬಿಟ್ಟು ಕನಕಗೋಪುರ ಉದ್ಘಾಟಿಸಿದ್ದು ಸರಿ ನಾ?”
“ಮಡೆಯಾ. ಅವರನ್ನು ಕರೆದೆವೋ ಬಿಟ್ಟೆವೋ ಅನ್ನೋದು ಮುಖ್ಯವಲ್ಲ. ಅವರ ಕನಕನಿಗೆ ಗೌರವ ತೋರಿಸಿದ್ದೇವೆ. ಅವರೇ ತೆಪ್ಪಗಿರುವಾಗ ನಿಮ್ಮದೆಂತ ಪಿರಿಪಿರಿ….? ಹಾಗೆ ನಮಗೆ ಪ್ರಚಾರ ಬಯಲಾಡಂಬರ ಬೇಕಿರಲಿಲ್ಲ. ಅರ್ಥ ಮಾಡ್ಕೋಬೇಕು ನೀವು. ಒಂದು ಘನವಾದ ಮಾತು ಹೇಳ್ತೀನಿ ಕೇಳಿ. ಅಧಿಕಾರ ನಮ್ಮ ಕೈಲಿದ್ದಿದ್ದರೆ ಬಾಬರಿ ಮಸೀದಿ ಕೆಡವಿದ ಜಾಗದಲ್ಲಿ ಶ್ರೀರಾಮಂದಿರ ರಾತ್ರೋರಾತ್ರಿ ಎಂದೋ ಕಟ್ಟಿಸಿ ನಿಮಗೆಲ್ಲಾ ತೋರಿಸಿಬಿಡುತ್ತಿದ್ದೆವು. ಎಲ್ಲದಕ್ಕೂ ಕಾವಿ ಅಡ್ಡಲಾಗಿದೆ ಕಣ್ರಿ”
“ಹಂಗಾರೆ ತಮಗೆ ರಾಜಕಾರಣಿ ಆಗಬೇಕೆಂಬ ಆಶಾನೂ ಇದ್ದಂಗೈತೆ ಹೌದಲ್ಲೋ?”
“ಈ ಜನ್ಮದಲ್ಲಿ ಕಾವಿ ನಂಬಿ ಕೆಟ್ಟೆವು ಮರು ಜನ್ಮದಲ್ಲಾದರೂ ರಾಜಕಾರಣಿಯಾಗಿ ಹುಟ್ಟಬೇಕೆಂಬ ಮಹದಾಶೆಯುಂಟು. ಪರಮಾತ್ಮನ ಇಚ್ಛೆ ಹೇಗಿದೆಯೋ”
“ತಮ್ಮ ಕಟ್ಟಾ ಶಿಷ್ಯೆ ಉಮಾ ಭಾರತಮ್ಮಂಗೆ ರಾಜಕೀಯ ಸನ್ಯಾಸ ಬೇಡ ಅಂತ ತಾವೇ ಆದೇಶ ನೀಡಿದರಂತೆ?”
“ತಪ್ಪೇನು? ಆಕಿ ಮೊದಲೆ ಸನ್ಯಾಸಿ. ರಾಜಕೀಯ ಸನ್ಯಾಸವ್ಯಾಕ್ರಿ? ಸಂನ್ಯಾಸಿಗಳೂ ರಾಜಕೀಯದಲ್ಲಿರಲಿ ಅನ್ನೋದು ಕೂಡ ನಂಮಾತೆ”
“ಅದೇ ಸ್ವಾಮಿ ಭಜರಂಗದಳ ವಿಶ್ವಹಿಂದೂ ಪರಿಷತ್ತು ಹಾಗೂ ಸನ್ಯಾಸಿಗಳು ಅವರಲ್ಲ. ಮುಂದಿನ ಚುನಾವಣೆಗೆ ನಿಂತ್ಕಳ್ರಿ ಅಂತ ಆದೇಶ ನೀಡಿರತ್ತ”
“ಕೊಳಲು ಅಂತ ಹೆಸರಿಟ್ಕೊಂಡು ಅಪಸ್ವರ ನುಡಿತೀರಲ್ರಿ” ಸಿಡುಕಿದರು.
“ಅಲ್ರಿ ನಮ್ಮ ಅಡ್ವಾಣಿಯಂತ ವಯೋವೃದ್ಧ, ಜ್ಞಾನವೃದ್ಧರನ್ನು ರಾಜೀನಾಮೆ ಏನ್ರಿ ಕೇಳೋದು?” ಯತಿಗಳು ಮತಿಗೆಟ್ಟಂತೆ ಕೂಗಾಡಿದರು. “ಅಲ್ಲಾ ಸ್ವಾಮಿ , ಅವರು ಪಾಕ್ ನಲ್ಲಿ ಹೇಳಿದ್ದನ್ನ ತಾವೂ ಒಪ್ತೀರಿ ಅಂದಂಗಾತು”
“ಒಪ್ಪುವಂತದ್ದೂ ಇದೆ. ಒಪ್ಪದಿರುವಂತದ್ದೂ ಇದೆ” ಹುಬ್ಬೇರಿಸಿದರು.
“ಇದ್ರಾಗೆ ತಂ ಸ್ವಂತ ಅಭಿಪ್ರಾಯವೇನೇಳ್ರಿ ಸಿವ?” ಕೆಣಕಿದೆ.
“ಸೂಕ್ತ ಕಾಲದಲ್ಲಿ ಬಹಿರಂಗ ಪಡಿಸುತ್ತೇವೆ” ತಡಬಡಾಯಿಸಿದರು.
“ಆ ಕಾಲ ಯಾವ್ದು ಸ್ವಾಮಿ” ಕೇಳಿದೆ.
“ಚುನಾವಣಾ ಕಾಲ” ಕೀರಲ ಧ್ವನಿ ಹೊರಬಂತು.
“ಹಂಗಾರೆ, ಮುಂದಿನ ಪ್ರಧಾನಿ ಅಡ್ವಾಣಿಜೀನೇ ಹೌದಲ್ರಿ?”
“ಮತ್ತೆ ಅಪಸ್ವರ. ವಾಜಪೇಯಿ ಇನ್ನೂ ಬದುಕಿಲ್ವೇನ್ರಿ? ಅವರು ಬ್ರಹ್ಮಚಾರಿಗಳು. ಕಾರಣ ಅವರು ಇಚ್ಛಾ ಮರಣಿ”
“ವಾಜಪೇಯಾರೇ ಹೇಳ್ತಾರೆ ತಾವು ಅವಿವಾಹಿತರಷ್ಟೆ ಬ್ರಹ್ಮಚಾರಿ ಅಲ್ಲ ಅಂತ….”
“ಸನ್ಯಾಸಿಗಳ ಹತ್ರ ಇಂಥ ಪ್ರಶ್ನೆ ಕೇಳಬಾರದು. ವಾಜಪೇಯಿ ಅಡ್ವಾನಿ ಬಗ್ಗೆ ನಮಗೆ ಅಪಾರ ಗೌರವವಿದೆ”
“ಅಡ್ವಾಣೇರ ಮ್ಯಾಟರ್ನಾಗೆ ವಿ.ಹಿಂ.ಪ.ಮತ್ತು ಭ.ದಳ ಕಡ್ಡಿ ಆಡಿಸುವ ಬಗ್ಗೆ ತಮಗೆ ಅಸಮಾದಾನ ಇದ್ದಂಗೈತಲೇನ್ರಿ ಸಿವ?”
“ಅಸಾಧ್ಯ. ವಿ.ಹಿಂ.ಪ.ಮತ್ತು ಭ.ದಳ ನನ್ನ ಎರಡು ಕಣ್ಣುಗಳು. ಆರ್‌ಎಸ್‌ಎಸ್ ನನ್ನ ಬ್ರೇನು. ವಾಜವೇಯಿ ನನ್ನ ಬಾಯಿ, ಅಡ್ವಾಣಿ ನನ್ನುಸಿರು ಕಣ್ರಿ”
“ಹಂಗಾರೆ ಬಿಜೆಪಿ?” ಕೇಳಿದೆ.
“ನನ್ನ ದೇಹ” ಬಡಕಲು ದೇಹ ಬೀಗಿತು.
“ಮತ್ ಹಂಗಾರೆ ಉಡುಪಿ ಕೃಷ್ಣ?”
“ಅಧಿಕ ಪ್ರಸಂಗ ನಿಲ್ಲಿಸಿ” ಎಂದು ಕೆಮ್ಮುತ್ತಾ “ಕೊನೆ ಪ್ರಶ್ನೆ ಕೇಳಿ ಜಾಗ ಖಾಲಿ ಮಾಡಿ. ನಂಗೆ ಪೂಜಾ ವೇಳೆಯಾಯಿತು” ಸಿಡಿಮಿಡಿಗೊಂಡರು.
“ತಾವು ಕಲ್ಲಿನ ವಿಗ್ರಹಕ್ಕೆ ವಜ್ರದ ಅಂಗಿ, ಕಿರೀಟ ಇಕ್ಕುವ ಬದಲು ನಿಮ್ಮ ಬಡ ಬ್ರಾಹ್ಮಣರಿಗಾಗಿ ಶೈಕ್ಷಣಿಕ ಸಂಸ್ಥೆಗಳನ್ನಾದ್ರೂ ಕಟ್ಟಬಾರ್ದೆ ಸ್ವಾಮಿ… ವೀರಶೈವ ಮಠಗುಳ್ನ ನೋಡ್ರಿ ಹೆಂಗೆ ವಿದ್ಯಾದಾನ ಮಾಡ್ತಾ ಆವೆ”
“ವಿದ್ಯಾದಾನದ ಹೆಸರಲ್ಲಿ ವಿದ್ಯೆ ಮಾರಾಟ ಮಾಡ್ತಾ ಅವೆ ಕಣೋ ಪ್ರಾರಬ್ದವೇ”
“ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯ ಬಡಬ್ರಾಮಿನ್” ನಿಡುಸುಯ್ದು ಪೇಜಾವರ, ಹಾರ್ಮೋನಿಯಂ ಲೀಡ್ಸ್ ನಂತಹ ತಮ್ಮ ಪಕ್ಕೆಲುಬುಗಳನ್ನು ತೋರಿ ಆಯಾಸಗೊಂಡ ಫೋಜ್ ನೀಡಿ ನೆಲಕ್ಕೆ ಕೈಯೂರಿ ಎದ್ದು ದುಡುದುಡು ಹೊರಟಾಗ ನಾನೂ ಜುಬ್ಬ ಕೊಡವಿಕೊಂಡು ಮೇಲೆದ್ದೆ. “ಭೋಜನ ಸ್ವೀಕರಿಸಿ ಹೋಗಿ” ಎಂದ ವಟು ಒಬ್ಬ. ಪಂಕ್ತಿ ಭೇದ ನೆನಪಾದಾಗ ಅಸಹ್ಯವುಂಟಾಗಿ ಜಡಿಯುವ ಮಳೆಯಲ್ಲೇ ಛತ್ರಿ ಅಗಲಿಸಿ ಉಡುಪಿ ಹೊಟೇಲಿನತ್ತ ಹೆಜ್ಜೆ ಹಾಕಿದೆ.
*****
( ದಿ. ೦೬.೦೭.೨೦೦೫)