ರಾಜ ಮುತ್ತು ರಾಜ
ಕನ್ನಡದ ನೀ ಮುದ್ದು ರಾಜ || ಪ ||
ರಂಗಭೂಮಿಯ ಕೃಷಿ ಅಂಗಳದಲಿ
ನಟನೆಯ ಕಲೆಯ ಬೀಜ ನೀವಾಗಿ
ಸಸಿಯಾಗಿ ಮೊಳಕೆಯೊಡೆದು ಸಿನಿಮಾದಲ್ಲಿ
ಹೆಮ್ಮರವಾಗಿ ಬೆಳೆದು ನೆರಳಾದೆ ಕಲೆಗೆ
ಗಾನ ಕೋಗಿಲೆಗಳ ಗಾನಸಿರಿಯಾಗಿ
ಗಂಧರ್ವ ಲೋಕವ ನೀ ಸೃಷ್ಟಿಸಿದೆ
ಯೋಗಿಯಾಗಿ ತ್ಯಾಗಿಯಾಗಿ
ಕಲೆಯಲೇ ನೀ ಜೀವತೇಯ್ದು
ಕನ್ನಡದ ಮೇರು ನಟನಾಗಿ ನಿಂತಿಹೆ
ಕನ್ನಡದ ಹೆಮ್ಮೆಯ ಪುತ್ರನಾಗಿ
ಕನ್ನಡ ರಥವ ನೀನೇರಿ ನಡೆದೆ
ಅಭಿಮಾನಿಗಳು ನಿನ್ನ ದೇವರೆಂದರೂ
ಅಭಿಮಾನಿಗಳೇ ನಿನ್ನ ದೇವರೆಂದು ತೋರಿ
ಸರಳತೆಯ ಸಾಕಾರ ಮೂರ್ತಿ ನೀನಾದೆ
ಅದೆಷ್ಟೋ ಪ್ರಶಸ್ತಿ ಪುರಸ್ಕಾರಗಳು
ನಿನ್ನೊಡಲಿಗೆ ಬಂದು ಸೇರಿದರೂ
ಅಹಂಕಾರವೂ ನಿನ್ನಲ್ಲಿ ಸುಳಿಯಲಿಲ್ಲ
ಸರಳತೆ ನಿನ್ನ ಜೀವನ ಗಾಯನ
ಆಯಿತು ಇತರರಿಗೂ ಮಾರ್ಗದರ್ಶನ
ನೀನೆಂದಿಗೂ ನಮ್ಮೆಲ್ಲರ ಸ್ಫೂರ್ತಿಯಾಗಿರುವೆ
ಮಣ್ಣಲ್ಲಿ ಮಣ್ಣಾಗಿ ಹೋದರೂ
ಕನ್ನಡ ಮಣ್ಣಲಿ ಚಿರ ಚೇತನವಾಗಿರುವೆ
ನೀ ರಾಜಕುಮಾರ ಎಂದೆಂದಿಗೂ
ಕುಮಾರನೇ ಕನ್ನಡಮ್ಮನ ಕುವರನೇ!
*****