ಹರಿಯುವ ನೀರಿಗೆ ಅಡ್ಡಗಟ್ಟಿ
ಅಣೆಕಟ್ಟು ಕಟ್ಟಿ ತಡೆಯಬೇಡಿ,
ನಾಲ್ಕು ಗೋಡೆಗಳ ಮಧ್ಯೆ
ಖೈದು ಮಾಡದೇ ಅದಕೆ
ಸ್ವಚ್ಛಂದ ಹರಿಯಲು ಬಿಡಿ.
ಕತ್ತಲೆಯ ಕೋಣೆಯಲಿ
ಬಂದಿಯಾಗಿಸದೇ ಸೂರ್ಯನ
ಜಗದ ತುಂಬ ಬೆಳಗಲು
ಅವಕಾಶ ಮಾಡಿ ಕೊಡಿ.
ಎತ್ತರ ಎತ್ತರವಾಗಿರುವ
ಗಿರಿಬೆಟ್ಟಗಳನ್ನು ದಟ್ಟ
ಮೋಡಗಳೇ ಮರೆ ಮಾಡದೇ
ಹೊರಚಾಚಲು ಬಿಡಿ.
ಆಗಸವೇ ನಿನ್ನ ಒಡಲೊಳಗೆ
ಗುಡುಗು, ಸಿಡಿಲು ಮಿಂಚುಗಳ
ಮುಚ್ಚಿ ಒಳಗಿಟ್ಟುಕೊಳ್ಳದೇ
ಸಿಡಿಯಲು ಹೊರಗೆ ಬಿಡಿ.
ನನ್ನ ಹೃದಯದಲಿ ತುಂಬಿದ
ನೋವನ್ನು ನಿಟ್ಟುಸಿರು ಮಾಡದೇ
ಕಣ್ಣುಗಳಿಂದ ಹೊರಬರಲು
ದಯವಿಟ್ಟು ಅವಕಾಶ ಕೊಡಿ.
*****