ಎಲ್ಲಿ ಹೋದರೊ ಜನರು?
‘ಸಾಮರಸ್ಯದ ತವರು’
ಹೇಳುತ್ತ ಬಂದದ್ದು ಹುಸಿಯಾಯಿತೆ?
ಸೇಡೆಂಬುದು ಈ ಭೂಮಿ ಹೆಸರಾಯಿತೆ?
ಚಂದಿರನು ನಕ್ಕಾಗ ಮಂದಿರವು ಮುನಿದಿತ್ತು
ಗುಡಿಸಲಿನ ಗರಿಯಲ್ಲಿ ಹರಿದಾಡಿತೊ-
ಸೇಡು ಸರ್‍ಪವು ಸುತ್ತಿ ಸುಳಿದಾಡಿತೊ!
ಬೆವರೊಡೆದ ಭೂಮಿಯಲಿ ಕರಿಒಡಲ ಉರಿಹತ್ತಿ
ಕೊಳಲ ಸುಂದರ ನಾದ ಬೂದಿಯಾಯ್ತೊ
ಹೂವ ನುಂಗಿದ ಹಾವು ಹಾದಿಯಾಯ್ತೊ?
ಎಲ್ಲಿ ಹೋದರೊ ಆ ಜನರು
ಭೂತಕಾಲದ ಕಿಂಡಿಯಲಿ ಲೋಕ ಕಂಡವರು
ಎಂದು ಬರುವರೂ ಈ ಜನರು-
ವರ್‍ತಮಾನದ ಉರಿಯಲ್ಲಿ ಮಿಂದು ಎದ್ದವರು
ಬೆಳಕಿನ ಬಟ್ಟೆಗಳ ತೊಟ್ಟು ನಿಂದವರು.
*****