“ಆಶಾಃ ಆಶಾಃ ಪರಮಂ ದುಃಖಂ ನಿರಾಶಾ ಪರಮಂ ಸುಖಂ” ಎಂಬ ವಾಕ್ಯವನ್ನು ಸತ್ಯವಾಗಿ ತೋರ್‍ಪಡಿಸಲಿಕ್ಕೆ ಪ್ರಗತಿಸಪರಮನುಷ್ಯನು ಪ್ರಯತ್ನಿಸಬೇಕು. ಈ ಶ್ಲೋಕವು ಅನ್ನಲಿಕ್ಕೆ ಅತ್ಯಂತ ಸುಲಭವಾಗಿರುವಂತೆ, ಆಚರಣೆಯಲ್ಲಿ ತರಲಿಕ್ಕೆ ಇದು ಅತ್ಯಂತ
ಕಠಿಣವಾಗಿರುವದು. ಮಹಾರಾಜನಿಗೂ ಅಶೆಬಿಟ್ಟಿಲ; ರಾಜನಿಗೂ ಅಶೆಬಿಟ್ಟಿಲ್ಲ; ಲೌಕಿಕನಿಗೂ ಅಶೆಬಿಟ್ಟಿಲ್ಲ; ಪಾರೆಮಾರ್‍ಥಿಕನಿಗೂ ಆಶೆಬಿಟ್ಟಿಲ್ಲ; ಕೃಪಣನಿಗೂ ಅಶೆಬಿಟ್ಟಿಲ್ಲ. ಅತ್ಯಂತ ಉದಾರನಿಗೂ ಆಶೆಬಿಟ್ಟಿಲ್ಲ. ಇಷ್ಟೇಅಲ್ಲ ಜಗತ್ತಿನೊಳಗಿನ ಪ್ರತಿಯೊಂದು ಪ್ರಾಣಿಯು ಈ ಘೋರವಾದ ಅಶಾಸೂತ್ರದಿಂದ ಬಂಧಿಸಲ್ಪಟ್ಟರುವದು.
ಈ ವಿವರವನ್ನು ಓದಿ ಕೆಲವರು ಅನುಮಾನಪಡಬಹುದಾಗಿದೆ. ಪರಮಯೋಗಿಗಳೂ ಪೂಜ್ಯಸನ್ಯಾಸಿಗಳೂ ಇನ್ನೂ ಅನೇಕರೂ ಆಶಾರಹಿತರೆಂದು ಗ್ರಂಥಾಂತರದಲ್ಲಿ ಬರೆದಿರಲು ಇವರು ಹೀಗೆ ಎಲ್ಲರೂ ಆಶೋತ್ರಿಗಳೇ ಎಂದು ಬರೆಯುವದಕ್ಕೆ ಆಧಾರವೇನು? ಎಂದು ಕೇಳಬಹುದಾಗಿದೆ. ಅವರ ಪ್ರಶ್ನೆಗೆ ಉತ್ತರವಿಷ್ಟೇ; ಆಶಾ ರಹಿತನಾದವನು ಲೋಕದಲ್ಲಿ ಯಾರೂ ಇಲ್ಲ. ಆದರೆ ನಮ್ಮ ಆಶೆಗೂ ದೊಡ್ಡಾವರ ಆಶೆಗೂ ಭೇದ ಮಾತ್ರವಿರುವದು. ನಾವು ಪ್ರತಿಯೊಂದು ವಿಷಯಕ್ಕೆ ಹೆಚ್ಚಾದ ಆಶೆಯನ್ನು ತೋರಿಸಿ, ಆಶೆಗಳು ಪೂರ್ಣವಾಗದಿರಲು, ಕಡೆಗೆ ಆಶಾಮಯವಾದ ನಿರಾಶೆಯುಳ್ಳ ನಾವು ನರಿಯು ತಿನ್ನಲಿಕ್ಕೆ ದ್ರಾಕ್ಷಿಗಳು ಸಿಗದಾಗಲು ಹುಳಿದ್ರಾಕ್ಷಿಗಳು ಎಂದು ಭಾವಿಸಿ ನಿರಾಶೆಪಟ್ಟಂತೆ ಆಗುವೆವು. ಆದರೆ ದೊಡ್ಡವರು ಜ್ಞಾನಿಗಳು ಯಾತರದಲ್ಲಿಯೂ ಅಸಕ್ತಿಯನ್ನಿಡದೆ ಅಶೆಯನ್ನಿಡದೆ ಹಿಡಿದ ಕೆಲಸಗಳನ್ನು “ಕರ್‍ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ” ಎಂಬಂತೆ ಮಾಡಿ, ನಿರಾಶಾಮಯವಾದ ಆಶೆಯಿಂದ ಕಡೆಗೆ ಶ್ರ್‍ಏಷ್ಟವಾದ ಫಲವನ್ನು ಪಡೆಯುವರು. ಇದೇ ನಮ್ಮ ಹಾಗು ದೊಡ್ಡವರ ಆಶೆಯ ಭೇದವಾಗಿದ್ದರೂ ಫಲದಲ್ಲಿ ಎಲ್ಲರೂ ಒಂದೇ ವಸ್ತುವನ್ನು ಹೊಂದುವೆವಾದ್ದರಿಂದ, ಎಲ್ಲರೂ ಆಶೋತ್ರಿಗಳೇ ಎಂದು ನಮ್ಮ ಮತವದೆ.
ಪ್ರಗತಿಹೊಂದುವ ಮನುಷ್ಯನಲ್ಲಿ ಆಶೆಯು ಅವಶ್ಯವಾಗಿರಬೇಕಾಗುವದು. ಅದರೆ ದುರಾಶೆಯು ಮಾತ್ರ ಸರ್‍ವಧಾ ಇರಕೂಡದು. ಪ್ರಾಪಂಚಿಕರಾದ ನಾವು ಅಶಾಪಾಶದಿಂದಲ್ಲದೆ ಬೇರೆ ಮತ್ತಾವದರಿಂದಲೂ ಕಾರ್‍ಯಾಸಕ್ತರಾಗಲಾರೆವು. ಯೋಗ್ಯ ಅಶೆಯು ಮನುಷ್ಯನಿಗೆ ತಾರಕವಾಗಿಯೂ, ದುರಾಶೆಯು ಮಾರಕವಾಗಿಯೂ ಪರಿಣಮಿಸುವದು. ಯೋಗ್ಯ ಅಶೆಯೆಂದರೇ ನಿರಾಶಾಮಯ ಅಶೆಯು. ಕೆಲಸವನ್ನು ಮನಮುಟ್ಟ ಮಾಡುವವನು ತಾನಾಗಿ ಹೆಚ್ಚು ಪಗಾರವನ್ನು ಕೇಳಬೇಕಾಗಿಲ್ಲ. ಕಾರಖಾನದಾರನೇ ಅವನ ಕಲಸಕ್ಕೆ ಮೆಚ್ಚಿ ಹೆಚ್ಚು ಹೆಚ್ಚು ಪ್ರತಿಫಲವನ್ನು ಕೂಡುತ್ತಹೋಗುತ್ತಾನೆ. ಆದರೆ ಆಶೆಬುರುಕನು ತನಗೆ ಪಗಾರವು ಹೆಚ್ಚಿಗೆ ದೊರೆಯಬೇಕೆಂಬ ಆಶೆಯಿಂದ ಯಜಮಾನನೆದುರಿಗೆ ಒಳ್ಳೇ ದುಡಿಯುವವನಂತೆ ನಟಿಸುವನು. ಯಜಮಾನನು ಮೊದಮೊದಲು ಅವನ ಆಶೆಗೊಳಪಟ್ಟರೂ ಪರಿಣಾಮದಲ್ಲಿ ನಿಜಸ್ವರೂಪವು ಅವನಿಗ ಗೊತ್ತಾಗದ ಇಂದು. ಒಮ್ಮನಸ್ಸಿನಿಂದ ಯೋಗ್ಯ ಕೆಲಸಮಾಡುವ ಮನುಷ್ಯನಿಗೆ ಪ್ರತಿಫಲವು ದೊರೆಯುವದು ಸಿದ್ಧಾಂತವು. ಆಶೆಮಾಡಿದ ಫಲಗಳು ಕಡಿಮ ಯೋಗ್ಯತೆಯವೂ, ಆಶಮಾಡದಿದ್ದ ಫಲಗಳು ಅಮೂಲ್ಯಯೋಗ್ಯತೆಯವೂ ಆಗಿರುತ್ತವೆ. ಇದಕ್ಕೆ ಉದಾಹರಣೆಯು-ನೌಕರನು ಆಶೆಗಾಗಿ ಕೆಲಸಮಾಡುವದರಿಂದ ಕಡತನಕ ನೌಕರಿಯ ಕಡಿಮೆಯೋಗ್ಯತೆಯವನಾಗುವನು. ಎಷ್ಟು ಪಗಾರಗಳಿಸಿದರೂ ಅವನ ವೃತ್ತಿಯು ಆಶಾವೃತ್ತಿಯದಾಗಿರುವದರಿಂದ ಅವನ ಯೋಗ್ಯತೆಯು ಕಡಿಮೆಯಾಗುವದೇ ಸರಿ. ಅದರೆ ಅದೇ ಒಬ್ಬ ಸಾಧುವು ಇಲ್ಲವೆ ಸನ್ಯಾಸಿಯು ಮಾಡುವ ಕೆಲಸವು (ಇವರು ಪ್ರತ್ಯಕ್ಷ ಕೆಲಸಮಾಡುವ ಅವಶ್ಯಕತೆಯೇ ಇಲ್ಲ. ಇವರ ನಿತ್ಯದ ನಡುವಳಿಗಳೇ ವೃತ್ತಿಗಳೇ ಇವರ ಪೂಜ್ಯಕೃತಿಯ ದ್ಯೋತಕಗಳಾಗಿವೆ.) ಅತ್ಯಂತ ಶ್ರೇಷ್ಠವಾಗಿದ್ದು ನಿರಾಶಯಿಂದ ಮಾಡಲ್ಪಡುವದರಿಂದ ಅವರಿಗೆ ಬೇಕಾದಷ್ಟು ಧನ- ಧಾನ್ಯ ಮೊದಲಾದ ಮೂಲ್ಯಪದಾರ್ಥಗಳು ದೂರಯುವವಲ್ಲದೆ, ಅಮೂಲ್ಯವಾದ ಕೀರ್‍ತಿಯು ಅವರನ್ನು ಸೇವಿಸಲಕ್ಕೆ ತತ್ವರವಾಗುವದು. ಆದ್ದರಿಂದ ಪ್ರಾಪಂಚಿಕನೇ ಆಗಲಿ ಪಾರಮಾರ್ಧಿಕನೇ ಆಗಲಿ ಸ್ಪತಂತ್ರ ಧ್ಯೇಯದ ಪ್ರಗತಿಮಾರ್‍ಗವನ್ನು ಗೊತ್ತುಮಾಡಿಕೊಂಡು ದೃಢನಿಶ್ಚಯಾದಿ ಪ್ರಗತಿವರ್‍ಧಕಗುಣಗಳಿಂದ ನಿರಾಶಾಮಯವಾದ ಆಶೆಯಿಂದ ದುಡಿಯಹತ್ತಿದರೆ, ಅವನಿಗೆ ಇಹದಲ್ಲಿಯ ಎಲ್ಲ ಸುಖಗಳೂ ಲಭಿಸುವವಲ್ಲದೆ ಪರದಲ್ಲಿಗತಿಯೂ ದೊರಕುವದು.
“ಆಶಾಬಿಡಬೇಕು, ಸಂಸಾರವನ್ನು ಆಶಾರಹಿತವಾಗಿ ಮಾಡ ಬೇಕು” ಎಂದು ಬೋಧಿಸುವ ದೊಡ್ಡವರ ಬೋಧದ ತಾತ್ಪರ್‍ಯವು ನಿರಾಶಾಮಯವಾದ ಆಶೆಯನ್ನು ಧರಿಸಿ ಸಂಸಾರಸಾಗಿಸಬೇಕು ಎಂದಿರುವದು. ಮನುಷ್ಯನು ಆಶಾಬದ್ಧನಾಗಲಿಕ್ಕೆ ವ್ಯಾಮೋಹವೇ ಕಾರಣವಾಗುತ್ತದೆ. ವ್ಯಾಮೋಹವೆಂದರೆ ನಿಜವಾದ ಮೋಹವಲ್ಲ, ಭಾಸಮಯವಾದ ಮೋಹವು. ಯಾವದಾದರೊಂದು ಪದಾರ್‍ಥವನ್ನು ಇಷ್ಟಾನಿಸ್ಟ ಸಂಗತಿಗಳದ್ವಾರ ಪರೀಕ್ಷಿಸದೆ, ಕೇವಲ ಅದರ ತೋರಿಕೆಯ ಗುಣಕ್ಕೆ ಮನಜೋಲುವದು ವ್ಯಾಮೋಹದ ಲಕ್ಷಣವು. ಇಂಥ ವ್ಯಾಮೋಹಗ್ರಸ್ತವಸ್ತುವಿಗಾಗಿ ನಾವು ಅಶೆಪಡಹತ್ತುತ್ತೇವೆ. ಈ ಆಶೆಯೇ ದುರಾಶೆಯಾಗುವದು.
ಪತಂಗವು ದೀಪದ ದಾಹಕ ಗುಣವನ್ನು ತಿಳಿಯದೆ, ಕೇವಲ ಅದರ ಪ್ರಕಾಶಕ್ಕೆ ಮೆಚ್ಚ ಆಲಿಂಗಿಸಹೋಗಿ ಸುಟ್ಟುಹೋಗುವುದು. ಕಾಮುಕನು ಪರಸ್ತ್ರೀಯನ್ನೂ ಜಾರಿಣಿಯನ್ನೂ ಸಂಭೋಗಿಸುವ ಮೋಹಕ್ಕೆ ಬಲಿಬಿದ್ದು ಅನರ್‍ಥಕ್ಕೆ ಬಳಗಾಗುವದು, ವ್ಯಾಮೋಹ ದುರಾಶೆಗಳ ಉದಾಹರಣಗಳಾಗಿನೆ.
ಆಶಾಗ್ರಸ್ತನಾಗಲಿಕ್ಕೆ ವ್ಯಾಮೋಹದಂತೆ ದುರಭಿಮಾನವೂ ಕಾರಣವಾಗಿರುವದು. ಯಾವನೊಬ್ಬ ಮನುಷ್ಯನಿಗೂ, ನಮಗೂ ಸ್ನೇಹರೂಪವಾದ ಅಭಿಮಾನ ಬೆಳೆಯಬೇಕಾದರೆ ನಾವು ಅವನೊಡನೆ ಸಂಪೂರ್‍ಣಸಲಿಗೆಯಿಂದ ನಡೆದು, ಅವನ ಗುಣದೋಷಗಳು ತಿಳಿದನಂತರ ನಾವಿಬ್ಬರೂ ಸಮಾನಧರ್ಮದವರಾರರೆ ಮಾತ್ರ ನಾವು ಪರಸ್ಪರಾಭಿಮಾನಿಗಳಾಗುವೆವು. ಹೀಗೆ ಆಗದೆ ಕಾರ್‍ಯಸಾಧನಕ್ಕಾಗಿ ಒಬ್ಬನು ನಮ್ಮನ್ನು ಹೆಚ್ಚಾಗಿ ಹೊಗಳಿದ ಮಾತ್ರದಿಂದ ಕೇಳಿದಷ್ಟು ದ್ರವ್ಯಸಹಾಯಮಾಡಿದಮಾತ್ರದಿಂದ ನಾವು ಅವನ ನಿಜವಾದ ಗುಣಗಳನ್ನು ಪರೀಕ್ಷಿಸದೆ ಅವನಲ್ಲಿರುವ ಅಭಿಮಾನವು ನಿಜವಾದ ಅಭಿಮಾನವೆನಿಸುವದಿಲ್ಲ. ಈ ವೃಥಾಭಿಮಾನಕ್ಕಾಗಿ ದುರಾಶೆ ಪಡಬೇಕಾಗುತ್ತದೆ. ಅದ್ದರಿಂದ ಪ್ರಗತಿಗಾಮಿಯು ದುರಾಶಾ, ವ್ಯಾಮೋಹ, ವೃಥಾಭಿಮಾನ, ದುರಭಿಮಾನ ಮೊದಲಾದ ಅವನತಿಕಾರಕ ಗುಣಗಳನ್ನು ಸಂಗ್ರಹಿಸಬಾರದು.
*****
ಮುಂದುವರೆಯುವುದು