ಈ ನಾಡೊಳು ಬದುಕಲು ಬಡಿವಾರ ಬೇಕೆ?
ಎತ್ತನೋಡಿದರಲ್ಲಿ ಪರಿವಾರ
ಉಳಿಸುವುದಿಲ್ಲ ನಮ್ಮ ಪರಿವಾರ
ಪ್ರೀತಿ ಇಲ್ಲವೆಂದ ಮೇಲೆ
ಬದುಕುವುದಾದರು ಹೇಗೆ?
ದ್ವೇಷ ಹುಟ್ಟು ಹಾಕುವ
ಧರ್ಮವೇತಕೆ ಮನುಜ
ನಡೆದೇ ಹೋಯಿತು
ಮನುಕುಲದ ಹೇಯ ಕೃತ್ಯ
ಯಾರದೋ ಅಧಿಕಾರದ ಅಮಲಿನಲಿ
ಹೊತ್ತಿ ಉರಿಯಿತು
ಈ ನಾಡು ಕ್ಷಣ ಮಾತ್ರದಲಿ
ನೊಂದವರೆಷ್ಟೋ, ಬೆಂದವರೆಷ್ಟೋ
ಪ್ರೀತಿ ದಹಿಸಿತು ದ್ವೇಷಾಗ್ನಿಯಲಿ
ಮಾಡಿದರು ಎಲ್ಲರ ಮನ ಧೂಳೀಪಟ
ಒಂದುಕಡೆ ಲಾಟಿ ಬೂಟಿನೊದೆತ
ಮತ್ತೊಂದು ಕಡೆ ಹೆಂಗಸರ ಮಕ್ಕಳ ಆಕ್ರಂದನ
ಪಕಾಸೆ ಹಂಚು, ಗೋಡೆಗಳು
ಅರೆ ಬೆಂದು ದುಃಖ ದುಮ್ಮಾನದಲಿ
ಹಾಡಾತಾವು ನೋವಿನ ಹಾಡ
ಧರ್ಮಾಂದ ಉಗ್ರರ ಅಟ್ಟಹಾಸಕೆ
ಮಾನವೀಯ ಸಂಬಂಧಗಳು, ಹೃದಯವಂತಿಕೆ
ಸತ್ತು ಹೋದದ್ದು ಈಗ ಇತಿಹಾಸ
ಯಾರೂ ಬಿತ್ತಲಿಲ್ಲವೇ ಸಮನ್ವಯದ ಮನಸು
ಯಾರೂ ಹತ್ತಿಕ್ಕಲಿಲ್ಲವೇ ಧರ್ಮಾಂಧತೆಯನು
ಮನದಲಿ ಅರಳುವುದುಂಟೆ ಸಮನ್ವಯ?
ಕದಡಿದ ಮನ ಒಂದಾಗುವುದೆಂತು?
ಎಂದು ಕಾಣುವೆವು
ಹುಣ್ಣಿಮೆಯ ಬೆಳದಿಂಗಳ
*****
೧೬-೪-೨೦೧೦ರ ಶಿವಮೊಗ್ಗದ ಸೃಷ್ಟಿ ರಾಜ್‌ಟೈಮ್ಸ್‌ನಲ್ಲಿ ಪ್ರಕಟ