ಪ್ರಥಮ ಪ್ರಣಯದ ಸುಖಾಗಮನದಿಂದ ಆನಂದಪರವಶವಾಗುವಂತೆ, ನಮ್ಮೂರಿಗೆ ವಿದ್ಯುದ್ದೀಪಗಳು ಬರುವುವೆಂಬುದನ್ನು ಕೇಳಿದ ಕೂಡಲೇ ಊರಿಗೆ ಊರೇ ಒಂದು ವಿಧದ ಸಂತೋಷಾತಿರೇಕದಿಂಷ ಕುಣಿದಾಡಿತು, ಆ ಉನ್ಮಾದದ ಕುಣಿದಾಟದಲ್ಲಿ ಎಲ್ಲೆಲ್ಲಿ ಏನೇನು ಜಾರಿಹೋಗಿ ಯಾರಿಗೆ ಎಂತಹ ನಷ್ಟವಾಯಿತೋ ಅದನ್ನು ಎಣಿಕೆಮಾಡಿದವರಾರೂ ಇಲ್ಲ. ಆದರೆ, ಗೋಂದನ ಮನೆಯ ಬಾಳೆಗೊನೆ ಯೊಂದು ಖಂಡಿತವಾಗಿ ಹೋಯಿತು. ಆ ಘಟನೆಯನ್ನು ಗೋಂದನು ಇನ್ನೂ ಮರೆತಿಲ್ಲ.

ಕೆಲಸಗಾರರು ಗೋಂದನ ಮನೆಮುಂದೆ ರಸ್ತೆಯಲ್ಲಿ ವಿದ್ಯುತ್ ಕಂಭವನ್ನು ಇಟ್ಟು, ತಂತಿಹಾಕುತಿದ್ದರು. ಗೋಂದನು ಹರ್ಷಚಿತ್ತನಾಗಿ ನೋಡುತಿದ್ದನು.

ಒಬ್ಬ ಕೆಲಸಗಾರನು ಗೋಂದನ ಬಳಿಗೆ ಬಂದು, “ಸ್ವಾಮಿ, ರಸ್ತೆಯಲ್ಲಿ ಹೆಚ್ಚು ಸ್ಥಳವಿಲ್ಲ. ಆ ಕಂಭದ ಮೇಲಿಂದ ತಂತಿಯನ್ನು ಎಳೆದು ಕಟ್ಟುವಾಗ ಕಂಭವು ಅತ್ತಿತ್ತ ಮಾಲದಂತೆ ಅದಕ್ಕೆ ಹಗ್ಗವನ್ನು ಬಿಗಿದು, ದೂರದಿಂದ ಇಬ್ಬರು ಎಳೆದು ಹಿಡಿಯಬೇಕಾಗಿದೆ. ನಿಮ್ಮ ಹಿತ್ತಲಿಗೆ ಬರಬಹುದಷ್ಟೆ?” ಎಂದನು.

ವೆಚ್ಚವಿಲ್ಲದ ಪರೋಪಕಾರ! ‘ಆಗಲಿ’ ಎಂದನು ಗೋಂದ.

ಆಯಿತು!

“ಏನಾಯಿತು?” ಎಂದು ನೀವು ಕೇಳಬಹುದು.

ಆದುದಿಷ್ಟೆ, -ಮರುದಿನ ಗೋಂದನು ಬೆಳಗ್ಗೆ ಎದ್ದು ಹಿತ್ತಲಿಗೆ ಹೋಗಿ ನೋಡಿದಾಗ, ಪೂರ್ಣವಾಗಿ ಬೆಳೆದಿದ್ದ ಒಂದು ರಸಬಾಳೆಹಣ್ಣಿನ ದೊಡ್ಡ ಗೊನೆಯು ಕಾಣೆಯಾಗಿದೆ!

“ಈ ತಂತೀಮಕ್ಕಳೇ ಕದ್ದೊಯ್ದರು!” ಎಂದನು ಗೋಂದ.

“ಛೀ- ಏನುಮಾತು! ಅವರ ಮುಖವನ್ನು ನಾನು ನೋಡಿದ್ದೇನೆ, ಪ್ರಾಮಾಣಿಕರು!” ಎಂದಳು ಆತನ ಅಜ್ಜಿ.

“ಆದರೆ, ಅವರು ಮುಖದಿಂದ ಅದನ್ನೊಯ್ಯಲಿಲ್ಲ!” ಎಂದನು ಗೋಂದ.

“ಅವರ ಮೇಲೇಕೆ ಅಪವಾದ? ರಾತ್ರೆಕಾಲದಲ್ಲಿ ಯಾರಾದರೂ ಕಳ್ಳರು ಬಂದು ಕೊಂಡೊಯ್ದರೋ ಏನೋ!” ಎಂದು ಅಜ್ಜಿಯ ವಾದ.

ನಿಜ!

“ಗೊನೆ-ಗೊನೆ-ಗೊನೆ-ಗೊನೆ” ಎಂದೇ ತಲೆಯಲ್ಲಿ ಕಟ ಕಟ ಹೊಡೆದಂತಾಗಿತ್ತು. ಅಷ್ಟು ದೊಡ್ಡ ಗೊನೆ ಗೋಂದನ ಹಿತ್ತಲಲ್ಲಿ ಹಿಂದೆಂದೂ ಬೆಳೆದುದನ್ನು ಆತನು ನೋಡಿರಲಿಲ್ಲ.
ಗೋಂದನ ಅಜ್ಜಿಯು ಅದನ್ನು ಕಡಿಯಬೇಕೆಂದರೂ ಕೇಳದೆ, “ಇನ್ನೆರಡು ದಿನ ಬಾಳೆಯಲ್ಲೇ ಇರಲಿ” ಎಂದಿದ್ದನು. ಈಗ ಗೊನೆ ಗೊನೆ ಎಂದು ಮರಮರ ಮರುಗಿದನು: ಆದರೆ, ಗೊನೆ ಗೊನೆ ಎಂದು ಕೆಲಸ ಬಾಯಲ್ಲಿ ಉಚ್ಚರಿಸಿದ ಕೂಡಲೇ ಗೊನೆ ಹುಟ್ಟಿ ನಮ್ಮ ಮುಂದೆ ಬಂದು ನಿಲ್ಲದೆಂಬುದು ಗೊನೆಯನ್ನು ಹಿಂದೆ ಎಂದಾದರೂ ಕಳಕೊಂಡಿರಬಹುದಾದವರ ಅನುಭವ.

ಅಪರಾಹ್ನ ಎರಡು ಗಂಟೆಯ ಬಿಸಿಲನ್ನು ಲಕ್ಷಿಸದೆ ನಮ್ಮೂರ ಸಂತೆಯನ್ನು ಪ್ರವೇಶಿಸಿ, ಬದನೆಯನ್ನು ಹಿಡ ಕೊಂಡು ಕುಳತಿದ್ದಾಕೆಯೊಬ್ಬಳ ಮುಂದೆ ನಿಂತು, “ಗೊನೆ!” ಎಂದನು ಗೋಂದ.

ಆಕೆ ಆಶ್ಚರ್ಯದಿಂದ “ಯಾವ ಗೊನೆ?” ಎಂದಳು

ತಬ್ಬಿಬ್ಬಾಗಿ “ಅಲ್ಲ- ಬದನೆ; ಏನು ಕ್ರಯ?” ಎಂದು ತಿದ್ದಿ ನುಡಿದನು ಗೋಂದ.

“ಐದಕ್ಕೆ ಮೂರಾಣೆ!” ಎಂದಳು.

“ನನ್ನ ಗೊನೆಗೆ ಒಂದೂವರೆ ರೂಪಾಯಿ ಬರುತ್ತಿಲ್ಲ!” ಎಂದುಕೊಳ್ಳುತ್ತ, ಹುಚ್ಚನಂತೆ ಅಲೆದಾಡಿ ಗೋಂದನು ಮುಂದರಿದು, ಸಂತೆಯಲ್ಲಾರಾದರೂ ಆ ಗೊನೆಯನ್ನು ಮಾರಾಟಕ್ಕೆ ತಂದಿರುವರೋ ಎಂದು ನೋಡಿದನು. ಇಲ್ಲ; ದೊರೆಯಲಿಲ್ಲ.

ಗೋಂದನು ಮನೆಗೆ ಮರಳಿದನು.

ಮನೆಗೆ ಬಂದು ತನ್ನ ಅಂಗಿಯನ್ನು ತೆಗೆದಿಟ್ಟು, ಹೊರ ಜಗಲಿಗೆ ಬಂದು ಕುಳಿತು, “ಗೊನೆ ಗೊನೆ ಗೊನೆ!” ಎನ್ನುತಿರಲು, –

“ಗೊನೆ”ಎಂದೊಂದು ಕೂಗು ಕೇಳಿಸಿತು.

ವಿದ್ಯುತವಾಹದ ಸಂಚಾರವಾದಂತೆ ಗೋಂದನು ಜಗ್ಗನೆ ಎದ್ದು ಕುಳಿತನು. ಒಂದು ಗೊನೆಯನ್ನು ಹಿಡಿದು ಕೊಂಡು, ೧೪ ವರ್ಷದ ಬಾಲಕನೊಬ್ಬನು ನಿಂತಿರುವನು!

“ರಸಬಾಳೆ ಗೊನೆ ಬೇಕೇ ಸ್ವಾಮೀ?” ಎಂದನು ಬಾಲಕ.

ಗೋಂದನು ನೋಡಿದನು, ಕೊನೆಯ ಎರಡುಕಾಯಿಗಳು, ಒಂದು ದಿನ, ಗೋಂದನು ಕೈಯ್ಯಲ್ಲಿ ಕತ್ತಿಹಿಡಿದು ಅಲಕ್ಷದಿಂದ ಬೀಸಿದಾಗ ಅರ್ಧದಷ್ಟು ಕಡಿದುಹೊಗಿದ್ದುವು.

ಈ ಗೊನೆ?-ಗೋಂದನ ಹಿತ್ತಲಿನಿಂದ ಕಳುವಾದ ಗೊನೆ!

“ಇದನ್ನು ನಿನ್ನೊಡನೆ ಯಾರು ವಿಕ್ರಯಿಸೆಂದು ಕಳುಹಿದರು?” ಎಂದು ಕೇಳಿದನು ಗೋಂದ.

“ಸಂಕಣ್ಣ; ಇಲೆಕ್ಟ್ರಿಕ್ ಕೆಲಸಮಾಡುತ್ತಾರಲ್ಲ ಅವರು?”

“ಹುಂ!” – ಎನ್ನುತ್ತ ಗೋಂದನು, – “ಇತ್ತ ಕೊಡು- ಗೊನೆಯನ್ನು; ಇಲ್ಲಿಟ್ಟು ಹೋಗು, ಮತ್ತು ಆ ಸಂಕಣ್ಣನನ್ನು “ನಿನ್ನೆ ನೀನು ಗೊನೆ ಕದ್ದೊಯ್ದ ಮನೆಯ ಗೋಂದನು” ಕರೆ ದಿರುವನೆಂದು ಹೇಳು. ಅವನು ಬಂದ ಕೂಡಲೇ ಹಣಕೊಡುತ್ತೇನೆ!” ಎಂದು ಬಾಲಕನನ್ನು ಗದರಿಸಿ, ಗೊನೆಯನ್ನು ತೆಗೆದುಕೊಂಡು ಮನೆಯೊಳಗೆ ಹೋಗಿ, ಅಜ್ಜಿಯ ಮುಂದಿಟ್ಟು ನಲಿದಾಡಿದನು.

ಗೊನೆ ತಂದ ಬಾಲಕನಾಗಲೀ, ಅದನ್ನು ಮಾರಾಟಕ್ಕೆ ಕಳುಹಿದ ಸಂಕಣ್ಣನಾಗಲಿ ಇನ್ನೂ ತಮ್ಮ ಹೆಣ ಕೇಳಲು ಬಂದಿಲ್ಲ.

“ಇದು ಯಾವ ಊರಿನ ಸುದ್ದಿ?” ಎಂದು ಯಾರಾದರೂ ಕೇಳಿದರೆ,- “ಗೋಂದನಿಗೆ ಗೊನೆ ಸಿಕ್ಕಿದ ಮೇಲೆ ಲೋಕಕ್ಕೆ ಊರಿನ ಹೆಸರೇಕೆ?” ಎಂದೇ ಉತ್ತರ.
*****