ಸಾಕು ಸಮರದ ದಿನಗಳು
ಕರಾಳ ಸಾವು ನೋವುಗಳು
ಯುಗಯುಗಗಳ ಜೀವರಾಶಿಯನು
ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ
ಸಮರವನು ಸಾರುವದು ಬೇಡ.
ನೋಡುತ್ತಿದೆ ಜಗತ್ತು
ತತ್ತರಿಸಿ ಕಣ್ಣು ಬಿಟ್ಟು
ಯುದ್ಧಭೀತಿಯಿಂದ.
ನೋವಿನಿಂದ ಬಿಕ್ಕಳಿಸಿ
ಅಳುತಿವೆ ನಕ್ಷತ್ರಗಳು.
ಆಕಾಶವೆಲ್ಲ ಥರಗುಟ್ಟಿ
ನಡಗುತ್ತಿದೆ.
ಭೂಮಿ ಬಾಯ್ತೆರೆದು ಬೇಡುತ್ತಿದೆ.
“ನಮಗೆ ಯುದ್ಧ ಬೇಡ,
ಶಾಂತಿ ಬೇಕು, ಶಾಂತಿ” ಎಂದು.
ನೆಲ, ಜಲವನ್ನು ವಿಷವಾಗಿಸುವ,
ಮನುಕುಲವನು ನಾಶ ಮಾಡುವ
ಬರದ ಭೀಕರ ವಿಷಬೀಜ ಬಿತ್ತುವ,
ವಿಶ್ವವನ್ನೇ ಸ್ಮಶಾನವನ್ನಾಗಿಸುವ,
ಸಮರಗಳು ನಮಗೆ ಬೇಡ
ಹಿರೋಷಿಮಾ ನಾಗಾಸಾಕಿಗಳ
ಕತ್ತಲೆಯ ಕರಿ ನೆರಳುಗಳು
ಕೂಗಿ ಕೂಗಿ ಹೇಳುತ್ತಿವೆ.
“ಯುದ್ಧ ಬೇಡ – ಶಾಂತಿ ಬೇಕು” ಎಂದು
ಸಾಮ್ರಾಜ್ಯಶಾಹಿಗಳ ಪ್ರತಿಷ್ಠೆಗೆ
ವಿಶ್ವವನ್ನೇ ಗೋರಿ ಮಾಡುವುದು ಬೇಡ
ನೀಲಿ ಕಣ್ಣಿನ ಗಿಡುಗನ ನೀತಿಯಲಿ
ಮಾನವೀಯತೆಯ ಹುಡುಕುವದು ಬೇಡ
ದುಡ್ಡಿನ ಧಣಿಗಳ ಡಾಲರ್‌ಗಳಿಂದ
ಕೈಗಳನ್ನು ಕಟ್ಟಿಸಿಕೊಂಡು
ಮಾನವೀಯತೆಯ ಮಾರಿಕೊಂಡು
ದುರಂತವನ್ನಪ್ಪುವದು ಬೇಡ.
ಸದ್ದಿಲ್ಲದೇ ಮನುಕುಲವ ನಾಶಮಾಡುವ
ಯುದ್ಧ ಢಾಕಿಣಿಗೆ ಶರಣಾಗುವದು ಬೇಡ.
ತೈಲ ಸಮುದ್ರದಲ್ಲಿ ಸಿಕ್ಕ ಹಕ್ಕಿಗಳು
ಕಂಗೆಟ್ಟು ಕೇಳುತ್ತಿವೆ –
ನೋವಿನಿಂದ ಬೇಡುತ್ತಿವೆ –
“ನಮಗೆ ಯುದ್ಧ ಬೇಡ
ಶಾಂತಿ ಬೇಕು – ಶುದ್ಧ ಪರಿಸರಬೇಕು” ಎಂದು.
*****