ಜೀವ ಚಿಮ್ಮಿರುವ ಹೂವೇ
ಹಾಡು ಹೊಮ್ಮಿರುವ ಹಗಲೇ
ಮಾತಾಡುವಾಸೆ ನನಗೆ ನಿಮ್ಮೊಂದಿಗೆ
ಮಿನುಗು ಹೆಜ್ಜೆಯ ತಾರೆಯೇ
ಚಂದ್ರ ಚುಂಬಿತ ರಾತ್ರಿಯೇ
ಬೆರೆಯುವಾಸೆ ನನಗೆ ನಿಮ್ಮೊಂದಿಗೆ.
ಬಿಸಿಲ ಬಂಧನ ಮುರಿದು
ಹಸಿರ ಹಾದಿಗೆ ಜಿಗಿದು
ನಲಿಯುವಾಸೆ ನನಗೆ ನಿಮ್ಮೊಂದಿಗೆ
ನನ್ನ ಕಷ್ಟದ ಕಥೆಯ
ಅನ್ನ ಸಿಕ್ಕದ ವ್ಯಥೆಯ
ತೋಡಿಕೊಳ್ಳುವ ಆಸೆ ನಿಮ್ಮೊಂದಿಗೆ.
ಸಾವ ಬರೆಯಿಸಿಕೊಂಡು
ಸಾಲ ಕೊಟ್ಟವರನ್ನು
ನೂಕಿ, ನುಡಿಯುವ ಆಸೆ ನಿಮ್ಮೊಂದಿಗೆ
ನಂಜು ನಾಲಗೆ ಬಾಣ
ಕಾಡಿ ಕಾಯುವ ಕಣ್ಣ
ತಪ್ಪಿಸಿ, ನೀವಾಗುವಾಸೆ ನಿಮ್ಮೊಂದಿಗೆ.
*****
ಪ್ರಸ್ತುತ ಸನ್ನಿವೇಶಕ್ಕೆ ಅರ್ಥಪೂರ್ಣ ಕವನ ಸರ್. ಇಂತಹ ಹತ್ತಾರು ಕವನಗಳು ಹೆಚ್ಚು ಹೆಚ್ಚು ಬಂದರೆ ಓದುವ ಭಾಗ್ಯ ನಮ್ಮದಾಗುತ್ತದೆ