ಕತ್ತಲ ಮಗ್ಗದಲ್ಲಿ ಬೆಳಕು ನೆಯ್ದವರು
ಬೆವರಿನ ಜನ, ನಾವು ತವರಿನ ಜನ.
ನಾಡ ಒಳಿತಿಗೆ ಸುಖವೆಲ್ಲ ಸುಟ್ಟು
ರಕುತದ ಹನಿಹನಿಯನು ಕೊಟ್ಟು
ಕನಸಿಗೆ ಕಿವಿ ಕಣ್ಣು ಕೊಟ್ಟೆವು
ಬರಿ ಬೆತ್ತಲೆಯ ಉಟ್ಟೆವು.
ಗುಡಿ ಗುಡ್ಡಗಳಲ್ಲಿ ಬರೆಸಿಕೊಂಡರು ಹೆಸರು
ತುಳಿವ ನೆಲದಲ್ಲಿ ನಮ್ಮ ನಿಟ್ಟುಸಿರು
ಹಚ್ಚುತ್ತಾರೆ ದೀಪ ಹಾಕುತ್ತಾರೆ ಧೂಪ
ನಡಗುತ್ತದೆ ಹಾರಿಸಿದ ಬಾವುಟ
ಬೆವರುತ್ತದೆ ಭೂಪಟ !
ಹಾದಿಬೀದಿಯ ತುಂಬ ಹೂವಾಗಿ ಬಿದ್ದವರು
ಮತ್ಯುರಾಜನಿಗೆ ಮನೆ ಕಟ್ಟಿಕೊಟ್ಟವರು
ಬೆವರ ಬುತ್ತಿಯ ಕಟ್ಟಿ ಒತ್ತೆ ಇಟ್ಟವರು
ಕೈಯಿದ್ದರೂ ಕೂಳಿಲ್ಲ ಮೈಯಿದ್ದರೂ ಮನೆಯಿಲ್ಲ
ನೆಲದ ನೆಂಟರು ನಾವು ಬೆವರಿನ ಜನರು
ತವರಿನ ಜನರು.
*****