೧
ಸಮಯವಿದೆಯೆ ಪಪ್ಪಾ?
ಆಚ ಗುಡ್ಡದಾಚೆ ಇದ ನದಿ
ಆಹಾ! ಎಷ್ಟು ಚಂದ ಅದರ ತುದಿ
ಅಬ್ಬಾ… ಎಷ್ಟು ದೊಡ್ಡ ಸುಳಿ
ಹೇಗೋ ಪಾರಾದೆ ನುಸುಳಿ
ಸರ್ರೆಂದು ಜಾರುವುದು ನುಣ್ಣನೆಯ ಹಾವು
ಎದೆಯೆತ್ತರಕೂ ಹಾರುವುದು ಪುಟಾಣಿ ಮೀನು
ಬಾ ಪಪ್ಪಾ ತೋರಿಸುವನು…
ಸಮಯವಿದೆಯೆ ಪಪ್ಪಾ?
ಬೆಟ್ಟವೇರೋಣ ಬಾ ನೀನು
ಅಲ್ಲಿಂದ ಮುಟ್ಟೋಣ
ಆಕಾಶ, ಚಂದ್ರನನ್ನು
ಮೆಟ್ಟಿಲುಗಳೇ ಬೇಡ
ಜಾರುಗುಪ್ಪೆಯಾಡುತ್ತ
ಉರುಳುರುಳಿ ಸೇರಬಹುದು ನೆಲವನ್ನು
ಬಾ ಪಪ್ಪಾ ತೋರಿಸುವೆನು…
ಕರಿಬೇವಿನ ಮರದಲ್ಲಿ
ಕಟ್ಟಿದ ಗುಬ್ಬಿ ಗೂಡು
ಇಟ್ಟಿದೆ ಪುಟ್ಟ ಮೊಟ್ಟೆ
ನೀನು ಬಾ ನೋಡು
ನಿಂಬೆಯ ಎಲೆ ಮೆದ್ದು
ಗಡದ್ದು ನಿದ್ದೆಯಲ್ಲಿದೆ ಕಂಬಳಿ ಹುಳು
ಬಾ ಪಪ್ಪಾ ತೋರಿಸುವೆನು…
೨
ಬೆತ್ತ ಆಚೆ ಇಡು
ಎಲ್ಲ ಹೇಳುವೆನು
ನಿಜ ಶಾಲೆ ತಪ್ಪಿಸಿ
ಸಾಬಣ್ಣನ ಹೊಲಕ್ಕೆ ಹೋಗಿದ್ದೆನು
ದೆವ್ವವಲ್ಲ….
ಬೆದರು ಬೊಂಬೆ
ಪರೀಕ್ಷೆ ಮಾಡಿದೆನು
ಬೆತ್ತ ಆಚೆ ಇಡು
ನಿಜವ ಹೇಳುವೆನು
ಪಾಠದ ಪುಸ್ತಕ ತೆರದರೆ
ಬರೀ ಗುಡ್ಡ ಬೆಟ್ಟ ನದಿಯೇ ಕಾಣುವುದು
ಮನ ಅದರ ಹಿಂದೆ-ಮುಂದೆ
ಸುಳಿದಾಡುವುದು
*****
ಸೂಪ್ ಲೆಸೇನ