ಏಕೆ ನೀನು ಮೌನ ವಹಿಸಿದೆ,
ಮಾತನೊಲ್ಲದ ಶಿಲ್ಪವಾದೆ
ಹೇಳೆ… ನೀ ಯಶೋಧರೆ?
ಯಾವ ಕಾರಣ,
ಯಾವ ಹೂರಣ,
ತೋರಣದಿ ನಡೆದಿತು ನಿನ್ನ ಹರಣ,
ಏನೋ ಅರ್ಥವ
ಹುಡುಕೋಗಣ್ಣಿಗೆ,
ತಿಳಿಯದಾಯಿತೆ ನಿನ್ನೊಲವ ಚರಣ,
ಸತ್ಯ ಶುದ್ಧ ಜೀವನ
ಬಾಳ ಬೆಸುಗೆಗೆ
ಅರ್ಥವಿರದವರಿಂದಲಿ ನೊಂದೆಯೊ?
ಕಣ್ಣ ಮುಂದಿನ
ಜಗವ ಕಾಣಲು ಬೋಧಿ ವೃಕ್ಷವಾಗಿ ರೂಪನು ತಳೆದೆಯೊ?
ಸಿದ್ಧ-ಅರ್ಥವಳಿದು
ಬುದ್ಧನಾದರೂ
ನಿನ್ನ ಶುದ್ಧ ಪ್ರೇಮಕೆ ತುಂಬಲಿಲ್ಲವೇ ನೇಸರ?
ನಾಳೆ ಕಾಣದ
ಕಣ್ಣ ನೋಟಕೆ…
ರಾಹುಲನೆಂದುದೇತಕೊ ಅಪಸ್ವರ
ನಿನ್ನ ಕಾವ್ಯವು
ನಿನ್ನದಲ್ಲದ ಭಾವದಲಿ
ಭಾರವಾಗಿದೆ.
ಇವಳಿಗಿಷ್ಟೇ ಸಾಕು
ಎನ್ನುವ ಕೂಪನಿಷ್ಠದಿ
ಎಲ್ಲೋ ಒಂದೆಡೆ ಸೊರಗಿದೆ…!
*****