ಎದೆಯೊಳಗೆ ಬೆಂಕಿ ಬಿದ್ದರೂ
ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ
ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ
ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ
ಹತ್ತಾರು ಪಾತ್ರಗಳು
ನವಿಲುಗರಿ ಪೋಣಿಸಿಕೊಂಡು
ಡಂಭ ಬಡಿಯುವ ಕೆಂಬೂತಗಳು
ಹಾದು ಹೋಗುತ್ತಿವೆ.
ಒಂದರ ನಂತರ ಮತ್ತೊಂದು.
ಕೇಳಬೇಕೆಂದುಕೊಳ್ಳುತ್ತೇನೆ-
ರಕ್ತ ಉಕ್ಕುವ ಕಣ್ಣಿನ ಆಳದಲ್ಲಿ
ಮಡುಗಟ್ಟಿದ ನೋವಿಗೆ ಎಲ್ಲಿ
ಸಿಗಬಹುದು ಮದ್ದು ಮತ್ತು ಮುದ್ದು ಎಂದು.
ತಟ್ಟನೆ ಉತ್ತರಿಸುತ್ತದೆ ನೀಲಿಗಟ್ಟಿದ ದಪ್ಪ ತುಟಿಯೊಂದು
“ಒಡೆದ ತುಟಿಗಳಿಗೆ ಲೇಪಿಸಿಕೊಳ್ಳುವ
ವ್ಯಾಸಲೀನ ಕೂಡಾ ವಶೀಲಿ ಕೇಳುತ್ತದೆ.”
ಚರ್ಮದ ವಾಸನೆಯನ್ನು ಮೂಗಿಗೆ ಹತ್ತಿಸಿಕೊಂಡ
ಶ್ವಾನ ನಾಸಿಕಗಳಂತೆ ಕೆಂಪಿರುವೆ ಸಾಲು
ದಂಡುದಂಡಾಗಿ ಸುತ್ತಮುತ್ತಲಿನ ಮೂಲೆಗಳಿಂದ
ತಟ್ಟನೆ ಎದ್ದು ಬಿಡುತ್ತವೆ. ಹಸಕು ವಾಸನೆ ಹುಚ್ಚು ಹಿಡಿಸಿದಂತೆ.
ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕೆಂದರೆ
ತೀರಿದ ಎಣ್ಣೆ ಡಬ್ಬ ಅಣಕಿಸಿ ನಗುತ್ತದೆ.
ಕೋಮಲ ಕನಸುಗಳ ಹೊತ್ತ ಹೊಲಕ್ಕೆ
ಚಿತ್ತಾರದ ಬೀಜಗಳ ಬಿತ್ತಿ, ಕೊನೆಯಲ್ಲಿ
ಕೊಳಚೆ ನೀರನ್ನು ಹಾಯಿಸಿ, ಕಳೆಗಿಡಗಳ ಬೆಳೆಸಿ
ಗೋರಿವಾಕ್ಯ ಹಾಡುವ
ಭಂಡರ ಗೊಂಡೆ ಬೆಳೆಯುತ್ತಲೇ ಇದೆ.
ಬಳ್ಳಿಯಾಗಿ ಸುತ್ತಿ ಉಸಿರುಗಟ್ಟಿಸಬೇಕೆನಿಸುತ್ತದೆ.
ನೀರು ಜಿನುಗಿದಡೆಯಲ್ಲೆಲ್ಲಾ ಆರ್ದ್ರವಾದ
ಮಣ್ಣಿನ ಗರ್ಭದಲ್ಲಿ ಬಿತ್ತದೆಯೇ
ಚಿಗುರೊಡೆದ ಹಸಿರು ಬೆರಗುಗೊಳಿಸುತ್ತದೆ. ನೋಡುತ್ತ
ಒಡಲಲ್ಲಿರುವ ಹಸಿರಿಗೆ ಹೆರಿಗೆ ನೋವು ಬಂದಂತಾಯ್ತು.
ಮುಖದಲ್ಲಿ ಮಲ್ಲಿಗೆಯ ನಗು ಮೂಡಿದರೂ
ಬಿರುಕಾದ ತುಟಿಗಳಿಗೆ ನಗಲಾಗಲಿಲ್ಲ.
*****