ಕಾಬಾದ ಕಡೆ ಮುಖಮಾಡಿ ದಿನವೂ ನಮಾಜು
ಮಾಡುವ ಗೆಳೆಯನೆ ಹೇಳು ನೀನು ನನಗೆ
ಸರ್ವಶಕ್ತನಾದ ದೇವರ ರೀತಿ ರಿವಾಜು
ಬೀದಿಯಲ್ಲಿ ಬಿದ್ದವರಿಗೆ ಕೊಡುವನೆ ಮನೆ
ಹಸಿದ ಹೊಟ್ಚೆಗೆ ಕೂಳು ಹಾಗೂ ಬಿಸಿಲಿಗೆ
ಬರಡಾದ ಹೊಲಗಳಲ್ಲಿ ಧಾನ್ಯಗಳ ತೆನೆ
ಎಲ್ಲರನ್ನೂ ಸಮನಾಗಿ ಸೃಷ್ಟಿಸಿದ್ದಾದರೆ ಕರ್ತ
ಅಲ್ಲಿ ಭಾರೀ ಮಹಡಿ ಇಲ್ಲಿ ಬರೇ ಜೋಪಡಿ
ಇಂಥ ವಿಪರ್ಯಾಸಕ್ಕೆ ಏನು ಅರ್ಥ?
ಕೆಲವರೆನ್ನುವರು ದೇವರೆಂದರೆ ಮನುಷ್ಯಕೋಟಿ
ಸಮರ್ಥಿಸಲೆಂದು ತನ್ನೊಳಗಿನ ಸೈತಾನುಗಳ
ಬೇಕುಬೇಕೆಂದೇ ಉಂಟುಮಾಡಿದ ಸೃಷ್ಟಿ
ನಿಜವಿದ್ದೀತು ಅಥವ ಇಲ್ಲಿದಿದ್ದೀತು
ನೀನಂತೂ ಕಟ್ಟಾ ದೈವ ವಿಶ್ವಾಸಿ-ನಿನ್ನಷ್ಟು
ಅಖಂಡ ವಿಶ್ವಾಸ ನನ್ನ ಒಳತೋಟಿಗೆ ಹೊರತು
ಆದರೂ ಅನಿಸುವುದು ಕೆಲವೊಮ್ಮೆ ಆಶ್ಚರ್ಯ
ಪ್ರತಿ ನಸುಕಿನಲ್ಲೂ ಯಾಕೆ ಕೂಗುವುದು ಕೋಳಿ
ಮೂಡುವುದು ಯಾಕೆ ಮೂಡಲೇಬೇಕಾದಂತೆ ಸೂರ್ಯ
ವರುಷ ವರುಷವೂ ಬರುವ ವಲಸೆಯ ಪಕ್ಷಿ
ಮಾಯಕದಲ್ಲಿ ಬಿರಿಯುವ ಹೂವು ಮಾಯುವ ನೋವು
ಸಾಕೆ ನಂಬುವುದಕ್ಕೆ ಇಷ್ಟು ಸಾಕ್ಷಿ?
*****