ಹಣದ ಹುಟ್ಟು ಮತ್ತು ಬೆಳವಣಿಗೆ

ಹಣದ ಹುಟ್ಟು ಮತ್ತು ಬೆಳವಣಿಗೆ

೧.೨ ಹಣದ ಹುಟ್ಟು ಮತ್ತು ಬೆಳವಣಿಗೆ

ವಿನಿಮಯ ಕ್ರಿಯೆ ಸರಿಯಾಗಬೇಕಾದರೆ ಮೌಲ್ಯವನ್ನು ಮಾಪನ ಮಾಡುವ ಸಾಮಾನ್ಯ ವಾದ ಮಾಪಕವೊಂದು (ಅಳತೆಗೋಲು) ಬೇಕೇ ಬೇಕು. ವಸ್ತು ವಿನಿಮಯ ವ್ಯವಸ್ಥೆಯ ಸೋಲಿಗೆ ಬಹುಮುಖ್ಯವಾದ ಕಾರಣ ಸಾಮಾನ್ಯ ಮೌಲ್ಯಮಾಪನ ಸಾಧನವೊಂದರ ಕೊರತೆಯಾಗಿತ್ತು. ಹಾಗಾಗಿ ವಿನಿಮಯವು ಅನೇಕ ಸಮಸ್ಯೆಗಳನ್ನು ಒಳಗೊಂಡಿತ್ತು ಮತ್ತು ಉತ್ಪಾದನೆಗೆ ಉತ್ತೇಜನ ಇಲ್ಲದಾಗಿತ್ತು. ಆದುದರಿಂದ ಬುದ್ಧಿವಂತ ಜನರು ಸರ್ವಮಾನ್ಯವಾದ ವಿನಿಮಯ ಸಾಧನ ವೊಂದನ್ನು ಬಳಸಿ ಅದರ ಮೂಲಕ ಮೌಲ್ಯವನ್ನು ಅಳೆಯಲು ಆರಂಭಿಸಿದರು. ಅಂತಹ ವಿನಿಮಯ ಸಾಧನವೇ ಹಣ.

ಹಣದ ಹುಟ್ಟು
ಇಂದು ನಾವು ಲೋಹದ ಮತ್ತು ಕಾಗದದ ಹಣವನ್ನು ಬಳಸುತ್ತೇವೆ. ಹಣ ಈ ಹಂತಕ್ಕೆ ಬಂದು ಮುಟ್ಟಬೇಕಾದರೆ ಅನೇಕ ರೂಪಾಂತರಗಳನ್ನು, ಪ್ರಯೋಗಗಳನ್ನು ದಾಟಬೇಕಾಯಿತು. ಪ್ರಯೋಗಶೀಲ ಮಾನವ ಬೇರ ಬೇರ ಸಾಧನಗಳನ್ನು ಹಣವೆಂದು ಬಳಸುತ್ತಾ ಬಂದ. ಹಿಂದೆ ಆರ್ಯರ ಕಾಲದಲ್ಲಿ ಭಾರತದಲ್ಲಿ ದನಕರುಗಳನ್ನು ಹಣದಂತೆ ಬಳಸಲಾಗುತ್ತಿತ್ತು, ಆಫ್ರಿಕಾದಲ್ಲಿ ಆಡನ್ನು ಸಾಮಾನ್ಯ ವಿನಿಮಯ ಸಾಧನವಾಗಿ ಬಳಸುತ್ತಿದ್ದರು. ಕೃಷಿಯು ಪ್ರಧಾನ ವೃತ್ತಿಯಾದ ಬಳಿಕ ದವಸ ಧಾನ್ಯಗಳನ್ನು ವಿನಿಮಯ ಮಾಧ್ಯಮವಾಗಿ ಬಳಸುವ ಪ್ರವೃತ್ತಿ ಕಾಣಿಸಿಕೊಂಡಿತು. ವಿವಿಧ ಚಕ್ರಾಧಿಪತ್ಯಗಳು ಪ್ರಬಲವಾಗಿದ್ದಾಗ ಸ್ತ್ರೀಯರನ್ನು ಮತ್ತು ಗುಲಾಮರನ್ನು ವಿನಿಮಯ ಸಾಧನವಾಗಿ ಬಳಸಿದ್ದೂ ಇದೆ. ಅಲ್ಲದ ತುಪ್ಪಳ, ಚರ್ಮ, ಆನೆಯ ದಂತ, ತಂಬಾಕು, ಚಾಹುಡಿ, ಹರಳುಕಲ್ಲು, ಉಪ್ಪು ಇತ್ಯಾದಿಗಳು ಕೂಡಾ ಹಣವಾಗಿ ಬಳಕೆಯಾದದ್ದು ಇದೆ. ಲೋಹದ ಶೋಧನೆ ಯಾದ ಬಳಿಕ ಕಬ್ಬಿಣ, ಬೆಳ್ಳಿ, ಚಿನ್ನ ಮುಂತಾದವುಗಳನ್ನು ಹಣವೆಂದು ಬಳಸಲಾಯಿತು. ಆ ಬಳಿಕ ಕಾಗದದ ಹಣ ಬಳಕೆಗೆ ಬಂತು.

ವಸ್ತು ವಿನಿಮಯ ವ್ಯವಸ್ಥೆಯ ದೋಷಗಳು ಹಣದ ಆವಿಷ್ಕಾರಕ್ಕೆ ಕಾರಣಗಳಾದವು. ಹಣದ ಆವಿಷ್ಕಾರದಿಂದಾಗಿ ವಸ್ತುಗಳಿಗೆ ಬದಲಾಗಿ ವಸ್ತುಗಳನ್ನು ನೇರವಾಗಿ ವಿನಿಮಯ ಮಾಡುವ ಕ್ರಮ ತಪ್ಪಿಹೋಗಿ ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟ ವಸ್ತುವೊಂದನ್ನು ಮಾಧ್ಯಮವಾಗಿ ಬಳಸುವ ವಿನಿಮಯ ವ್ಯವಸ್ಥೆ ಜಾರಿಗೆ ಬಂತು. ಈ ರೀತಿಯಾಗಿ ಸರ್ವಮಾನ್ಯವಾದ ವಸ್ತು ವಿವಿಧ ಸರಕುಗಳ ನಡುವಣ ವಿನಿಮಯದ ಅನುಪಾತವನ್ನು ನಿರ್ಧಾರ ಮಾಡುತ್ತಿತ್ತು ಮತ್ತು ವಿನಿಮಯದ ಮಾಧ್ಯಮವಾಗಿ ಬಳಸಲ್ಪಟ್ಟ ಆ ಸರಕು ದ್ವಿಮುಖ ಹೊಂದಾಣಿಕೆ, ಅವಿಭಾಜ್ಯತೆ ಮತ್ತು ಸಾಲ ವ್ಯವಹಾರದ ಆಸಾಧ್ಯತೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿತ್ತು. ಹೀಗೆ ಸರ್ವಮಾನ್ಯವಾದ ಆ ವಸ್ತು ಸಾಮಾನ್ಯ ವಿನಿಮಯ ಮಾಧ್ಯಮವಾಗಿ ಮತ್ತು ಸಾಮಾನ್ಯ ಛೇದಕವಾಗಿ ಬಳಸಲ್ಪಡತೊಡಗಿತು.

ಇದನ್ನು ಕ್ರೌಥರ್ ತನ್ನ “ಏನ್ ಔಟ್ ಲೈನ್ ಓಫ್ ಮನಿ” ಎಂಬ ಕೃತಿಯಲ್ಲಿ, ಹೀಗೆ ವಿವರಿಸಿದ್ದಾನೆ: ಇದು ಹಣದ ಮೂರು ಪ್ರಾಥಮಿಕ ಕಾರ್ಯಗಳಲ್ಲಿ ಮೊದಲನೆಯದಾಗಿದೆ. ಅದು ಲೆಕ್ಕದ ಯೂನಿಟ್ಟಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಒಂದು ಅಳತೆಗೋಲು ಅಥವಾ ಮೌಲ್ಯದ ಮಾಪನ ಮಟ್ಟವಾಗಿ ಕ್ರಿಯಾಶೀಲವಾಗುವ ಮೂಲಕ ಇತರ ಎಲ್ಲಾ ವಸ್ತುಗಳನ್ನು ವಿನಿಮಯ ಮಾಡುವ ಸರಳ ವ್ಯವಸ್ಥೆಯೇ ಆಗಿದೆ. ಆದರೆ ವಿನಿಮಯ ಕರಾರುಗಳನ್ನು ಒಂದು ಸರಕಿನ ಮೌಲ್ಯಕ್ಕೆ ನಿಗದಿಗೊಳಿಸಲು ಈಗ ಸಾಧ್ಯವಾಗಿದೆ. ಹೀಗೆ ಹಣದ ಉಗಮವಾಯಿತು.

ಆದರೆ ಇಷ್ಟರಿಂದಲೇ ಸಮಸ್ಯೆ ಬಗೆಹರಿಯಲಿಲ್ಲ. ಹಣವನ್ನು ಯಾವ ರೂಪದಲ್ಲಿ ಕೂಡಿಡುವುದು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಆದುದರಿಂದ ಲೋಹದ ಹಣದ ಆವಿಷ್ಕಾರವಾಗುವವರೆಗೂ, ಹಣವೆಂದು ಬೇರೆ ವಸ್ತುಗಳ ಬಳಕೆಯಾಗುತ್ತಿದ್ದರೂ, ವಸ್ತು ವಿನಿಮಯ ವ್ಯವಸ್ಥೆಯ ಎಲ್ಲಾ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗಿರಲಿಲ್ಲ. ಲೋಹದ ಹಣದ ಆವಿಷ್ಕಾರದಿಂದಾಗಿ ಸುಭದ್ರ, ಸುದೀರ್ಘ ಸಂಚಯ ಸಾಧನವೊಂದು ಮಾನವನಿಗೆ ಲಭ್ಯವಾಯಿತು. ಹೀಗೆ ಆರಂಭದಲ್ಲಿ ಹಣವನ್ನು ಮೌಲ್ಯಮಾಪನ ಸಾಧನವೆಂದು ಆವಿಷ್ಕರಿಸಲಾಯಿತು. ಆ ಬಳಿಕ ಅದು ವಿನಿಮಯ ಮಾಧ್ಯಮವಾಯಿತು. ಅನಂತರ ಮೌಲ್ಯ ಸಂಚಯ ಸಾಧನವಾಗಿ ಅದು ಕಾರ್ಯವೆಸಗತೊಡಗಿತು.

ಕೌಥರ್ ತಮ್ಮ ಏನ್ ಔಟ್ ಲೈನ್ ಓಫ್ ಮನಿ ಎಂಬ ಕೃತಿಯಲ್ಲಿ ಹೇಳುವಂತೆ ಆ ಬಳಿಕದ ಹಣದ ಎಲ್ಲಾ ಬೆಳವಣಿಗೆಗಳು ಆರಂಭದ ಅನಿವಾರ್ಯತೆಗಳ ಮೇಲಣ ಸುಧಾರಣೆಗಳಾಗಿದ್ದವು, ಮಾನವನ ಎಲ್ಲಾ ಸಂಶೋಧನೆಗಳ ಪೈಕಿ ಹಣ ಅತ್ಯಂತ ಮೂಲ ಸಂಶೋಧನೆಗಳಲ್ಲಿ ಒಂದು, ಎಲ್ಲಾ ಜ್ಞಾನಾಂಗಕ್ಕೆ ತನ್ನದೇ ಆದ ಮೂಲ ಶೋಧನೆಯೊಂದಿರುತ್ತದೆ. ಯಂತ್ರಶಾಸ್ತ್ರ ದಲ್ಲಿ ಗಾಲಿ (wheel), ವಿಜ್ಞಾನದಲ್ಲಿ ಬೆಂಕಿ ಮತ್ತು ರಾಜ್ಯಶಾಸ್ತ್ರದಲ್ಲಿ ಮತ (vote), ಅದೇ ರೀತಿಯಲ್ಲಿ ಅರ್ಥಶಾಸ್ತ್ರದಲ್ಲಿ ಮಾನವನ ಸಾಮಾಜಿಕ ಅಸ್ತಿತ್ವದ ಒಟ್ಟು ವಾಣಿಜ್ಯ ಭಾಗದಲ್ಲಿ, ಹಣವು ಅನಿವಾರ್ಯ ಸಂಶೋಧನೆಯಾಗಿದ್ದು ಇತರ ಎಲ್ಲಾ ವಿಷಯಗಳು ಅದನ್ನು ಆಧರಿಸಿವೆ”.

ಹಣದ ಬೆಳವಣಿಗೆ (Growth of Money)
ಹಣ ಉಗಮವಾದ ಕ್ರಮಗಳನ್ನು ತಿಳಿದುಕೊಂಡ ಬಳಿಕ ಅದು ಹೇಗೆ ಬೆಳವಣಿಗೆ ಹೊಂದಿತು ಎನ್ನುವುದನ್ನು ನೋಡೋಣ. ಹಣ ವಿಕಾಸಗೊಂಡ ವಿಧಾನವನ್ನು ಈ ಕೆಳಗಿನಂತೆ ತೋರಿಸಬಹುದು. (ನಕ್ಷೆ ೧.೧)

ಸಮಯ, ಸ್ಥಳ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಹಣವು ವಿವಿಧ ಹಂತಗಳಲ್ಲಿ ವಿಕಾಸಗೊಳ್ಳುತ್ತಾ ಈಗಿನ ಹಂತಕ್ಕೆ ಬಂದು ಮುಟ್ಟಿದೆ. ಆರಂಭದಲ್ಲಿ ಹಣವು ಸರಕು ರೂಪದಲ್ಲಿತ್ತು. ಆ ಬಳಿಕ ಅದು ಲೋಹದ ರೂಪ ತಾಳಿತು. ಮತ್ತೆ ಕಾಗದದ ಹಣ ಬಳಕೆಗೆ ಬಂತು. ಇದೀಗ ಬ್ಯಾಂಕು ಕಾಗದದ ಹಣದ ಮಹತ್ವವನ್ನು ಕಡಿಮೆ ಮಾಡಿದೆ.

೧. ಸರಕು ಹಣ (Commodity Money) : ಹಿಂದಿನ ಕೃಷಿಕ ಸಮಾಜದಲ್ಲಿ ಸಾಕು ಪ್ರಾಣಿಗಳನ್ನು ಹಣವಾಗಿ ಬಳಸುತ್ತಿದ್ದರು. ವಿವಿಧ ಸಮಾಜಗಳಲ್ಲಿ ಮೌಲ್ಯ ಸಾಧನವಾಗಿ ಬೇರೆ ಬೇರೆ ಪ್ರಾಣಿಗಳನ್ನು ಬಳಸಲಾಗುತ್ತಿತ್ತು. ಆಡು, ಆನೆ, ಎತ್ತು, ಹಸು ಇತ್ಯಾದಿ ಪ್ರಾಣಿಗಳನ್ನು ಹಣವಾಗಿ ಬಳಸಲ್ಪಡುತ್ತಿದ್ದ ಕಾಲವಿತ್ತು. ಹಣ್ಣು, ಹಂಪಲು, ಚರ್ಮ ಮತ್ತು ತುಪ್ಪಳ ಕೂಡ ಹಣವಾಗಿ ಬಳಕೆಯಾಗುತ್ತಿದ್ದವು. ಜನರ ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ, ಹವಾಮಾನ, ವಾಸಸ್ಥಳಗಳಿಗೆ ಅನುಗುಣವಾಗಿ ಹಣವಾಗಿ ಬಳಕೆಯಾಗುತ್ತಿದ್ದ ಸಾಧನಗಳು ಬದಲಾಗುತ್ತಿದ್ದವು. ಶೀತಪ್ರದೇಶದಲ್ಲಿ ಚರ್ಮ ಮತ್ತು ತುಪ್ಪಳ, ಸಮುದ್ರತೀರದಲ್ಲಿ ಕಪ್ಪೆ ಚಿಪ್ಪು, ಹರಳುಕಲ್ಲು, ಅರಣ್ಯ ಪ್ರದೇಶದಲ್ಲಿ ಆನೆಯ ದಂತ, ಹುಲಿಯ ಹಲ್ಲು, ಉಷ್ಣ ಪ್ರದೇಶದಲ್ಲಿ ದನ, ಕರು, ಆಡು, ಕೃಷಿ ಪ್ರದೇಶದಲ್ಲಿ ಹಣ್ಣು ಹಂಪಲು, ದವಸ ಧಾನ್ಯ ಮುಂತಾದವುಗಳ ಹಣವಾಗಿ ಬಳಕೆಯಾಗುತ್ತಿದ್ದವು. ಈ ರೀತಿಯ ಹಣಕ್ಕೆ ಅವಿಭಾಜ್ಯತೆಯ, ಏಕರೂಪತೆಯ ಮತ್ತು ಸಂಗ್ರಹದ ಸಮಸ್ಯೆ ಎದುರಾಗುತಿತ್ತು. ಆದುದರಿಂದ ಸರಕು ರೂಪದ ಹಣ ಜನಪ್ರಿಯವಾಗಿರಲಿಲ್ಲ.

೨. ಲೋಹದ ಹಣ (Metallic Money) : ಲೋಹದ ಹಣ ಸರಕು ಹಣಕ್ಕಿಂತ ಅಧಿಕ ಪ್ರಯೋಜನಕಾರಕವಾಗಿತ್ತು. ಅದನ್ನು ನಿಭಾಯಿಸುವುದು, ಸಂಗ್ರಹಿಸಿಡುವುದು, ಮೌಲ್ಯಮಾಪನ ಸಾಧನವಾಗಿ ಉಪಯೋಗಿಸುವುದು ಸುಲಭವಾಗಿತ್ತು ಕೂಡಾ. ನಾಗರಿಕತೆಯ ವಿಕಸನದೊಡನೆ ಕಬ್ಬಿಣ, ತಾಮ್ರ, ಹಿತ್ತಾಳೆ, ಮಿಶ್ರ ಲೋಹ ಮುಂತಾದವುಗಳಿಂದ ತಯಾರಿಸಿದ ಹಣ ಅಸ್ತಿತ್ವಕ್ಕೆ ಬಂತು. ಆ ಬಳಿಕ ಬೆಳ್ಳಿಯ ಮತ್ತು ಚಿನ್ನದ ರೂಪದ ಹಣ ಕಾಣಿಸಿಕೊಂಡಿತು. ಚಿನ್ನ ಒಂದು ಅಮೂಲ್ಯವಾದ ಲೋಹವಾದ ಬಳಿಕ ಚಿನ್ನದ ಹಣಕ್ಕೆ ವಿಶೇಷ ಪ್ರಾಶಸ್ತ್ಯ ಲಭ್ಯವಾಯಿತು.

೩. ಕಾಗದದ ಹಣ (Paper Money) : ಕೇವಲ ಕಾಗದದಿಂದ ತಯಾರಾಗುವ ಹಣ ಇದು. ವಾಸ್ತವವಾಗಿ ಕಾಗದದ ಹಣವು ವಿನಿಮಯ ಮಾಧ್ಯಮದ ಒಂದು ಸಂಕೇತ ಮಾತ್ರವಾಗಿದೆ. ಬೆಳ್ಳಿ ಮತ್ತು ಚಿನ್ನ ಎಲ್ಲೆಡೆಯಲ್ಲಿ ಲಭ್ಯವಾಗದ ಲೋಹಗಳು, ಆದುದರಿಂದ ಎಲ್ಲಾ ದೇಶಗಳು ವಿನಿಮಯದ ಅಗತ್ಯಕ್ಕೆ ತಕ್ಕಷ್ಟು ಲೋಹದ ಹಣವನ್ನು ಬಿಡುಗಡೆ ಮಾಡುವಲ್ಲಿ ವಿಫಲವಾದವು. ಹಾಗಾಗಿ ಕಾಗದದ ಹಣದ ಆವಿಷ್ಕಾರವಾಯಿತು. ಕಾಗದದ ಹಣವನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಲು ಸಾಧ್ಯವಾಗುತ್ತದೆ.

೪. ಉದರಿ ಹಣ (CreditMoney): ಆಧುನಿಕ ಅರ್ಥವ್ಯವಸ್ಥೆಯ ವ್ಯಾಪ್ತಿ ಅಗಾಧವಾದುದು. ಆದುದರಿಂದ ವಿನಿಮಯ ಬಹಳ ಸಂಕೀರ್ಣತೆಗಳನ್ನು ಒಳಗೊಂಡ ಒಂದು ಪ್ರಕ್ರಿಯೆಯಾಗಿಬಿಟ್ಟಿದೆ. ಮಾರುಕಟ್ಟೆಗಳು ವಿಶ್ವ ಮಟ್ಟಕ್ಕೆ ವಿಸ್ತೀರ್ಣಗೊಂಡು, ವ್ಯವಹಾರಗಳು ಸಂಖ್ಯೆ ಮತ್ತು ಗಾತ್ರದಲ್ಲಿ ವಿಸ್ತಾರಗೊಂಡಿರುವುದರಿಂದ ಅನೇಕ ವೇಳೆ ಎಲ್ಲಾ ವ್ಯವಹಾರಗಳಿಗೆ ತಕ್ಷಣವೇ ನಗದು ರೂಪದಲ್ಲಿ ಹಣವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಉದರಿ ಅಥವಾ ಸಾಲದ ಹಣದ ಉದಯವಾಯಿತು.

ಉದರಿ ಹಣವೆಂದರೆ ಬ್ಯಾಂಕು ಹಣ ಎಂದರ್ಥ. ಇದು ಹುಂಡಿ (bill), ಚೆಕ್ಕು, ಪ್ರಾಮಿಸು ನೋಟು ಅಥವಾ ಬ್ಯಾಂಕು ಡ್ರಾಫ್ಟ್ ರೂಪದಲ್ಲಿರುತ್ತದೆ. ಉದರಿ ಹಣದ ಪ್ರಯೋಜನವೇನೆಂದರೆ ವ್ಯವಹಾರ ನಡೆದಂದೇ ನಗದು ಹಣವನ್ನು ಕೊಡಬೇಕಾದ ಅಗತ್ಯವಿಲ್ಲದಿರುವುದು ಇಲ್ಲಿ ವ್ಯವಹಾರ ನಡೆಸಿದಾತನ ಪರವಾಗಿ ಹಣಪಾವತಿ ಮಾಡುವ ಹೊಣೆಯನ್ನು ವಾಣಿಜ್ಯ ಬ್ಯಾಂಕುಗಳು ಹೊತ್ತುಕೊಳ್ಳುತ್ತವೆ.

ಉದರಿ ಹಣ ವ್ಯವಸ್ಥೆಯು ಮುಂದುವರಿದ ರಾಷ್ಟ್ರಗಳಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಹಿಂದುಳಿದ ರಾಷ್ಟ್ರಗಳಲ್ಲಿ ಇನ್ನು ಕೂಡಾ ಉದರಿ ಹಣದ ವ್ಯವಸ್ಥೆಗೆ ಸಾರ್ವತ್ರಿಕ ಮನ್ನಣೆ ಲಭ್ಯವಾಗಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ಸಂವತ್ಸರಕ್ಕೆ
Next post ಗಂಡಂದಿರು

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…