ನಿತ್ಯ ಜುಳುಜುಳು ಝೇಂಕಾರ
ಆಡೊಂಬಲ ನಿನಗೀ ನೆಲ ಓಂಕಾರ
ಕೃಷ್ಣವರ್ಣ ಜಲಕನ್ಯೆಯ ವೈಯಾರ
ಕಾಳಿ ನಿನಗಿದೋ ಅನ್ವರ್ಥ ಶೃಂಗಾರ
ಸವಾಲು ಸಾಸಿರ ಎದುರಿಸಿ ಕರುಣೆ
ಹೊನ್ನ ಬದುಕಿಗೆ ದಾನದ ಸ್ಫುರಣೆ
ನಮ್ಮಯ ಮನದಲಿ ನಿನ್ನದೇ ಸ್ಮರಣೆ
ಕಾಳಿ ಜಪವಿದೋ ಮರೆಸಿತು ಬವಣೆ.
ಹುಟ್ಟನು ಕಂಡಳು ಜೋಯಿಡಾ ರಾಜ್ಯದಿ
ಡಿಗ್ಗಿಯ ಬುಡದಲಿ ಢಮರುಗೈದಳು
ಮಿಲನ ಉಂಡಳು ಕಾರವಾರದ ಕಡಲರಾಜನ
ತೋಳಸೆರೆಯಲಿ ವೀಣೆಯಾದಳು.
ಪಾಂಡರಿ, ನಾಗಿ, ನಾಶಿ, ಕಾನೇರಿ
ನದಿಗಳ ಸಂಗಮ ಸಾಲೆ
ಕುಣಿದು, ಕುಣಿಸಿ, ಕೊಳಲಗೈದಳು
ಬೆಳಕಿನ ಪುಂಜವ ಬೆಳಗಿದ ಬಾಲೆ
ಸುಪಾ, ನಾಗಝರಿ, ಕೊಡಸಳ್ಳಿ ಆಣೆಕಟ್ಟಿಗೆ ಶಾಲೆ
ಒಡಲೊಳು ತುಂಬಿವೆ ಮುಕುಟ ಮಣಿಗಳು
ನೀನೆಂದೂ ಬತ್ತದ ಮಾಲೆ
ಮಲೆಯ ಬನ ಬೆರಗು ನಿನ್ನಯ ಹೆದ್ದಾರಿ
ಇಂಚೂ ಇಂಚಿಗೂ ಸಂಚಿನ ಚಲನೆ ನಿನ್ನಯ ಮಾದರಿ
ಖಗಗಾನ ಮೀಟಿ ಮತಿಯಲಿ ನಿನ್ನದೆ ಶ್ರೀಕಾರ
ಹೆಮ್ಮೆಯ ಹೆಣ್ಣಿಗೆ ನಮ್ಮನೆ ಕಣ್ಣಿಗೆ ಹಾಕಿರಿ ಜಯಕಾರ
*****