ಅಪ್ಪ, ನೆನಪಾಗಿದೆ ಈಗ
ರಜೆಯ ಮಜಾ ಗೋತಾ
ಮೂಲೆಯಲ್ಲೆಸೆದ ಪಾಟಿಚೀಲ
ತಳಮಳ ಜೋತು ಬೀಳುವ
ಹೆಗಲುಗಳ ನೆನೆದು
ಸಮವಸ್ತ್ರ, ಬೂಟುಗಳ ಒಳಗೆ
ಪೀಚಲು ಮತ್ತೆ ಅಪರೂಪಕ್ಕೆ
ಟೊಣಪ ದೇಹದ ಸೈನಿಕರ
ಕವಾಯತು ಮುಂಜಾನೆ
ಇದೆಲ್ಲ ಬದಲಾಗಬೇಕು
ಅದೊಂದೆ ಆಸೆ ಅಪ್ಪ
ಎಲ್ಲ ಹೊಸದಾಗಬೇಕು
ಬಳಪ ಮೂಡದ ಕರಿಹಲಗೆ
ಧೂಳಡರಿದ ಡುಬ್ಬೊಟ್ಟೆ ನಾಯಕ
ಕಿರಿಕಿರಿ ಕೊರೆತ ಕಾಂಡಗಳು
ಅವಧಿಗೊಂದಾವರ್ತಿ
ಕಾಲ ಬದಲಾಗಿದೆ.
ಓದುವ ಆಟ, ಕಲಿ-ನಲಿ
ಮತ್ತೆ ನಲಿ-ಕಲಿ
ಗೂಡು ಕಟ್ಟುವ ಗೊಂದಲ
ಒತ್ತಾಯದಿ ಉಣಿಸಿ ಮತ್ತೆ
ಕಕ್ಕಿಸುವ ಕಲಿಕೆ
ಔಪಚಾರಿಕ ಲೇಪನ
ಸೃಜನಶೀಲತೆ ಮರಣ
ಬದಲಾಗಬೇಕು.
ಸ್ಮಾರ್ಟ ಕ್ಲಾಸುಗಳಲಿ ಕಲಿತು
ಸ್ಮಾರ್ಟಾಗಬೇಕು
ಟ್ರಯಲ್ ಎಂಡ ಎರರ್ ವಿಧಾನದಿ
ಟ್ರಿಮ್ ಆಗಬೇಕು
ನನಗೆ ನಾನೇ ಕಲಿಯಬೇಕು
ನಾನೇ ನನ್ನ ಗುರುವಾಗಬೇಕು
ಕಾಲ ಬದಲಾಗಿದೆ
ಎಲ್ಲ ಬದಲಾಗಬೇಕು.
*****