ಮಾಮರದ ತೋಪಿನಲಿ
ಚೆಂದಿರನ ಬೆಳಕಿನಲಿ
ಕೊಳದ ಸೋಪಾನದಲಿ
ಕುಳಿತಿರುವಳಿವಳಾರು?
ನೀರಿನಂಚಿಗೆ ಸರಿದು
ತೊಯ್ಸಿಹಳು ನಿರಿಗಳನು
ಕಾಲ್ಗಳನು ಚಾಚುವಳು
ಮುದುರುವಳು ಕ್ಷಣಕೊಮ್ಮೆ
ಉಬ್ಬಿಹುದು ಇವಳೆದುಯು
ನಿಟ್ಟುಸಿರ ಬಿಡುತಿಹಳು
ಜೀವದಾಶೆಯ ತೊರೆದು
ಕುಳಿತಿಹಳು ತನುಗಾತ್ರಿ
ದಾರಿಗರ ಅರಿವಿಲ್ಲ
ಪ್ರಾಣಿಗಳ ಭಯವಿಲ್ಲ
ಗಂಗೆಯನು ದಿಟ್ಟಿಸುತ
ಉಸಿರುತಿಹಳೇನನೋ
ಯೌವನದ ಶೋಭೆಯಲಿ
ತುಂಬಿ ತುಳುಕುವ ಮುಖವು
ಕಳೆಗುಂದಿ ಬಾಡಿಹುದು
ಕಂಬನಿಯ ತರುತಿಹಳು
ಜಗದ ಸುಖವನು ಬಿಟ್ಟು
ಬಂದಿಹಳು ದುರ್ದೈವಿ
ಏನಿಹುದೊ ಮನದಿಚ್ಛೆ
ಯಾರೇನು ಮಾಡಿದರೊ
ನಿಷ್ಕಳಂಕದ ಪ್ರೇಮ
ಸ್ಪೂರ್ತಿಯಲಿ ಬಂಧಿಸುತ
ಅಧರವನು ಚುಂಬಿಸುವ
ಗೆಳೆಯನೇನಾದನೋ
ತಾಳಲಾರೆವು ಹಸಿವ
ಏನ ಕೊಡುವೆಯೆ ಅಮ್ಮ
ಎನುತ ಪೀಡಿಸಿ ಸುಳಿವ
ಮಕ್ಕಳೇನಾದರೋ
ಜಗಕೆ ಒಡೆಯನು ಪರಮ
ಕರುಣಮೂರ್ತಿಯು ಎಂದು
ಜನರು ಹೊಗಳುತಲಿರುವ
ದೇವ ತಾನೆಲ್ಲಿಹನೊ
ಶೂನ್ಯ ಹೃದಯಳು ಇನ್ನು
ಮುಳುಗುವಳು ಕ್ಷಣದೊಳಗೆ
ಕಂಗಳನು ಮುಚ್ಚಿದಳು
ಎಚ್ಚರವ ತಪ್ಪಿದಳು
ಕಾಲಚಕ್ರವ ನೆಗೆದು
ಸ್ಥೂಲಕಾಯವ ಬಿಟ್ಟು
ಯಾರು ಅರಿಯದ ಸ್ಥಳಕೆ
ಹೊರಡುತಿದೆ ಇವಳಾತ್ಮ
ಹೋಗಿ ಬದಿಯಲಿ ಕುಳಿತು
ಮೈದಡವಿ ಕಣ್ಣೊರಸಿ
ಏಳು ತಂಗೀ ಎಂದು
ಸಂತೈಸಿ ಕರೆಯಲೇ?
ಪೋಗು! ನೀನಾರಿಲ್ಲಿ
ಬಂದುದೇತಕೆ? ಎಂದು
ಕ್ರೂರ ದೃಷ್ಟಿಯೊಳೆನ್ನ
ನೋಡಿಬಿಡುವಳೊ ಏನೊ!
ಆಗುವುದು ನಿಲ್ಲದದು
ಆಗದಿಹುದಾಗದದು
ಹೀಗೆಂದು ಜನಕಜೆಯು
ಸಾಗಿದಳು ಮುಂದೆ
*****