ಇತಿಹಾಸಕು ಹಿಂದೆಯೇ ಹೊತ್ತಿ ಉರಿದ ಜ್ಯೋತಿಯೇ
ಹಸಿದ ವರ್ತಮಾನಕೆ ಹಾಲುಣಿಸುವ ಮಾತೆಯೇ
ಬರಲಿರುವ ನಾಳೆಗೂ ಭರವಸೆಯಾ ಹಸಿರೇ
ರಾಮನು ಬರೀ ಹೆಸರೇ, ಅಲ್ಲವೆ ನಮ್ಮುಸಿರೇ?
ಬೆಳೆವ ಮರದ ಸತ್ವ ಮೊಳಕೆಯಲ್ಲೆ ಕಾಣದೆ?
ಋಷಿ ಯಜ್ಞವ ಬಾಲಕ ರಕ್ಷಿಸುವುದು ಸಾಲದೆ?
ಮಹಾ ಮಹಾ ವೀರರ ಮಣಿಸಿದಂಥ ಧನುವ
ಹದೆಯೆಳೆದು ಮುರಿವುದು ಸಾಮಾನ್ಯರ ಥರವೇ?
ಹಿರಿಯರ ನುಡಿ ಸತ್ಯವಾಗಿ ಕುಲ ಉಳಿಯಲಿ ಎಂದು
ಸತ್ಯದೆದುರು ಸಿಂಹಾಸನ ಮಣ್ಣಿನ ಹುಡಿ ಎಂದು
ಸಿರಿಗೆ ಮೀರಿದಂಥ ಘನತೆ ನಡತೆಯಲಿದೆ ಎಂದು
ತೋರಿದವನ ಪೂಜಿಸದೇ ಮನೆ ಮನೆಯೂ ಇಂದು?
ನೆರಳಿನಂತೆ ಹಿಂದೆ ಬಂದ ತಮ್ಮನ ಜೊತೆಗೂಡಿ
ಅರಮನೆಗೂ ಪತಿ ಮಿಗಿಲು ಎಂದವಳೊಡಗೂಡಿ
ಕಾಡು ಮೇಡು ಅಲೆದರೂ ಬೆಳೆದು ನಿಂತ ತೇಜ
ಅದರ ಸಮಕೆ ಬೆಳೆಯಬಲ್ಲ ಯಾವ ಮಹಾರಾಜ?
ಕಳೆದುಹೋದ ಮಡದಿಗೆ ಹಗಲಿರುಳೂ ತಪಿಸಿ
ಕಪಿಗಳಲೂ ಆಂಜನೇಯ ವೃಕ್ತಿತ್ವವ ಹರಸಿ,
ಎದುರಾದರೆ ರಾಕ್ಷಸಕುಲ ತರಿದೆಸೆದಾ ಧೀರ
ಮಣ್ಣಿನಿಂದ ಮುಗಿಲ ತನಕ ಬೆಳೆದ ಮಹಾಸಾರ!
ಸಾವಿರಾರು ಮರುಷದಾಚೆ ಬೆಳೆದು ನಿಂತ ಚೇತನ
ಕಂಗೊಳಿಸಿದೆ ತಾರೆಯಾಗಿ ಇಂದಿಗೂ ವಿನೂತನ
ಬಾನಗಲಕೆ ಬೆಳೆದ ರಾಮವೃಕ್ಷ ಇದು ಸನಾತನ
ಶೀಲ ಧರ್ಮ ಸಂಸ್ಕೃತಿಗಳ ಜೀವಂತ ನಿಕೇತನ
*****