ಬೆಳಕಿನಲೆ ದೀಪಾವಳಿ
ಹಣತೆ ಹೊಳೆ ದೀಪಾವಳಿ
ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ.
ಕವಿವ ಕತ್ತಲ ತಳ್ಳುತ
ಬಲಿಯ ಹೆಡತಲೆ ಮೆಟ್ಟುತ
ಜನದ ಮನಕೆ ಮೋದ ಸಂತಸ ಸುರಿಯುವೀ ದೀಪಾವಳಿ.
ಸಣ್ಣ ಹಣತೆಯ ಕುಡಿಗಳು
ಉರಿವ ಸೂರ್ಯನ ಮರಿಗಳು
ಒಟ್ಟು ನಿಂತರೆ ದಟ್ಟ ಕತ್ತಲೆಯನ್ನೆ ಅಟ್ಟುವ ಕಲಿಗಳು!
ನರಕನಾಳಿಕೆ ತೊಲಗಿತು
ಬೆಳಕು ಭೂಮಿಗೆ ಇಳಿಯಿತು
ಎಂಬ ಸಂದೇಶವನು ಭೂಮಿಗೆ ತಂದಿತೀ ದೀಪಾವಳಿ.
ಬಾಣಬಿರುಸು ಪಟಾಕಿಯ
ತರಿಸಿ ಮಕ್ಕಳ ಕೇಕೆಯ
ಸಂಭ್ರಮದ ಸಾಗರವೆ ಹಬ್ಬಿಸಿ ಬಂದಿತೀ ದೀಪಾವಳಿ.
*****