ಅಫಜಲ್‌ಗಂಜಿನಲ್ಲೊಂದು ದಿನ
ಅಲ್ಬುಕರ್ಕೆಂಬವನು ತನ್ನ
ಆಫೀಸಿನಿಂದ ಮರಳುತ್ತಿದ್ದವನು
ಮಾಯವಾದನು ಇದ್ಡಕ್ಕಿದ್ದ ಹಾಗೆ
ಚಾವಣಿಯಿಂದ ಹೊಗೆ
ನೆಲದಿಂದ ಧಗೆ
ಎದ್ದು ಹೋದ ಹಾಗೆ
(ಸಿನಿಮಾ ಕತೆಗಳ ಮಾದರಿ)
ಆದರಿದು ಮಾತ್ರ ಖಾತರಿ)
ಎಲ್ಲಿ ಹೋದನಲಲ್ಬುಕರ್ಕ
ಪರಿಪೂರ್ಣ ಕ್ಲರ್ಕ
ಏನಾಯಿತಿವನಿಗೊಳ್ಳೆ
ಕಟ್ಟುಮಸ್ತಾಗಿದ್ದಾತ
ಒಂದು ಹೆಣ್ಣೊಂದು ಗಂಡು
ಆದರ್ಶ ನಾರಿಯ ಕೈಹಿಡಿದ
ಸುಖ ಸಂಸಾರಿ!
ಅತ್ತಲೊಂದು ಹುಣಸೆಮರ
ಇತ್ತಲೊಂದು ಸರೋವರ
ರೈಲು ಹತ್ತಿದರಿನ್ನು ಸೋಲಾಪುರ
ಎಲ್ಲ ತಿಳಿದವನು ಒಬ್ಬನೇ ಒಬ್ಬ
ಮೋಯಿನುದ್ದೀನನೆಂಬ ಬಾಬ
ದಾಡಿಯೇ ಎರಡು ಮೊಳ
ಕಂಡವರಿಲ್ಲ ಕಣ್ಣುಗಳ ಆಳ
ಮಹಾ ಮೌನಿ-ವರ್ಷಕ್ಕೊಮ್ಮೆ ಮಾತ್ರ
ಮಾತನಾಡುವ ಜ್ಞಾನಿ
ಇದ್ದಾನೆ ಗೋಲ್ಕೊಂಡದ ಗವಿಯೊಳಗೆ
ಕಾಣಿಸದೆ ಕಣ್ಣಿಗೆ
*****