ಜ್ಞಾನವೆಂಬುದು ಚೀಲದೊಳಗಣ ಜೀರಿಗೆಯೇ?

ಜ್ಞಾನವೆಂಬುದು ಚೀಲದೊಳಗಣ ಜೀರಿಗೆಯೇ?

ಚಿತ್ರ: ಗರ್ಡ ಆಲ್ಟಮನ್

ವಿಚಾರವನ್ನು ಕೇವಲ ಪ್ರಚಾರದ ಘಟ್ಟದಲ್ಲಿ ನೆಲೆ ನಿಲ್ಲಗೊಡದೇ, ಆಚಾರದ ಅಂಕಣದಲ್ಲಿ ಕ್ರಿಯಾಶೀಲ ಗೊಳಿಸಿದವರು ಶರಣರು ಶರಣೆ ರೆಮ್ಮವ್ವೆ… ‘ ಆಚಾರವೇ ಪ್ರಾಣ ಲಿಂಗವಾದ ರಾಮೇಶ್ವರಲಿಂಗ” ವೆಂದು ಸಾರಿದ್ದಾಳೆ. ಅಂತರಂಗದ ಚಿಂತನೆಗಳನ್ನು ಪ್ರಯೋಗ ಮುಖವಾಗಿ ದುಡಿಸಿದವರು ಶರಣರು. ಕೇವಲ ಹೇಳುವವರು ಅವರಲ್ಲ. ಸ್ವಾನುಭವದಲ್ಲಿ ನೆಲೆನಿಂತು ಮಾಡಿ ತೋರಿಸುವವರು!

ಹಿಂದೆಂದಿಗಿಂತಲೂ ಇಂದು ವಚನ ಸಾಹಿತ್ಯ ನಮಗೆ ಕ್ಷಿಪ್ರ ಪ್ರಸ್ತುತವೂ ಆತ್ಮ ಸ್ನೇಹಿಯೂ ಆಗಿರುವುದು ಈ ಸಹಸ್ರಮಾನದ ಒಂದು ಅಚ್ಚರಿ. ಮಾನವನ ಹೂತುಂಬಿದ ಹೃದಯದಲ್ಲಿ ವಿಷ ತುಂಬಿದ ಜಾಗತಿಕ ದ್ವೇಷ, ತೇಷ, ಅಸೂಯೆ, ಶ್ರಮ ವಂಚನೆ, ಶೋಷಣೆ ಅನ್ಯಾಕ್ರಮಗಳ ದಮನಕ್ಕೆ ದನಿ ಎತ್ತಿದವರು ಬಸವಣ್ಣನವರು. ಪ್ರೀತಿ ರೀತಿ ನೀತಿಯ ತ್ರಿಕೂಟ ಕಾಯಕ ಸಂಹಿತೆಯೇ ಬಸವ ಸಿದ್ಧಾಂತ, ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ… ತನಗಾದ ಆಗೇನು… ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನ ಅರುಹಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡುವುದೇ?… ಎಂದು ಬಸವಣ್ಣನವರು೨೧ನೆಯ ಶತಮಾನದ ಸಹಸ್ರ ದ್ವಂದ್ವಗಳನ್ನು ತಿವಿದು ಕೇಳುತ್ತಾರೆ.

ಇಂದು ನೂರೆಂಟು ಬಣ್ಣ, ಬೆಡಗು, ಎಳೆತ, ಸೆಳೆತಗಳು ನಮ್ಮನ್ನು ನಿರಂತರ ಸತ್ಯದ ಮಧ್ಯ ಬಿಂದುವಿನಿಂದ ದೂರ ದೂರ ಒಯ್ಯುತ್ತಿವೆ. ಮಾನವನ ಮಹಾವೃಕ್ಷದ ಮಡಿಲಲ್ಲಿಯೇ ನಾವು ಮಾನವತೆಯನ್ನು ಮರೆತ ಮರಗೂಳಿಗಳಾಗಿ ವರ್ತಿಸುತ್ತಿರುವುದು ಈ ಕಾಲದ ದುರಂತ.

ಈ ಕಾಲದ ಪ್ರಚ್ಛನ್ನ ಪ್ರಚಾರ ಯುಗಕ್ಕೆ ಶರಣೆ ಲಕ್ಕಮ್ಮ ಕಡ್ಡಿ ಮುರಿದು ಹೇಳುತ್ತಾಳೆ. ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ, ಅಷ್ಟೇ ಅಲ್ಲ… ‘ ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ’ ವೆಂದೂ… ‘ ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ’ ಎಂದೂ ಬೆಣ್ಣೆಯಲ್ಲಿ ಕದಿರು ಇಟ್ಟು ಚುರುಕು ನೀಡುತ್ತಾಳೆ.

ಈ ಮಾತು ಈ ಶತಮಾನದ ನಮ್ಮ ಸಮಗ್ರ ಶಿಕ್ಷಣ ಪದ್ಧತಿಗೆ ಹಾಕಿದ ಪ್ರಶ್ನೆಯೇನೊ ಎಂದು ಒಮ್ಮೊಮ್ಮೆ ಭಾಸವಾಗುತ್ತದೆ. ಹೊಟ್ಟೆಗಾಗಿ ಶಿಕ್ಷಣ, ನೌಕರಿಗಾಗಿ ಶಿಕ್ಷಣ… ಇದು ಇಂದಿನ ಬದುಕಿನ ಮೂಲಭೂತ ಅಗತ್ಯತೆ ಆಗಿರಬಹುದಾದರೂ, ಶಿಕ್ಷಣದ ಆತ್ಮವೇ ಅರುಹು! ಇದು ನಮ್ಮ ತುತ್ತಿನ ಚೀಲ ತುಂಬಿಸುವ ತುರ್ತಿನ ದಾರಿಯಲ್ಲ. ಇದು ಬೆಳಗಿನ ಬೆಳಗು. ಇಂಥ ಉಜ್ವಲ ಆತ್ಮ ಸ್ಮೃತಿಯ ಪ್ರಭೆಯಿಲ್ಲದ ಮಾನವ ವೃಕ್ಷವನ್ನೇ ಶರಣ ಕೋಲಶಾಂತಯ್ಯ ಒಂದು ಬೇವಿನ ಮರಕ್ಕೆ ಹೋಲಿಸಿ ಎಷ್ಟು ಸೊಗಸಾಗಿ ಹೇಳಿದ್ದಾನೆ ಅಂತೀರಿ.

ಬೇವಿನ ಮರದಲ್ಲಿ ಕಾಗೆ ಮನೆಯ ಮಾಡಿತ್ತು
ಕೋಗಿಲು ಮರಿಯ ಹಾಕಿತ್ತು
ಗೂಗೆ ಹಾರೈಕೆಯ ಮಾಡಿ ಸಾಕಿತ್ತು
ಹಂಸೆ ತಂಬೆಲರ ಕುಟುಕ ಕೊಟ್ಟು ಸಂಭ್ರಮವ ಮಾಡಿತ್ತು
ಅದು ಆರ ಹಂಗಿಲ್ಲದೆ ಹಾರಿ ಹೋಗುತ್ತಾ
ಎನಗೆ ಬೇವಿನ ಮರನೆ ತಾಯಿ ಎಂದಿತ್ತು
ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ!

ಇಂದು ಮಾನವೀಯ ಶೋಷಣೆ, ಧರ್ಮದ ವ್ಯಾಪಾರೀಕರಣ, ಮೌಲ್ಯಗಳ ಒಮ್ಮುಖ ದೋರಣೆ, ಸ್ವಜನಪಕ್ಷಪಾತ, ಅತ್ಯಾಸೆ ಗಳು ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿರದೆ, ಸಪ್ತಸಾಗರಗಳು ಸುತ್ತಿರುವ ಸಮಗ್ರ ಭೂ ಖಂಡವನ್ನೇ ಕಬಳಿಸುತ್ತಿರುವುದು ದೊಡ್ಡ ದುರಂತ. ಇಂತಹ ಧಾರ್ಮಿಕ ಮೌಲ್ಯಗಳ ನಗದೀಕರಣ ಹಾಗೂ ಸಂಕುಚಿತ ಲಾಭದ ಒಳಸುಳಿಗಳನ್ನು ಅಮುಗೆ ರಾಮಯ್ಯ ಶರಣ ಎಷ್ಟೊಂದು ವ್ಯಂಗ್ಯವಾಗಿ ಧ್ವನಿಸಿದ್ದಾನೆ ಇಲ್ಲಿ ನೋಡಿರಿ –

ಜ್ಞಾನವೆಂಬುದು ಬೀದಿಯ ಪ್ರಸಾರವೇ?
ಬೊಕ್ಕಣಕ್ಕೆ ತುಂಬುವ ಹುರುಳಿಯೇ?
ಚೀಲದೊಳಗಣ ಜೀರಿಗೆಯೇ?
ಗಾಣದೊಳಗಣ ಹಿಂಡಿಯೇ?
ಜ್ಞಾನವೆಂಬುದ ಎಲ್ಲರೊಡನೆ ಬೀರದಿರಬೇಕು!
ಗೆಲ್ಲ ನಿನ್ನ ಮಾತು ಬಂದರೆ ಗೆಲ್ಲುವ ನುಡಿಯದಿರಬೇಕು!
ಹೀಂಗಿರಬಲ್ಲಡೆ ವಿರಕ್ತ ನೆಂಬೆನು, ಈಶ್ವರನೆಂಬೆನು,
ಅಮುಗೇಶ್ವರ ಲಿಂಗವೆಂಬೆನು.

ಇಂತಹ ನಿರ್ಮಮತೆ ಹಾಗೂ ನಿರ್ವಂಚನೆಯ ಸೇವಾಧಾರಿಗಳು ಎಷ್ಟಿದ್ದಾರೆ ಈಗ? ಸಾವಿರಸಲ ಬಸವಣ್ಣನನ್ನು ನೆನೆಯಬಹುದು… ಹತ್ತು ಸಾವಿರ ಬಾರಿ ಗಾಂಧೀಜಿ ಅಂಬೇಡ್ಕರ ಮದರ ತೆರೆಸಾರನ್ನು ಸ್ತುತಿಸಬಹುದು… ಆದರೆ ತ್ಯಾಗದ ಮೂಲ ಪ್ರಶ್ನೆ ಬಂದಾಗ ಮಾತ್ರ ನಾವು ನಮ್ಮ ಹಿತರಕ್ಷಣೆಯನ್ನೇ ಮುಖ್ಯವಾಗಿ ಆಯ್ಕೆ ಮಾಡಿಕೊಳ್ಳುತ್ತೇವೆ. ಲೋಕಸೇವೆ, ಪತಿತೋದ್ಧಾರ, ಮಾನವ ಕಲ್ಯಾಣ, ರಾಷ್ಟ್ರೀಯ ಪ್ರಜ್ಞೆ, ಪರಿಸರ ರಕ್ಷಣೆ… ಇವೆಲ್ಲಾ ಆನಂತರದ ಮಾತಾಗಿ ಉಳಿದುಬಿಡುತ್ತವೆ! ಮೊದಲು ನಾನು, ನಂತರ ಎಲ್ಲ!! ಈ ದಾರಿಯಲ್ಲಿ ನಾವು ಪಶು ಪಕ್ಷಿ ಗಳಿಗಿಂತಲೂ ಕೆಳಗಿನ ಸ್ತರಕ್ಕೆ ಇಳಿದಿದ್ದೇವೆ ಎಂದು ಬಸವಣ್ಣನವರು ಸಾತ್ವಿಕ ಸಂತಾಪ ದಿಂದ ವಚನಿಸುತ್ತಾರೆ-

ಕಾಗೆ ಒಂದಗಳು ಕಂಡಡೆ ಕರೆಯದೆ ತನ್ನ ಬಳಗವನು?
ಕೋಳಿಯೊಂದು ಕುಟುಕ ಕಂಡಡೆ ಕೂಗಿ ಕರೆಯದೆ
ತನ್ನ ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವಾ!

‘ಭಕ್ತಿ ಪಕ್ಷ’ವೆಂದಾಗ ಜಾತಿಯತೆ- ರಾಜಕೀಯತೆಗಳ ಸಂಕುಚಿತ ಪ್ರಕಾರಗಳಾಚೆ ಹಾರಬಲ್ಲ ಸೀಮಾತೀತ ಪ್ರಜ್ಞೆ ಎಂಬ ದಿವ್ಯ ಅರ್ಥ ಇಲ್ಲಿ ಸ್ಪುರಿಸುತ್ತದೆ.

ಮನಸಂದ ಮಾರಿತಂದೆ ಶರಣ ಕೂಡ ಇದನ್ನೇ… ‘ಖ್ಯಾತಿ ಲಾಭಕ್ಕೆ ಮಾಡುವಾತ ಭಕ್ತನಲ್ಲ. ಡಂಬಕಕ್ಕೆ ಡೊಂಬರಂತೆ ತಿರುಗುವವ ಜಂಗಮನಲ್ಲ… ತನು, ತಲೆ ಬತ್ತಲೆಯಾಗಿ ಮನ ತ್ರಿವಿಧದ ಆಸೆ ಉಳ್ಳನಕ್ಕ ವಿರಕ್ತ ನಲ್ಲ… ನೀ ಸತ್ತೆ ನಾ ಕೆಟ್ಟ… ಮನಸಂದಿತ್ತು ಮಾರೇಶ್ವರಾ…’ ಎಂದು ವ್ಯಂಗ್ಯ ಮಾಡಿದ್ದಾನೆ. ಆಚಾರ ಸಂಹಿತೆಯನ್ನು ಬಸವಣ್ಣ ಇನ್ನೂ ಸ್ಪಷ್ಟ ಗೊಳಿಸುತ್ತಾನೆ.

‘ಒಲ್ಲೆನೆಂಬುದು ವೈರಾಗ್ಯ! ಒಲಿವೆನೆಂಬುದು ಕಾಯಗುಣ!
ಆವ ಪದಾರ್ಥವಾದಡೇನು,
ತಾನಿದ್ದೆಡೆಗೆ ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ!
ಕೂಡಲಸಂಗಮದೇವನೊಲಿಸಬಂದ
ಪ್ರಸಾದ ಕಾಯವ ಕೆಡಿಸಲಾಗದು’

ನೋಡಿ, ನಮ್ಮ ಆಚಾರ ಸಿದ್ಧಾಂತ ವಿಚಾರಸಿದ್ಧಾಂತದ ನೆಲೆಗಟ್ಟಿನ ಮೇಲೆ ಎಷ್ಟೊಂದು ಭದ್ರವಾಗಿ ನೆಲೆಯೂರಿ ನಿಂತಿದೆ! ಅಸಿ, ಮಸಿ, ಕೃಷಿ, ವಾಣಿಜ್ಯ ಮುಂತಾದ ಕಾಯಕವ ಮಾಡಿ… ವ್ರತಕ್ಕೆ ಊಣೆಯಿಲ್ಲದೆ ಕಾಯಕ ಮಾಡುವ ಭಕ್ತನ ಅಂಗಳವೇ ಅವಿಮುಕ್ತ ಕ್ಷೇತ್ರವೆಂದು ಶರಣೆ ರೆಮ್ಮವ್ವೆ ಗಾನಿಸಿದ್ದಾಳೆ. ಅಸಿ ಅಂದರೆ ಖಡ್ಗ ಕಾಯಕ… ಅಂದರೆ ಕ್ಷತ್ರಿಯ ಕರ್ಮ… ಮಸಿ ಅಂದರೆ ನಾವು ಪೆನ್ನು- ಪೆನ್ಸಿಲಿನಿಂದ ಮಾಡುವ ನಮ್ಮ ಆಫೀಸ್ ಡ್ಯೂಟಿ… ಕೃಷಿಯೆಂದರೆ ಒಕ್ಕಲುತನ… ವಾಣಿಜ್ಯ ವೆಂದರೆ ದುಡ್ಡಿನ ಗುಣಾತ್ಮಕ ದುಡಿಮೆ… ಇವುಗಳಿಗೆ ಜ್ಞಾನದ ಚಿಂತನೆ ಹೊಚ್ಚಿದ ಶರಣೆ ರೆಮ್ಮವ್ವೆಯ ವೈಚಾರಿಕ ಹರವು ಎಷ್ಟೊಂದು ಅದ್ಭುತವಾಗಿದೆ!

ವರ್ಗ ದ್ವೇಷ, ವರ್ಣ ಕಲಹ, ಮತೀಯ ಜಾತ್ಯಾಂಧತೆ, ಜನಾಂಗೀಯ ಕ್ರೌರ್ಯಗಳು ಇಂದು ದೇವರ ಹೆಸರಿನಿಂದ, ಸಿದ್ಧಾಂತದ ಹೆಸರಿನಿಂದ ಜಾಗತಿಕ ರಂಗದಲ್ಲಿ ಕೆಸರು ಎರಚುತ್ತಿರುವದು ಶೋಚನೀಯ ಸಂಗತಿ. ಇದು ಇಂದು ಇಡೀ ಭವನವನ್ನೇ ಭಸ್ಮ ಗೊಳಿಸುತ್ತಿರುವ ವಿಷದ್ವಂದ್ವ, ಮರಹಿನ ಮಂಗನಾಟ. ಈ ನಿಟ್ಟಿನಲ್ಲಿ ಬಸವಣ್ಣನವರು… ‘ ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ನೆಲ ಹತ್ತಿ ಉರಿದಡೆ ನಿಲಲು ಬಹುದ‌ಎ?… ಏರಿ ನೀರುಂಬಡೆ… ಬೇಲಿ ಕೆಯ್ಯ ಮೇವಡೆ… ನಾರಿ ತನ್ನ ಮನೆಯಲ್ಲಿ ಕಳುವಡೆ… ತಾಯ ಮೊಲೆ ಹಾಲು ನಂಜಾಗಿ ಕೊಲುವಡೆ… ಇನ್ನಾರಿಗೆ ದೂರವೆನಯ್ಯಾ…’ ಎಂದು ತೋಡಿಕೊಂಡ ಅಳಲು. ಅದೇ ಪ್ರಗಾಢತೆಯಲ್ಲಿ ಅನುಭವಿಸುವುದಾದರೆ, ಜಾಗತಿಕ ಘಾಯ ಘರ್ಷಣೆಗಳಿಗೆ ನಿಮಿಷಾರ್ಧದಲ್ಲಿ ಪರಿಹಾರ ಸಿಕ್ಕಿತು! ನೋಡಿ ಶಾಲೆ ಪರೀಕ್ಷೆ ಗೂಗಲ್
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೈವಾಡ!
Next post ಬೆಳ್ಳುಳ್ಳಿ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…