ಅಡುಗೆಯ ರುಚಿಗೆ ಮಾತ್ರ ಗಮನಕೊಟ್ಟರೆ ಸಾಕಾ?

ಅಡುಗೆಯೊಳಿರಲಿ ರುಚಿಗಷ್ಟು ಗಮನ ಜೊತೆ ಗೂಡಿ ದೇಶಕಾಲದೊಳಡಗಿರ್‍ಪಾರೋಗ್ಯ ದೆಡೆಗಿರಲಿ ಸರಿ ಮಿಗಿಲು ನಮನ ತುಡುಗಿನಡುಗೆಗಾರೋಗ್ಯದಡಿಸುಡಲು ಹೂಡಿದೆಲ್ಲ ಸಮಯ ಸಂಪದ ವ್ಯರ್‍ಥ - ವಿಜ್ಞಾನೇಶ್ವರಾ *****

ಶಿರ ಕೆಳಗಾಗಿ ನಡೆಯುವುದೇನು?

ಜಾರುಗತಿಯೊಳೆಮ್ಮ ಬೇಕಿನೊಳನ್ನ ಮೊದಲೊ ಳಿರುತಿರಲು ಅನ್ನದುದ್ಯೋಗವೆಲ್ಲದಕು ಮೊದಲಿರಬೇಕು ವಸ್ತ್ರ ವಸತಿಯುದ್ಯೋಗಗಳದರ ಹಿಂದಿರಬೇಕು ನೇರ ನಡೆಯಲರಿಯದದೇನು ಸಾಧನೆಯೋ ಶಿರಸಾಸನವನೆಲ್ಲರೆಲ್ಲೆಲ್ಲೂ ಮಾಳ್ಪರಲಾ - ವಿಜ್ಞಾನೇಶ್ವರಾ *****

ಮತ್ತೆ ವಿಷ ಹೊರುವುದನೆ ಕೌಶಲವೆನಬಹುದೇ?

ಅತ್ತಲಾ ಹೊಟ್ಟೆಯನ್ನದ ಭಾಂಗಿಯನವರ ಬೆನ್ನಿನಲಿ ಹೊತ್ತವರು ಹೊತ್ತು ಕಳೆಯಲು ಬೆಟ್ಟವನು ಹತ್ತಿರಲಿತ್ತಲಾ ಹೊಟ್ಟೆಯನ್ನವ ಬೆಳೆವವರು ಹೊತ್ತು ಸೋತಿಹರಲಾ ವಿಷಭಾಂಡವನವರ ಬೆನ್ನಿನಲಿ ವಿತ್ತ ಚೇಷ್ಟೆಯೊಳೆಲ್ಲ ವಿಷವೆಲ್ಲರಾ ಚಿತ್ತದಲ್ಲಿ - ವಿಜ್ಞಾನೇಶ್ವರಾ *****

ಕನ್ನದ ದಾರಿಯಲ್ಲಿ ಅನ್ನ ಬದಲಿಸಿದರೆ ಅಪಾಯ ತಪ್ಪಿತೇ?

ಏನೆಂಥ ದುರ್ಗತಿಯು ಬಂದೊದಗಿತಲಾ ಹೀನವೆನುತಾ ಮಧು ಫಲಕ ಬದಲಾಗಿ ತೃಣ ಧಾನ್ಯವನೆ ಸಿರಿಧ್ಯಾನವೆನುತಾರೋಗ್ಯವನು ಕನವರಿಸುತಲದದೇ ದಿನಪನುರಿಯನೇರಿಸುವ ದಿನಚರಿಯ ಮೋಹ ಮದ್ಯದೊಳಿರಲು - ವಿಜ್ಞಾನೇಶ್ವರಾ *****

ಇಂಥಾ ಬಕಾಸುರ ಸಾಮರ್ಥ್ಯವೆಮಗ್ಯಾಕೋ?

ಒಂದಕೊಂದಿನ್ನೊಂದು ತಿಂದು ಬದುಕಿದರು ಕುಂದಿಲ್ಲದೆಲ್ಲ ವೈವಿಧ್ಯ ವೃದ್ಧಿಸುತೆ ಹಂತ ಹಂತದೊಳಭಿವೃದ್ಧಿ ಮೆರೆವೆಮ್ಮ ಪ್ರಕೃತಿ ಯಂತರಂಗವದೇನು? ಬಿಂಬವನೆ ಕೊಂ ದುಂಬ ಪ್ರತಿಬಿಂಬವನಿಲ್ಲ ಸೃಜಿಸಿತಲಾ - ವಿಜ್ಞಾನೇಶ್ವರಾ *****

ರುಚಿಯನೆಲ್ಲಿ ಹುಡುಕುವಿರಿ? ದುಡಿದುಂಬ ಹಸಿವಿಲ್ಲದಿರೆ?

ರುಚಿಗೆಂದು, ಹೊಸತೆಂದು ಏನ ಮಾಡಿದೊಡೇನು? ರುಚಿ ಇಹುದು ಹಸಿದುಣುವ ದುಡಿಮೆಯೊಳದುವೆ ಖಚಿತದೊಳನುದಿನವು ಹೊಸತನಿಕ್ಕುತಿರೆ ಅರಸುತ ಲಾಚೀಚಲೆವೆಮ್ಮವಸರದೊಳ್ ಕಳೆದು ಹೋಗಿಹುದಾ ಪಚನ ರಸಶಕ್ತಿಯೊಡಗೂಡಿ ಪ್ರಕೃತಿ ಯುಕ್ತಿ - ವಿಜ್ಞಾನೇಶ್ವರಾ *****

ಆ ವಿಷವು ವಿಜ್ಞಾನಿಯ ಆಯ್ಕೆಯಾಗಬಹುದೇ?

ಅಂಗಡಿಯೊಳನ್ನಾಹಾರ ದೊರಕುತಿರಲೀತನು ಆರಾಮದೊಳಲೆಯುವನೋ ಓದಿದಾತನು ಅಮೃತಕು ವಿಷಕು ಅಂತರವನರಿಯದಾತನು ಅಂತೆ ಪೇಳುವನು ತಾನು ವೈಜ್ಞಾನಿಕನು ಆಯ್ಕೆಯಾಲಿ ಕೆಡುಕನೇ ಕೊಂಡುಣ್ಣುವನು - ವಿಜ್ಞಾನೇಶ್ವರಾ *****

ತನು ಬೆವರದೆ ಅನ್ನದನುಭವ ಸಾಧ್ಯವೇ?

ಅನುಭವದಡುಗೆಗೆ ಮೂಲವದೇನು? ಅದು ಬರಿ ಮಣ್ಣು. ಮಣ್ಣಿಂದಲಾಗಿರಲೀ ಅಂದದಾ ತನುವಿದಕೆ ಮಣ್ಣಿನಾಧಾರದೊಳೆಲ್ಲ ಅನ್ನವಿರುತಿರಲು ಅನುಭವದನ್ನಕ್ಕೆ ಆ ಬೆವರಿನಾರ್‍ದ್ರತೆಯೆ ಮೂಲವಲಾ -ವಿಜ್ಞಾನೇಶ್ವರಾ *****

ಮರೆತರಾ ಹಣ್ಣನೆಂತೇಮ್ಮ ಜೀವನ ಫಲವಂತವಪ್ಪುದೋ?

ಕುರಿತಾಲೋಚಿಸಿದರರಿಯುವುದು ಹಣ್ಣಿನಾ ಹಿರಿಮೆಯದನುಣ್ಣಲಿಕೆ ಬೇಕಿಲ್ಲ ಸಾರು ಸಾಂ ಬಾರು, ಅಕ್ಕಿಯನ್ನವನೆಂದಾದೊಡಂ ಉಣಲುಂಟೆ ಬರಿದು? ಸಂತೆಯಿಂದೇನನುಂ ತರದೇ ಸುಖಿಸಿ ದರದುವೆ ಫಲವಂತ ಜೀವನವು - ವಿಜ್ಞಾನೇಶ್ವರಾ *****

ರೈತೆಂಬ ಪರಮ ಪದವಿಂತು ವ್ಯರ್ಥವಾಗಬಹುದೇ?

ರೈತೆಂಬ ಪದದೊಳಿಹುದೆಂಥ ತಾಕತ್ತು ರೈತೆಂದರದು ಸಂಪತ್‌ಸಹಿತಿರುವ ಮಹತು ಅತ್ತಿತ್ತಲೆಯದಲೆ ತುತ್ತುಣುವ ಸ್ವಾಭಿಮಾನದ ಗತ್ತು ಅತ್ತತ್ತ ಹಾರಿತೆಲೋ ಪೇಟೆಡೆಗೆ ಈ ಹೊತ್ತು ನಿತ್ಯ ನೂತನ ರೈತನಕಿದೆಂಥ ಪಾಡಾಯ್ತು - ವಿಜ್ಞಾನೇಶ್ವರಾ *****