ಕೃಷಿಯೆಂದು ಒಂದು ಹೆಸರು ಸಾಲದೇ ?

ಕೃಷಿಯೆಂದರೊಂದೇ ಹೆಸರಿತ್ತಂದು ರಾಶಿ ಹೇಳುವರಿಂದು ಹೆಸರ ನೂರೊಂದು ಹುಸಿ ಹೆಸರುಗಳಲ್ಲಲ್ಲೇ ಹಿಂದು ಮುಂದು ಕಾಸಿನವಸರವೆಂದು, ಅಧಿಕ ಇಳುವರಿಗೆಂದು ಹೊಸ ಘಾಸಿ ತಂತ್ರದೊಳೆಲ್ಲ ಜಗ ಬರಿದಿಂದು - ವಿಜ್ಞಾನೇಶ್ವರಾ *****

ಗರಿಕೆಯ ಮಿತಿಯ ನೀವ್ ತಿಳಿಯದವರೇ ?

ಏರಲಾರದದು ಆಕಾಶದೆತ್ತರಕಾದೊಡಂ ಹೋರಿ ಬಾಳ್ವುದದು ಮಣ್ಣಿರುವ ತನಕ ತರತರದ ಹೂ ಹಣ್ಣು ಕೊಡದಾದೊಡಂ ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ ಗರಿಕೆಯಂತೆನ್ನ ಕವನ ಸಂಗ್ರಹವು - ವಿಜ್ಞಾನೇಶ್ವರಾ *****

ಬರಿ ನಾರೆನಲುಂಟೇ ? ನಾರಿಕೇಳವನು ಸುಲಿದುಣಬೇಡವೇ ?

ಬುದ್ಧಿಯನ್ನು ತಿದ್ದಲಿಕೆಂದು ಲೋಕವನೆ ತಾ ಬಯ್ದು ಭರದೊಳಂತೆ ತಿರುಗಿ ಬಯ್ದವರೆನ್ನ ಬಂಧುಗಳೆಂದು ಬರೆದೊರದೊದೆಸಿಕೊಂಡವರೆಷ್ಟೋ ಜನರಾಗಿಹರು ಹಿಂದು ಬಲಕಪ್ಪ ಅನ್ನದೊಳು ಜೊತೆಗೂಡಿ ನಾರಿರ್ಪಂತೆನ್ನ ಬರಹಗಳಿವ್ ಹಿಂದಾದವರ ಜೊತೆಗೊಂದು ಬಿಂದು - ವಿಜ್ಞಾನೇಶ್ವರಾ *****

ವೇಳೆ ಗಡು ನಿಯಮವದೇನು ಆತ್ಮ ಶೋಧನೆಗೆ ?

ಮಲ ಶೋಧನೆಯ ವೇಳೆ ವ್ಯರ್ಥವಾಗದಂದದಲೆನ್ನ ಒಳ ಮನವೆನ್ನ ಜೀವನವನವಲೋಕಿಸುತಿರಲಾಗ ತಳೆದಿರ್ಪ ಕವನಗಳಿವ್ ಗೊಬ್ಬರವೆಂದವಗಣಿಸದಿರಿ ಫಲವಂತ ಮರಕೆಲ್ಲದಕು ಮೂಲ ಗೊಬ್ಬರವಲಾ ಬೆಲೆಬಾಳ್ವಾರೋಗ್ಯಕ್ಕೆ ಮೂಲ ಮಲ ಶೋಧವಲಾ - ವಿಜ್ಞಾನೇಶ್ವರಾ *****

ಫಲ ಮೊದಲೊ ? ಮಲ ಮೊದಲೋ ? ನಿರ್ಣಯವುಂಟೆ ?

ಕಳಿತ ಹಣ್ಣನಿಕ್ಕುವುದೆನ್ನ ಕವನದ ಬಯಕೆ ಹುಳಿತವಾದೊಡಂ ಉಣಲಕ್ಕು ಹುಳಿಗೊಜ್ಜಿಗಕ್ಕು ಕೊಳೆತೊಡದುವೇ ಬಿತ್ತಾಗಿ ಹೊಸ ಮರ ಬಕ್ಕು ಕಳಿತ ಗೊಬ್ಬರಕು ಕಳಿತ ಹಣ್ಣಿನಾ ಬೆಲೆ ಇಕ್ಕು ಫಲಿತದೊಳು ತಿಪ್ಪೇಶನಾರಾಧನೆಗೆ ಮಹತಿಕ್ಕು - ವಿಜ್ಞಾನೇಶ್ವರಾ *****

ಕೆಟ್ಟೊಡಾ ಕುಂಭ ಕುಂಡವಾಗೊದಗಿದರಷ್ಟೇ ಸಾಲದೇ ?

ಅಟ್ಟುಣಲಪ್ಪಂತ ಕುಂಭಕಾರಿಕೆ ಎನ್ನೊಲವು ಎಷ್ಟು ಮಾಡಿದರೆನಗೆ ಸಂದಿಲ್ಲವಾ ಕೌಶಲವು ಕಷ್ಟ ಪಟ್ಟೋಡಿಷ್ಟ ಸಿದ್ಧಿಯಲಾ? ಎನಗಾ ಛಲವು ಅಷ್ಟು ಮಾಡಲೊಂದೆರಡು ದಕ್ಕಿದರು ನಲಿವು ಒಟ್ಟೆಲ್ಲ ಕುಂಡವಾದೊಡಷ್ಟೆನಗೆ ನೂಕು ಬಲವು - ವಿಜ್ಞಾನೇಶ್ವರಾ *****

ಮುನ್ನಿನಂತಿನ್ನುಂ ಎನ್ನ ಖುಷಿಯೆನ್ನ ಹಕ್ಕೆಂದೊಡೆಂತಕ್ಕು ?

ಏನಿದೇನಿದೆಲ್ಲರೊಳೆಲ್ಲದರೊಳ್ ತಪ್ಪು ಕಾಣುವಿರೆನ್ನದಿರಿ ಎನ್ನ ತಪ್ಪಲ್ಲವಿದು ಎಮ್ಮಾಯುರ್ವೇದದರಿವಿರ್‍ಪುದಿಂತು ಏನಾದರಾಗಲೆನ್ನ ಮನವೊಪ್ಪದಾ ದಾರಿಯನು ಎಂತು ಅನುಸರಿಪುದೆನ್ನದಿರಿ. ಎಲ್ಲೆಡೆಯೊಳಿಳೆಯಾರೋಗ್ಯ ಕುಂದಿರಲು ಆನೇನ ಮಾಡಲೆಲ್ಲಿ ಪೋದರು ಪೊದರಿರದ ಬರವೆನ್ನ ಸುಡುತಿರಲು - ವಿಜ್ಞಾನೇಶ್ವರಾ *****

ಎಲ್ಲವೆಮಗಪ್ಪಂತಿರಬೇಕೆಂದು ಹೋರಾಡಿದರೆ ಎಲ್ಲಿರ್‍ಪುದಾರೋಗ್ಯ?

ಬಲು ಜಟಿಲವಿಹುದೆಮ್ಮಾಯುರ್ವೇದ ಸೂತ್ರಗಳ ಪಾಲಿ ಸಲೆಂದದನು ಛೀತ್ಕರಿಸಿ ಸುಖವೆಂದೇನೇನೋ ಮಾಡಿ ರಲಾ ದೋಷಗಳೊಂದಾಗಿ ಇಳೆಯ ಕಳೆ ಕಳೆಯುತಿ ರಲೆಮಗಿನ್ನು ಆಯ್ಕೆಯುಳದಿಲ್ಲ, ಬದುಕುಳಯ ಲೆಲ್ಲ ತರ ಪಥ ಪಥ್ಯ ದರ್ಶನವನಿವಾರ್‍ಯ - ವಿಜ್ಞಾನೇಶ್ವರಾ *****

ಸರ್ವರೊಳಿತಿರುವ ಹಳ್ಳಿಪರ ಹೋರಾಡುವನಿವಾರ್‍ಯತೆಗೇನೆನ್ನುವುದು?

ಅರ್ಜುನನ ಪಾಡಿಂದೆನಗೆನ್ನ ಕೃಷಿಯ ಪರ ಬರೆವೀ ಹೊತ್ತಿನಲಿ, ಶಲ್ಯ, ಭೀಷ್ಮ, ದ್ರೋ ಣರಂಥವರೆಷ್ಟೊಂದು ಸಜ್ಜನ ಬಂಧುಗಳೆನ್ನ ವರಿಂದು ಪೇಟೆಯ ಪಕ್ಷದೊಳಿರುತಿಹರು ಪರಿಸರದ ಪರವಿತ್ತ ಕೃಷಿಗೆ ಬರಲೆಡೆ ಕಾಣದವರು - ವಿಜ್ಞಾನೇಶ್ವರಾ *****

ಲೋಕಾಚಾರವನು ಲೆಕ್ಕಚಾರಗೊಳಿಸಲುಂಟೇ ?

ಪಕ್ಕದೊಳು ಕುಳಿತಪ್ಪ ಆತಂಕದೊಳಾಗಾಗ ಚಾ ಲಕ ಮಗನ ವೇಗವತಿಯಾಯ್ತೆಂದು ಬ್ರೇಕೊತ್ತುವಂತೆನ್ನ ಕವನ ಸಾಲುಗಳಿಲ್ಲಿ ಲೋಕ ತಿದ್ದುವೆನೆಂದಲ್ಲ ಕೋಪವಾರಲು ಇಲ್ಲ ಯಾಕದೇನೋ ಅಂತೆ ಕೂಡ್ರಲರಿಯದೊದರಿದಲಾ - ವಿಜ್ಞಾನೇಶ್ವರಾ *****