ಇವನು
ಸಂತೆಯಲ್ಲಿ ವ್ಯಾಪಾರವಿಲ್ಲದೆ ಚಿಂತಿತನಾದ
ಬದುಕಿನ ತದುಕುವಿಗೆ ಮೈಗೊಟ್ಟ
ಬವಣೆಯ ಭಾರಕ್ಕೆ ಬೆಂಬಾಗಿದ
ದುರ್ವಾಸನೆಗಳಿಂದುಸುರು ಕಟ್ಟಿದ
ಪಾಶಗಳಿಂದ ಹೆಡೆಮುರಿ ಕಟ್ಟಿಸಿಕೊಂಡ
ದಾಸ್ಯದೊತ್ತಾಯದ ಜೀತಕ್ಕೆ ಹೆಗಲನಿತ್ತ
ಸ್ವಾತಂತ್ರ್ಯ ಸಂಕೋಲೆಗೆ ಕಾಲನಿತ್ತ
ನಾಯಿ ನರಿ ಗೂಬೆ ಗೋರಿಲ್ಲಾಗಳ
ಎಳೆದಾಟಕ್ಕೆ ನಜ್ಜು ಗೊಜ್ಜಾದ
ಮೀಸಲಡುಗೆಯ ಹಡಬೆನಾಯಿಗಿಕ್ಕಿ ಬಿಕ್ಕಿದ
ಹಣದೊಡನಾಡಿ ಹಾಣಾಹಣಿ ಹೆಣವಾದ
ಕಾಮನ ಕಣ್ಮುಚ್ಚಾಲೆಯಲ್ಲಿ ಕಣ್ಕಟ್ಟಿ
ಗೋಡೆ ಗೋಡೆ ಹಾಯ್ದು ಗಟಾರಕ್ಕೆ ಬಿದ್ದ
ಭೂತವು ಬೆಂಬತ್ತಿ ಬೇತಾಳವಾದಾಗ ತತ್ತಿಹಾಕಿದ
ನರನಾಡಿಗಳೆಲ್ಲ ಇರುಳೆಲ್ಲ ನರಳಿ ರೋಧಿಸಿದರೂ
ಹಗಲ ಹಗರಣದ ಹಡಬಿಟ್ಟಿ ಬಟ್ಟೆಗಳಲ್ಲಿ
ಮೈತೂರಿಸಿಕೊಂಡ ತನ್ನ ತಾ ಕಳಕೊಂಡ
ಹಲವಾರು ಹೆಜ್ಜೆಗಳಲ್ಲೇ ನಡೆದು
ಎಡವಿಎಡವಿ ದಾರಿ ತಪ್ಪಿದ
ಕೆಲವರು ತೋರಿಸಿದಲ್ಲಿ ತೆವಳಿ ಬವಳಿಬಿದ್ದ
ಒಲವಿನ ನೆಲೆಗಾಣದೆ ನೆಲುವಿಗೆ ಹಾರಿಹಾರಿ
ನೆಲಕಂಡು ನೊಂದು ಅವಡುಗಚ್ಚಿದ
ಸಲ್ಲದ ಸಿಂಗಾರಕ್ಕೆ ಒಲ್ಲದೆ ಅಣಿಯಾಗಿ
ಹೂಮುಡಿದು ಎಣ್ಣೆಯುರಿಸಿ ಕಾದೂಕಾದೂ
ಗಂಡ ಬಾರದೆ ಕಂಗಾಲಾದವಳಂತಾದ
ಅರ್ಥವಿಲ್ಲದ ಮಂತ್ರವೂದಿ ಅನರ್ಥದ ಹೊಗೆಎಬ್ಬಿಸಿ
ತತ್ವವಿಲ್ಲದ ತಂತ್ರದಲ್ಲಿ ತಂತಿಯಿಲ್ಲದ ತಂಬೂರಿ ಮೀಟಿದ
ದಿಕ್ಕೆಳೆದ ಕಡೆ ನಡೆದು ದಿಕ್ಕೆಟ್ಟ
ಜೀವನವು ಸಾವಿಗಿಂತ ಕಡೆಯಾದಾಗ
ಮನೆ ಮಸಣದಲ್ಲೋ ಗುಡ್ಡ ಗುಡಿಯಲ್ಲೋ
ಹೊಲ ಹಾದಿಯಲ್ಲೋ ನೆಲಜಲದಲ್ಲೋ
ಕೊನೆಗೊಮ್ಮೆ ಒಳಗಿನಾಳದಿಂದ
ಅಖಂಡ ಗೂಢಗರ್ಭಮೂಲದಿಂದ
ಕರೆಯೊಂದು ಕೇಳಿ ಬಂತು
ಈ ಕರೆಗಳಿಗೆ ಎಲ್ಲರೂ ಕಿವಿದೆರೆದಿದ್ದರೆ
ಇವನು ಕಿವುಡಾಗಿದ್ದ
ಆ ಕರೆಗೆಲ್ಲರೂ ಕಿವುಡಾಗಿದ್ದರೆ
ಇವನು ಕಿವಿದೆರೆದಿದ್ದ ಕಾಣದಿದ್ದುದಕೆ ಕಣ್ತೆರೆದಿದ್ದ
(೨೩-೪-೭೪)
*****