ದೊಡ್ಡವಾಡದಲ್ಲಿ ಇಬ್ಬರು ಗಂಡಹೆಂಡತಿಯಿದ್ದರು. ಗಂಡನು ಬರಿ ಜೀನನಾಗಿದ್ದರೆ ಹೆಂಡತಿ ಜೀನಹಂಕಳಾಗಿದ್ದಳು. ಅವರು ಎರಡೂ ಹೊತ್ತು ಎಂದೂ ಉಣ್ಣುತ್ತಿದ್ದಿಲ್ಲ, ಒಪ್ಪೊತ್ತೇ ಉಣ್ಣುತ್ತಿದ್ದರು. ರೊಟ್ಟಿಯೊಡನೆ ಕಾಯಿಪಲ್ಲೆ ತಿಂದರೆ ರೊಟ್ಟಿಯ ಸ್ವಾರಸ್ಯವೇ ಕೆಡುತ್ತದೆಂದು ಅವರು ತಿಳಿದಿದ್ದರು.
ಒಂದು ದಿನ ಗಂಡನು ಹೆಂಡತಿಗೆ ಹೇಳಿದನು – “ಯಾಕೋ ಹೋಳಿಗೆ ಉಣ್ಣುವಂತಾಗಿದೆ ಮನಸ್ಸು.”
“ಆಗಲಿ. ಆದರೆ ಇಂದು ಬೇಡ, ನಾಳೆಗೆ ಮಾಡೋಣ” ಎಂದಳು ಹೆಂಡತಿ.
ಮರುದಿನ ಮುಂಜಾನೆ ಏಳುತ್ತಲೆ ಗಂಡನು ಗಳಿಗೆಯಲ್ಲಿ ಕೈಹಾಕಿ ಒಂದು ಸೇರಿನಷ್ಟು ಗೋದಿ ತೆಗೆದುಕೊಟ್ಟನು. ಕಡೆಲೆಬೇಳೆ ಮನೆಯಲ್ಲಿದ್ದವು. ತುಪ್ಪ ಸಹ ಮನೆಯದಿತ್ತು. ಅಂಗಡಿಯಿಂದ ಉಪ್ಪು, ಎಣ್ಣೆ, ಬೆಲ್ಲ ತರಬೇಕಾಗುತ್ತದೆ. ಉದ್ದರಿ ತಂದರಾಯಿತು. ಅಂಗಡಿಯವನು ಕೊಟ್ಟಾಗ ತೆಗೆದುಕೊಳ್ಳುತ್ತಾನೆ. ರಿಣ ಆಗುತ್ತದೆ, ಆಗಲಿ.
ಅಡಿಗೆ ಸಿದ್ಧಪಡಿಸಲು ಹೆಂಡತಿಗೆ ಹೇಳಿ ಗಂಡನು, ಜಳಕ ಮಾಡಿ ಬರುವೆನೆಂದು ಹಳ್ಳಕ್ಕೆ ಹೋದನು. ಅದೇ ದಿನ ಸಾಧಿಸಿದಂತೆ ಅವನ ಬೀಗನು ಬಂದನು. ಹಳ್ಳದಲ್ಲಿಯೇ ಅವನ ದರ್ಶನವಾಯಿತು. ಅಕ್ಕನ ಗಂಡನಿಗೆ ಬೀಗನು ಕೈಮುಗಿದನು.
“ನಮ್ಮ ಹೋಳಿಗೆಗೆ ದಾಳಿ ತಂದನೀತನು” ಎಂದು ಬಗೆದು, ಮುಂಚಿತವಾಗಿ ಮನೆಗೆ ಓಡಿ ಬಂದು ಹೆಂಡತಿಗೆ ಹೇಳಿದನು – “ಏನೇ, ಮಾಡಿದ ಹೋಳಿಗೆಗಳನ್ನೆಲ್ಲ ಮುಚ್ಚಿಡು. ನಿನ್ನ ತಮ್ಮ ಬಂದಿದ್ದಾನೆ. ಎಲ್ಲಿ ಕುಳಿತಿದ್ದನೋ ನೋಡಿಕೊಂಡು?”
ಈ ಖೋಡಿ ಏಕೆ ಬಂತವ್ವ ಎಂದು ತಲೆಕಟ್ಟಿಕೊಂಡು ಮಲಗಿ ಬಿಟ್ಟಳು, ಜಡ್ಡಿನ ಸೋಗಿನಿಂದ.
ಅತಿಥಿಯಾಗಿ ಬೀಗ ಮನೆಗೆ ಬಂದನು. ಅವನಿಗೆ ಕುಡಿಯಲು ನೀರು ಸಹ ಕೊಡಲಿಲ್ಲ ಯಾರೂ. ಅಕ್ಕನಂತೂ ಹಾಸಿಗೆಯನ್ನೇ ಹಿಡಿದಿದ್ದಾಳೆ. ಬದುಕುವಳೋ ಇಲ್ಲವೋ?
ಭಾವನು ಹೇಳುತ್ತಾನೆ – “ನೋಡಿದೆಯಾ ಬೀಗ, ನಮ್ಮ ತಾಪತ್ರಯವನ್ನು? ಮೂರು ದಿನಗಳಾದವು ಕೂಳು ನೀರು ಕಂಡಿಲ್ಲ, ರೊಟ್ಟಿ ಮಾಡುವವರೂ ದಿಕ್ಕಿಲ್ಲದಂತಾಗಿದೆ.”
ಬೀಗನಿಗೆ ಆ ಮಾತು ನಿಜವೆನಿಸಲಿಲ್ಲ “ಹೂರಣವನ್ನು ಅರೆಯುವ ಕಲ್ಲನ್ನೇಕೆ ಹೊರಗಿಟ್ಟಿದ್ದಾರೆ? ಏನು ಚಮತ್ಕಾರವಿದು? ಮನೆಯಲ್ಲೆಲ್ಲ ಕಮರಿನ ದುಂದುಕಾರ ಇಡಗಿದೆ. ಇವರು ಹೋಳಿಗೆ ಮಾಡಿದ್ದು ನಿಶ್ಚಯ. ನನ್ನನ್ನು ಕಳಿಸಿಕೊಟ್ಟು ತಾವೇ ತಿನ್ನಬೇಕೆಂದು ಮಂಡಿಗೆ ಮಾಡಿದ್ದಾರೆ” ಎಂದೇ ನಿರ್ಣಯಿಸಿದನು.
ಮತ್ತೆ ಭಾವ ಹೇಳುತ್ತಾನೆ – “ಬೀಗಾ, ನಿನ್ನೂರಿಗೆ ಹೋಗಿಬಿಡು. ಇಲ್ಲಿದ್ದರೆ ಉಪವಾಸ ಮರುಗಬೇಕಾದೀತು.”
ಹೋಗೇ ಬಿಡುತ್ತೇನೆ. ಒಂದು ಚುಟ್ಟ ತಂಬಾಕನ್ನಾದರೂ ಕೊಡು ಸೇದುವದಕ್ಕೆ” ಎಂದನು ಬೀಗ.
“ಮನೆಯ ತಂಬಾಕವನ್ನೆಲ್ಲ ಮೊನ್ನೆಯೇ ಮಾರಿ ಬಂದವು, ಅಂಗಡಿಯಿಂದ ತರಬೇಕೆಂದರೆ ಅವರು ಉದ್ದರಿ ಕೊಡುವುದಿಲ್ಲ” ಎಂದು ಭಾವನು ಮರುನುಡಿಯಲು ಬೀಗನು ಹೊರಟು ಹೋದನು.
“ಏಳು ಏಳು! ಪೀಡೆ ಹೋಯಿತು. ಹಸಿವೆಯಾದ ಕೈಯಲ್ಲಿ ಬಿಸಿ ಬಿಸಿ ಅಡಿಗೆ ಉಣಬಡಿಸು” ಎಂದು ನುಡಿದು, ಗಂಡನು ವಿನೋದಕ್ಕಾಗಿ ಒಂದು ಕಟ್ಟಳೆ ಹಾಕಿದನು. ಏನಂದರೆ – “ಇಬ್ಬರೂ ಕಣ್ಣು ಕಟ್ಟಿಕೊಂಡು ಊಟ ಮಾಡೋಣ. ಅಲ್ಲದೆ ತುತ್ತುಮಾಡಿ ನೀನು ನನಗೆ ಉಣ್ಣಿಸು. ನಾನು ತುತ್ತು ಮಾಡಿ ನಿನ್ನ ಬಾಯಿಗಿಡುತ್ತೇನೆ. ಸಾಕಾಗುವಷ್ಟು ನುಂಗು.”
ಆ ಮಾತು ಹೆಂಡತಿಗೂ ಸಮ್ಮತವಾಯಿತು. ಗಂಡಹೆಂಡಿರಿಬ್ಬರೂ ಕಣ್ಣು ಕಟ್ಟಿಕೊಂಡು ಕುಳಿತುಬಿಟ್ಟರು.
ತನ್ನ ಊರಿಗೆ ಹೋಗುವೆನೆಂದು ಹೇಳಿ ಹೋದ ಬೀಗನು ಎಲ್ಲಿಯೂ ಹೋಗದೆ ಹೊರಳಿ ಬಂದು ಮಾಳಿಗೆ ಏರಿ ಕುಳಿತಿದ್ದನು.
ಮೊದಲಿಗೆ ಹೆಂಡತಿ ಹೋಳಿಗೆಯನ್ನು ಹರಿದು, ತುಪ್ಪದಲ್ಲಿ ಅದ್ದಿ ತುತ್ತು ಮಾಡಿ ಗಂಡನ ಬಾಯಿಕಡೆ ಒಯ್ಯುವುದಕ್ಕೆ, ಮಾಳಿಗೆ ಏರಿದ್ದ ಬೀಗನು ಹವುರಾಗಿ ಇಳಿದು ಬಂದು. ಆ ತುತ್ತು ತೆಗೆದುಕೊಂಡನು ತನ್ನ ಬಾಯಲ್ಲಿ. ಅದರಂತೆ ಗಂಡನು ಹಾಕುವ ತುತ್ತನ್ನೂ ಮಾಳಿಗೆಯ ಬೀಗನು ಅನುಮಾನವಿಲ್ಲದೆ ತೆಗೆದುಕೊಂಡನು. ಪರಸ್ಪರರಿಗೆ ತುತ್ತುಮಾಡಿ ಉಣ್ಣಿಸುವ ಕೆಲಸ ಕೆಲಹೊತ್ತು ಸಾಗಿದ ಬಳಿಕ ಹೆಂಡತಿ ಯೋಚಿಸಿದಳು –
“ನನ್ನ ಗಂಡ ಬಹಳ ಹಸಿದಂತೆ ತೋರುತ್ತದೆ. ಯಾವಾಗಿನಿಂದಲೂ ತುತ್ತು ಮಾಡಿ ಹಾಕುತ್ತಲೇ ಇದ್ದೇನೆ. ಆದರೆ ಅವನು ಮಾತ್ರ ನನ್ನ ಬಾಯಲ್ಲಿ ಒಂದು ತುತ್ತು ಸಹ ಹಾಕಲೊಲ್ಲನಲ್ಲ!”
ಗಂಡನೂ ಯೋಚಿಸಿದನು –
“ಈ ರಂಡೆ ಎಲ್ಲವನ್ನೂ ತಾನೇ ತಿನ್ನುತ್ತಿದ್ದಾಳೆ.”
ಆದರೆ ಅಡ್ಡ ಬಾಯಿ ಹಾಕಿ, ಎರಡೂ ಕಡೆಯ ತುತ್ತುಗಳನ್ನು ಕಬಳಿಸುವ ಬೀಗನು ಬೇರೆಯೇ ಇದ್ದಾನೆ. ಅವನ ಗಡ್ಡ ಮೀಸೆಗಳಲ್ಲೆಲ್ಲ ತುಪ್ಪವು ಸೋರಾಡುವಂತಾಯಿತು. ಹೊಟ್ಟೆ ತುಂಬಿಬಿಟ್ಟಿತು. ಅ ಅ ಽ ಽ ಬ – ಎನ್ನುತ್ತ ಢರಿಬಿಟ್ಟನು.
ಆ ಸಪ್ಪಳವನ್ನು ಕೇಳಿ “ಏನೋ ಘಾತ ಆಯಿತು” ಎನ್ನುತ್ತ ಗಂಡಹೆಂಡಿರಿಬ್ಬರೂ ಕಣ್ಕಟ್ಟು ಕಳಚಿಹಾಕುತ್ತಾರೆ ಮುಂದೆ ಕುಳಿತಿದ್ದಾನೆ ಬೀಗ!
“ಬಹಳ ತುಂಟ ನೀನು” ಎಂದರು.
“ನೀವೇನು ಕಡಿಮೆ? ಹೋಗಿ ಬರುತ್ತೇನೆ. ಕುಶಾಲವಾಗಿ ಇದ್ದುಬಿಡಿರಿ” ಎನ್ನುತ್ತ ಬೀಗನು ಹೋಗಿಯೇ ಬಿಟ್ಟನು.
ಆ ಬಳಿಕ ಗಂಡಹೆಂಡಿರು ಕುಳಿತು ಉಳಿದಷ್ಟು ಹೋಳಿಗೆ, ತುಪ್ಪ ನಗು ನಗುತ್ತ ಊಟಮಾಡಿದರು.
*****