೧
ಈ ಆಲದ ಮರವನ್ನು ನೋಡಿ: ಇದರ ಕೆಳಗೆ ಯಾವ ಮಕ್ಕಳೂ
ಆಡಲಿಲ್ಲ, ಇದರ ಎಲೆಗಳು ಗಾಳಿಯ ಓಟಕ್ಕೆ ಗಲಗಲಿಸಲಿಲ್ಲ,
ಇದರ ಕೊಂಬೆಗಳಿಂದ ಯಾರೂ ನೇಣುಹಾಕಿಕೊಳ್ಳಲಿಲ್ಲ-
ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೆ?
ಅತ್ಯಂತ ನೀರಸವಾದ ಈ ಮರದ ಕಾಂಡದ ಮೇಲೆ
ಚುನಾವಣಾಪತ್ರಗಳನ್ನು ಅಂಟಿಸುವುದಿತ್ತು. ಈ ದಾರಿಯಾಗಿ ಹೋಗುವ
ಕೆಲಸದ ಹೆಂಗಸರು ಮರೆಯಲ್ಲಿ ಕೂತು ಉಚ್ಚೆ
ಹೊಯ್ಯುವುದಿತ್ತು. ಒಮ್ಮೆ ಕೆಲವು ಪಡ್ಡೆಹುಡುಗರು ಇದರ ಮೇಲೆ
ಏನೇನೋ ಹೆಸರುಗಳನ್ನು ಕೊರೆಯಲು ಪ್ರಯತ್ನಿಸಿದ್ದರು.
೨
ಈ ಆಲದ ಮರವನ್ನು ಗಮನಿಸಿ: ಇದರ ತೊಗಟೆಗಳು
ಒಬ್ಬ ವೃದ್ಧನ ಮೈಯಂತೆ ಸುಕ್ಕುಗಟ್ಟಿವೆ ಎಂದರೆ
ಏನನ್ನೂ ಹೇಳಿದಂತಾಗಲಿಲ್ಲ-ಯಾಕೆಂದರೆ ನಿಜವಾಗಿ ಹೇಳುವುದಿದ್ದರೆ
ಇವು ಮರಗಟ್ಟಿವೆ. ಮತ್ತು ಇದರ ಬಳಲುಗಳು ಬೆರಳಿಲ್ಲದ
ತೋಳುಗಳಂತೆ ಇಳಿಬಿದ್ದಿವೆ ಎಂದರೆ ಈ ಆಲದಮರವನ್ನು
ಬಣ್ಣಿಸಿದಂತಾಗಲಿಲ್ಲ. ಯಾಕೆಂದರೆ ಅದು ಮನಸ್ಸಿಗೆ ತರುವುದು
ಶನಿವಾರ-ರವಿವಾರವೆಂದಿಲ್ಲದೆ ಈ ಪೇಟೆಯ ಬೀದಿಗಳಲ್ಲಿ
ಕೈಚಾಚುವ ಭಿಕ್ಷುಕರನ್ನು.
೩
ಹೀಗೆ ನಾವು ಹೋಲಿಕೆಗಳನ್ನು ಕೊಡುವಾಗ ಕೆಲವು ಸಂದರ್ಭಗಳಲ್ಲಿ
ಮರವು ಮನುಷ್ಯನನ್ನೂ ಮನುಷ್ಯನು ಮರವನ್ನೂ
ಸೂಚಿಸುವ ಕಾರಣ
ಹೋಲಿಸದಿರೋಣ.
*****