Home / ಕವನ / ನೀಳ್ಗವಿತೆ / ಯಾತ್ರೆ

ಯಾತ್ರೆ

ಕವಿದಿತ್ತು ಇರುಳು ಮನವೆಲ್ಲ ಮುರುಳು ಏನೊಂದು ತಿಳಿಯದಂತೆ
ಬೀಸಿರಲು ಮಂಜು ಹರಡಿರಲು ನಂಜು ದಶದಿಕ್ಕು ಅರಿಯದಂತೆ
ಯಾತ್ರೆಗೆಯೆ ಎಂದು ಹೊರಟಿರ್‍ದೆನಂದು ತಾಯ್ಮಡಿಲಿನಲ್ಲಿ ಮಲಗಿ
ಹೊಂಗಿರಣವೆಂದು ಬೆಳಗುವುದೊ ಎಂದು ತಳಮಳಿಸುತಿದ್ದೆ ಮರುಗಿ

ಆತುರದಿ ಸೆರಗು ಪಿಡಿದೆಳೆದು ಕೇಳೆ ಬೆಳಕೆಂದು ಬಪ್ಪುದೆಂದು?
“ಇನ್ನಷ್ಟುದಾರಿ ಮುಂದರಿಯೆ ಏರಿ ಬರುವುದೋ ಬೆಳಗಲೆಂದು”
ಬರುವನಕ ಇಂತು ಅಂಧತೆಯೊಳೆಂತು ಮಲಗಿರಲಿ ಅಮ್ಮ ನಾನು?
ಇನ್ನಿಷ್ಟು ದಾರಿ ಸಾಗಲಿಕೆ ಭಾರಿ ವರುಷಗಳೆ ಬೇಕೊ ಏನು?

ಜೀವನದ ಯಾತ್ರೆ ಜಗಳೆಲ್ಲ ಜಾತ್ರೆ ಜನಕೊಂದು ಹಬ್ಬದೂಟ
ಆ ಒಂದು ನಿಮಿಷ ಮನಕೆಲ್ಲ ಹರುಷ ರಸಿಕಂಗೆ ರಸದ ಊಟ
ನಿಬ್ಬಣದ ಮಾಟ ಏನೆಂಥ ಆಟ ಕಣ್ಮನಕೆ ಸರಸ ನೋಟ
ಅಮೃತವು ಕಿವಿಗೆ ವರ್ಣನೆಯ ಸವಿಗೆ ಹೃದಯಕ್ಕೆ ಆಯ್ತೊಮಾಟ

ಹೂ ಬಳ್ಳಿ ಸರಿಸಿ ಧಾರ್ವಾಡ ಮರೆಸಿ ಹಬ್ಬಿತ್ತೊ ತಾಯ ನೋಟ
ನೇಸರನ ಕಿರಣ ತೊಡಿಸಿದಾಭರಣದಿಂದೊಪ್ಪುತಿರ್ದ ಮಾಟ
ಅಂಧತೆಯು ಹರಿದು ತಮವೆಲ್ಲ ಸರಿದು ತುಂಬಿತೋ ಬೆಳಗೊಬೆಳಗು
ಚಿಮ್ಮಿರಲು ಬೆಳಕು ಹೊರಜಗಕೆ ಥಳಕು ಎದೆಗೆಲ್ಲ ಆಯ್ತೊ ಬೆಳಗು

ಆ ಬೆಳಕು ಚಿಮ್ಮೆ ನವರಸವು ಹೊಮ್ಮೆ ಮರುಳಾಗಿ ನಾನು ನಿಂದೆ
ತನಿರಸವ ಹೀರಿ ಎದೆಹೆಕ್ಕಿ ಹಾರಿ ಬೆಳಗಿನಲಿ ಲೀನನಾದೆ
ಸೊಗದುಂಬಿ ಬಂದ ಬೆಳಗೆನಗೆ ತಂದ ಸೊಬಗನ್ನು ಹಾಡಲೇನು?
ದನಿಯೆತ್ತೆ ಸೊಗವು ಹಾಳೆನ್ನೆ ಮನವು ತಿಳಿಮೌನ ತಕ್ಕುದೇನು?

ಎದುರಿದ್ದ ಗಿರಿಯ ಸಾಲೆಲ್ಲ ಸುಧೆಯ ಸವಿಯುವುದ ಕಾಣಲಾಗ
ಗಿರಿಯಾಗಲೆಂದು ಬಯಸಿದೆನು ಅಂದು ರಸಧಾರೆ ಸುರಿಯುವಾಗ
ಗಿರಿಯಾಗಿ ನಿಂತು ಅನುದಿನವು ಇಂತು ರಸವೀಂಟಲೆನಿತು ಚೆನ್ನ
ಈ ಎಲ್ಲ ಲೋಕ ತಾನಾಗೆ ನಾಕ ಹೇಳೇಕೆ ಬೇಕು ಚಿನ್ನ

ಜಗದಿರುಳ ಸೆರಗು ಸರಿಸುತ್ತ ಮೆರಗು ಬೀರುತ್ತ ಕುಣಿದುರಾಣಿ
ಪನ್ನೀರ ಸಿಡಿಸಿ ಕೆನ್ನೀರ ಕುಡಿಸಿ ಬರುತಿರಲು ಉಷೆಯ ರಾಣಿ
ಚೆಲ್ಮೊಗ್ಗೆ ಬಿರಿದು ಸೌರಭವ ಸುರಿದು ಮಂಗಳವ ಸಾರುತಿತ್ತು
ಉಷೆಮುಗುಳ ತೆರದಿ ಬಿರಿದರಳು ಬಿನದಿ ಸುರಿದಿಹವು ಸುತ್ತು ಮುತ್ತು

ರನ್ನವನೆ ಕೆತ್ತಿ ಹೊನ್ನಿನಲಿ ಬಿತ್ತಿ ಹಸಿರಲ್ಲಿ ಇಟ್ಟರಾರು?
ಭೂತಾಯ ನೊಸಲ ಮಧ್ಯದಲಿ ಕುಶಲ ಕುಂದಣವನಿಟ್ಟರಾರು?
ಹಸಿರುಡಿಗೆಯುಡಿಸಿ ಹೊನ್ನೊಡವೆ ತೊಡಿಸಿ ಕುಣಿಸಿದರು ಯಾರು ಯಾರು?
ನೇಸರನನುಳಿದು ಆಗಸದಿ ಹೊಳೆದು ಲೀಲೆಯನು ತೋರ್‍ವರಾರು?

ತಮ್ಮಿನಿಯ ಕೊರಳ ಸರದಿಂದೆ ಸರಳ ರಾಗದಲಿ ಹಾಡೆ ಹಕ್ಕಿ
ಎದೆಯಾಳದಲ್ಲಿ ಅಮೃತವು ಚೆಲ್ಲಿ ಚಿಮ್ಮಿತ್ತು ಉಕ್ಕಿ ಉಕ್ಕಿ
ಮನವಾಗೆ ಹಕ್ಕಿ ತನುವಾಗೆ ರೆಕ್ಕಿ ಹಾರಲ್ಕೆ ನಭಕೆ ಏರಿ
ಮರೆಯಲಿಕ ಜಗವ ಸವಿಯಲಿಕೆ ಸೊಗವ ಅದಿವ್ಯ ಸಗ್ಗಸಾರಿ

ಸವಿಗಾನ ತುಂಬಿ ಹಾದುತ್ತೆ ತುಂಬಿ ಝೇಂಕರಿಸೆ ಹೂವ ಮುತ್ತಿ
ಕೊಂಡೊಯ್ಯಿತೆನ್ಸ ಎದೆಪುಷ್ಪವನ್ನ ಸೆರೆಗೈದು ಸುತ್ತಿ ಸುತ್ತಿ
ಅಲ್ಲೊಂದು ನೋಟ ಇಲ್ಲೊಂದು ಮಾಟ ಅರಳಿರ್ದ ಹೂವಿನಾಟ
ತಿಳಿರಂಗ ವೆಂಪು ವಾಸನೆಯ ಕಂಪು ಕಣ್ಮನಕೆ ಸಗ್ಗದೂಟ

ಮೆಲುಗಾಳ್ಗೆ ತೂಗಿ ಹೂಬಳ್ಳಿ ಬಾಗಿ ಕರೆದಿತ್ತು ಬಳಿಗೆ ಎನ್ನ
ತರುವಾಗಿ ನಿಂತು ಜಗದಾಟ ಮರೆತು ನಲಿಯುವುದು ಎನಿತು ಚೆನ್ನ
ಅನ್ನದಾ ಚಿಂತೆ ಚಿನ್ನದಾ ಚಿಂತೆ ಏನಿಲ್ಲ ಸತ್ಯ ಜಗದಿ
ಸಾಲಿಗರ ಹಂಗೆ ತಾನಿಲ್ಲ ನರಗೆ ಈ ನಿತ್ಯ ಸಿರಿಯ ವನದಿ

ಹಳಿಯಾಳ ದಾಟಿ ದಾಂಡೇಲಿ ಮುಟ್ಟಿ ಹರಿದಿಹಳು ದಿವ್ಯ ಕಾಳಿ
ಗಿರಿಯಿಂದ ಹೊಮ್ಮಿ ಗವಿಯಿಂದ ಚಿಮ್ಮಿ ಬಯಲಲ್ಲಿ ಇಳಿದ ಕಾಳಿ
ಹರಿದಿಹಳು ಭರದಿ ಹೆಬ್ಬಾವ ತೆರದಿ ತಿಳಿದೊರೆಯ ರೂಪ ತಾಳಿ
ವೆರ್ಬಂಡೆ ತಡೆಯೆ ಆರ್ಭಟಸಿ ನುಡಿಯೆ ನಡುಗಿಸುವ ರುದ್ರಕಾಳಿ

ಜೋಗುಳವ ಹಾಡಿ ಸಸಿಗುಸಿರ ನೀಡಿ ತಾಯಾಗಿ ಸುತ್ತ ವನಕೆ
ಕಂದಿರದಿ ನಿಂದು ಕಾಯ್ದವಳೊ ಇಂದು ಹಾಲ್ನೀಡೆ ವನ್ಯಮೃಗಕೆ
ಸಾಗರವ ಸೇರೆ ಜಗಕಲ್ಲ ಬೀರೆ ತನ್ನಂತೆ ಸಾಗಿರೆಂದು
ಹೇಳಲ್ಕೆ ಏನೊ ಸಾಗಿಹಳೊ ಕಾಣೊ ಬಯಲಲ್ಲಿ ಮುಂದು ಮುಂದು

ಹೊಳೆಯಲ್ಲಿ ತಾಕೆ ಬಿದ್ದಿಹವೊ ಆನೆ ಎಂಬಂತೆ ತೋರ್ದಬಂಡೆ
ಜಲಕನ್ಯೆ ಕೂಡಿ ತೆರೆಯೊಡನೆ ಆಡಿ ನಲಿಯುವುದ ಮುದದಿ ಕಂಡೆ
ತೆರೆ ತೆರೆಗೆ ಬಡಿದು ನೀರಂಬು ನೆಗೆದು ನರ್ತಿಸಲು ಹರುಷವಾಂತೆ
ಪ್ರೇಮಿಗಳ ತೆರದಿ ತಮ್ಮಿನಿಯ ರವದಿ ಹಾಡಿಹರು ಪ್ರೇಮಗೀತೆ

ಲತೆಯಾಗಿ ಬಾಗಿ ಜೊತೆಯಾಗಿ ಸಾಗಿ ಬಂದಿಹರು ನೀರಿಗಾಗಿ
ಗೋಪಿಕೆಯರಿವರೊ ಹಾಲ್ಮೊಸರಿನವರೊ ಕಾದಿಹರೊ ಕೃಷ್ಣಗಾಗಿ
ರಾಧೆಯೋ ಅವಳು ರುಕ್ಮಿಣಿಯೊ ಇವಳು ಹೊರಗಣ್ಗೆ ಕಾಣದವರು
ಗೋವಳನ ತೆರದೆ ಕೊಳಲನ್ನು ಊದೆ ಒಳೆಗಣ್ಗೆ ಕಾಣುವವರು

ಅರೆಯಾಗಿ ಮಿಂದ ದಂಡೆಯಲಿ ನಿಂದ ಚೆಲುವೆಯರು ಕಣ್ಣ ತಣಿಸಿ
ಕಲಕಲವ ತುಂಬಿ ಯಮುನೆಯನು ಬಿಂಬಿಸಿಹರಿಲ್ಲಿ ಸೊಬಗನುಣಿಸಿ
ಹೊಳೆಯಲ್ಲಿ ನಿಂದ ಚೆಲುವಿನಲಿ ಮಿಂದ ಗೋಪಿಯರ ಅಂದದಿಂದ
ಮೆಲುಗಾಳಿ ತಾಗಿ ತೆಳುವಸನವಲುಗಿ ಕೃಷ್ಣನ್ನ ನೆನೆಯುವಂದ

ದಂಡೆಯಲಿ ಮಧುರ ಬನವಿಹುದು ಚದುರ ಅರೆಚಣವೆ ಇಲ್ಲಿ ನಿಲ್ಲು
ತೆಂಗಿನಾ ಮರದ ಕೌಂಗಿನಾ ಮರದ ಆಹ್ವಾನ ಕೇಳು-ಸೊಲ್ಲು
ತಲೆವಾಗಿ ಈಯಲೆಳೆ-ನೀರ ಕಾಯ ಮನವಾಕೆ ಹೀರು ಎಂದು
ಚಾಮರವ ಬೀಸಿ ದಣಿವೆಲ್ಲ ಮರಸಿ ನಿನಗ್ಹರುಷ ನೀಡಲೆಂದು

ಕಾಳಿಯಲಿ ಮುಳುಗೆ ಕೇಳಿಯಲಿ ತೊಡಗೆ ಎದೆಗೆನಿತು ತುಂಬ ಹರ್ಷ
ಮನವಾರೆ ಮಿಂದ ಬಿಸಿಲಲ್ಲಿ ನಿಂದ ಮನಸಸಿಗೆ ದಿವ್ಯವರ್ಷ
ಹೊಳೆಯಾಗಿ ಹಾಡಿ ಬನದೊಡನೆ ಆಡಿ ಆ ಜಲಧಿ ಸಾರಲೆಂದೆ
ಉಗಿಯಾಗಿ ಹಾರಿ ತಿಳಿ ನೀಲಕೇರಿ ಸುರಲೋಕ ಸೇರಲೆಂದೆ

ದಂಡೆಯಲಿ ನಿಂದ ತರುವೊಂದರಿಂದ ಕೇಳ್ಬರುವ ರವವ ಕೇಳು
ಸವಿಗೊರಲಿನಿಂದ ಮನವೊಲಿಸ ಬಂದ ಅಪ್ಸರೆಯೊ ಕಾಣೆ ಅವಳು
ಬಿದಿರುದರದಿಂದ ಮುದದುಂಬಿ ತಂದ ಇದು ಆರ ಇಂಪು ಗಾನ?
ವನವೆಲ್ಲ ಕುಣಿಸೆ ಜಗವೆಲ್ಲ ತಣಿಸೆ ಗೊಲ್ಲನಾ ವೇಣುಗಾನ!

ಮಲ್ಲಿಗೆಯ ಬಳ್ಳಿ ಬಳಕುತ್ತೆ ಮಳ್ಳಿ ಕರೆದಿಹೆಳು ಕೈಯ ಬೀಸಿ
ಸೌರಭವ ಸೂಸಿ ಮನ ಮರುಳುಗೊಳಿಸಿ ಸುತ್ತೆಲ್ಲ ಹೂವ ಹಾಸಿ
ಆ ಚಲುವೆ ಕರೆಯೆ ರಸಪಾನ ವೀಯೆ ಓಗೊಡದ ರಸಿಕರುಂಟೆ?
ಸಗ್ಗವನು ಕೊಚ್ಚುನಾ ಇನಿಯ ಹಚ್ಚು ಹೊಳೆಯಲ್ಲಿ ತೇಲದುಂಟೆ?

ಅರೆನಿಮಿಷಕಾಲ ಬೀಸಿರ್ದ ಜಾಲ ನೀಡಿರ್ದ ಸೊಬಗದೇನು!
ಇಡಿವರುಷವೆಲ್ಲ ತಪಗೈಯ್ಯಲಿಲ್ಲಿ ಆ ಸಗ್ಗ ಮೂರೆ ಗೇಣು!
ಮನಕೊಂದು ಬಯಕೆ ದಿನಕೊಂದು ಬಯಕೆ ಎದೆಯಾಳದಾಸೆಯಂತೆ
ಚಿರರೂವ ವಿರದ ಆಗಸದಿ ನೆರೆದ ಹಲವಿಧದ ಮೋಡದಂತೆ!

ಸೌಂದರ್ಯಕೊಂದು ರಕ್ಷಣೆಯು ಎಂದು ಕಟ್ಟಿಹೆನೊ ಕೋಟೆಯನ್ನ
ದಶ ದಿಕ್ಕು ಗೆಲ್ದು ನೆನಹಿಂಗೆ ಎಂದು ದಿಗ್ವಿಜಯ ಕಂಭವನ್ನು
ಮೇಘವನು ಎತ್ತಿ, ಚೆಲುಸಿರಕೆ ಸುತ್ತಿ ಮದುವಣಿಗನಾಗಿ ಕುಣಿದು
ಮಳೆಬಿಲ್ಲ ತೊಟ್ಟ ನಲ್ವೆಣ್ಣು ಕೂಟ್ಟ ಮುತ್ತನ್ನು ಸವಿಯುತಿಹುದು

ಮಳೆ ಬಿದ್ದರೇನು ಸಿಡಿಲೆರಗಲೇನು ನಿನಲ್ಲ ಸಹಿಸಿ ನಿಂದು
ಮಳೆಯನ್ನ ಕುಡಿದು ಸಿಡಿಲನ್ನೆ ಹಿಡಿಗು ಕುಣಿಸಿಹುದು ಹಿಂದು ಮುಂದು
ಕರೆದಿತ್ತು ದಾರಿ ಗಿರಿ ಶಿಖರವೇರಿ ಕೈಲಾಸ ತೋರ್ವೆನೆಂದು
ಉರುಳಿದುವು ಗಾಲಿ ಲೀಲೆಯಲಿ ತೇಲಿ ಕರೆದತ್ತ ದಾರಿ ಅಂದು

ತೇಲುತ್ತೆ ಮೇಘ ತಮ್ಮಾಟದೋಘ ಎಳೆರವಿಯ ಹೊನ್ನಕರದಿ
ಹೊನ್ನುಡುಗ ಧರಿಸಿ ನವವೇಷ ಮೆರೆಸಿ ತೋರಿಹವು ನೀಲ ನಭದಿ
ಕತ್ತಲೆಯ ಮೇಲೆ ಇನಸೇನೆ ಮಾಲೆ ದಂಡೆತ್ತಿ ಹೋಹುತಿಹುದೊ?
ಗಜ ತುರಗ ರಥವು ಸಾಗಿರಲು ಜಗವು ಕೆಂಧೂಳಡಗುತಿಹುದೊ?

ಒಂದೊಂದು ಗಿರಿಯು ಮತ್ತೊಂದು ತೊರೆಯು ಎಂಬಂತೆ ತುಂಬುತಿರಲು
ಅರೆ ನಿನಿಷದಲ್ಲು ಕಾಣವೋ ಎಲ್ಲು ಬರಿವ್ಯೋಮ ತೋರುತಿರಲು
ಕಾಯರಳೆಯೊಡೆದು ಈ ಚಣದಿ ಪುಟಿದು ಹಿಂಜಿರ್ದ ಅರಳೆ ಹರಹಿ
ಸಿಗದಾಗೆ ಉಷೆಯು ಅವಳರುಣ ಸೆಳೆಯುತಿಹನೇನೊ ಸೆರಗ ಕೊಡಹಿ

ಹಿಂದಾಯ್ತು ಕಾಳಿ ಬಹುರೂಪ ತಾಳಿ ಎದೆಯಲ್ಲಿ ಮೊರೆಯುತಿಹುದು
ಮನವನ್ನು ಸೆಳೆದು ಜಲದಲ್ಲಿ ಇಳಿದು ಚೆಲ್ಲಾಟಕೆಳಸುತಿಹುದು
ಹೊರಟಿರಲು ಗಾಡಿ ನಲಿಸಿದುವು ಹಾಡಿ ಹೋರಿಗಳ ಕೊರಳ ಗಂಟೆ
ಮುಂದುರುಳೆ ಗಾಲಿ ಮನ ಮತ್ತೆ ತೇಲಿ ಹೊಳೆ ದಂಡೆ ಬಯಸದುಂಟೆ!

ಬನದೇವಿ ಯಾತ್ರೆ ಸಾಗಿಹುದು ಇಲ್ಲಿ ಗಿರಿಯಾಗೆ ಪಚ್ಚ ತೇರು
ಸಾಲಿಟ್ಟು ನಡೆವ ಜಯಘೋಷ ನುಡಿದ ಪವಯಣಿಗರೆ ಎಳೆಯುವವರು
ಬಳಲಿರ್ದ ಜನಕೆ ಹಸಿದಿರ್ದ ಮನಕೆ ಬೇಡಿದುದ ನೀಡಲೆಂದು
ಕಿನ್ನರಿಯ ಬೊಮ್ಮ ಹರಿದಿಹನು ಬ್ರಹ್ಮನಾಣತಿಯ ನಡೆಸಲೆಂದು

ತಂಗಾಳಿ ತೀಡಿ ಸವಿಹಾರ ಹಾಡಿ ಪಯಣಿಗರ ಕುಣಸಿಲೆಂದು
ತರುತಂತಿ ಮೀಂಟಿ ಹಾಡಿರ್ದಧಾಟಿ ಸಂಜೆಯನ್ನು ತೋರಿತಂದು
ಹೊಂದೇರನೇರಿ ಸಾಗಿಹನು ತೂರಿ ನೇಸರನು ರನ್ನ ಮಾಲೆ
ಶುಕ ಪಿಕಗಳುಲಿವು ತಂಗಾಳಿ ನಲಿವು ತುಂಬಿಹುದು ಗಿರಿಯ ಮೇಲೆ

ಹೆಜ್ಜೆಯನು ಕುಣಿಸಿ ಗೆಜ್ಜೆಯನ್ನು ನುಡಿಸಿ ಬರುತಿಹ ನಿಶೆಯರಾಣಿ
ಕಾಯ್ದಿರ್ದ ಖಗಕೆ ಕತ್ತಲೆಯ ಮೃಗಕೆ ತಲುಪಿಸಲು ತೂರ್ಯವಾಣಿ
ಬೆಳ್ಳಕ್ಕಿ ಮಾಲೆ ಹೊಂಬಾನಮೇಲೆ ಮಲ್ಲಿಗೆಯ ಮಾಲೆಯಂತೆ
ನೇಸರನ ನಿಂದು ಬೀಳ್ಕೊಳ್ಳಲೆಂದು ಆಗಸವನಿಂಜಿ ಬಂತೆ !

ಮೂಡಲದ ಗಿರಿಯ ಪಚ್ಚನೆಯ ಗುಡಿಯ ಹೊಂಗಳಸ ಮಿಂಚುವಂತೆ
ಸಾರಿದನು ಚಂದ್ರ ಇರುಳರಸಿಯಿಂದ್ರ ಪ್ರೇಯಸಿಯನರಸುವಂತೆ
ಚಂದಿರನ ಕಂಡು ಟೀಂ ಹಕ್ಕಿ ಡಂಡು ಕುಣೆದಿತ್ತು ಹರುಷ ದುಂಬಿ
ತಿಳಿಬಾನನೇರಿ ಚಂದಿರನ ಸೇರಿ ಜ್ಯೋತ್ಸ್ನೆಯ ಸೊಗವ ತುಂಬಿ

ಮಲ್ಲಿಗೆಯ ಹೂವ ಶಯ್ಯೆಯಲಿ ನಲಿವ ಚಂದಿರನ ಅಂದ ಕಂಡು
ಕುಡಿ ಮಿಂಚ ತುಳುಕಿ ತಾರೆಯರು ಬಳುಕಿ ತಮ್ಮೆಡೆಗೆ ಸಾರಲೆಂದು
ಬಂದಿಹಳು ನೋಡ ತಳು ಬಿಳಿಯ ಮೋಡ ರೂಪದಲಿ ಬಳಿಕೆ ಕೆಳದಿ

ಹಗಲೆಲ್ಲ ಮಧಿಸಿ ಚಣಚಂದ ವತಿಸಿ ತಂದಿಹನು ಸಗ್ಗಸುಧೆಯ
ಬೆಳ್ನೊರೆಯ ಸೂಸಿ ಬಯಲೆಲ್ಲ ಈಸಿ ಸಾರಿಹನು ಬಾನಿನೆದೆಯ
ಕೈಜಾರಿ ಬಿತ್ತು ಇಳೆಗೆಲ್ಲ ಸುತ್ತು ಚಂದಿರನ ಕೈಯ್ಯ ತುತ್ತು
ಆವರಿಸೆ ಭರದಿ ನೊರೆ ಹಾಲ ತರದಿ ತಿಳಿಜೊನ್ನ ಸುತ್ತು ಮುತ್ತು

ಕಂದಿಹನು ಚಂದ್ರ ಚೆಲುವಿಕೆಯ ಇಂದ್ರ ಕಳೆದಿರಲು ತನ್ನ ಸೊತ್ತು
ಮನದನ್ನೆಗೆಂದು ತಂದಿರಲು ಅಂದು ಪ್ರೀತಿಯಲಿ ಸುಧೆಯ ಹೊತ್ತು
ಟೀಂವಕ್ಕಿ ಹೀರಿ ಸಾರಿದವು ಹಾರಿ ಚಂದಿರಗೆ ಕೇಳುವಂತೆ
ನೀತಂದುದನ್ನು ಬಿಡಲಾರೆವಿನ್ನು ಒಂದ್ಹನಿಯು ಉಳಿಯದಂತೆ

ಇರುಳೆಲ್ಲ ಅಳಲಿ ಚಂದಿರನು ಬಳಲಿ ಹೊರಟಿಹನು ತಾಯಿಯೆಡೆಗೆ
ತನ್ನೆಲ್ಲ ಸೊತ್ತು ಹೋಯ್ತೆಂದು ಅತ್ತು ಕಂಬನಿಯ ಮಿಡಿದು ಕೊನೆಗೆ
ಕಂಬನಿಯ ಮುತ್ತು ಉದುರಿರಲು ಸುತ್ತು ಹಚ್ಚನೆಯ ಹಸಲೆಯಲ್ಲಿ
ಹನಿಯಾಗಿ ನಿಂದು ಅಮೃತದ ಬಿಂದು ತೊಳತೊಳಗೆ ಬೆಳಗಿನಲ್ಲಿ

ಬಂದಿರಿಲು ಜಾಣಿ ಮುಂಬೆಳಗ ರಾಣಿ ಮುತ್ತರಸುವಾಸೆಯಿಂದ
ಹರ್ಷದಲಿ ಮಿಂದ ವದನಾರವಿಂದ ಕೆಂವದರಿ ಎನಿತು ಚೆಂದ
ಆಯ್ತೇನೊ ಲಜ್ಜೆ ಹೆಜ್ಜೆಯಣಗೆಜ್ಜೆ ನುಡಿಸುತ್ತ ಸಾಗುತಿಹಳು
ಸಿಗಲಿಲ್ಲ ಮುತ್ತು ಹಸಿರಲ್ಲೆ ಬಿತ್ತು ಅವಳರುಣ ಸಾರುತಿರಲು

ನೇಸರನು ಸಾರಿ ಹೊಂಗಿರಣತೂರಿ ನಗುತಿರಲು ಹೆಮ್ಮೆಯಿಂದ
ಅಲ್ಲೊಬ್ಬ ಇನನು ಮಿಂಚುತ್ತಲಿಹನು ನೇಸರನ ಎದುರಿನಿಂದ
ಮರಿಸೂರ್ಯನೇನೊ ಹೊಳೆನಗ್ನಿಯೇನೊ ತಿಳಿಯದೆಲೆ ಮೂಢನಾಗಿ
ಸಾಗಿರಲು ವನಕೆ ಸೊಬಗುಣಿಪ ಬನಕೆ ಇಟ್ಟಿರ್ದ ಕಳಸ ಬೆಳಗಿ

ಸೌಂದರ್ಯಕೊಂದು ಹೊಂಗಳಸವೆಂದು ಕಣ್ಣರಳಿಸೀಕ್ಷಿಸಿರ್ದೆ
ಬೆಳ್ಗಿರಿಯ ಮೇಲೆ ಹೊಂಗಳಸ ಲೀಲೆ ಕಾತರಿಪ ಮನಕೆ ತೋರ್ದೆ
ಚೆನ್ನನಾ ಗುಡಿಯು ಹೊನ್ನಿನಾ ಗುಡಿಯು ಹಸಿರಿಂದ ಹೊರಗೆ ತೋರೆ
ಕುಣಿದಿತ್ತು ಮನವು ಹರುಷದಲಿ ತನುವು ಹರ್ಷಾಶ್ರು ಮೇರೆ ಮೀರೆ

ಸಾಲಾಗಿನಿಂದೆ ಅಂಗಡಿಯ ಅಂದ ಹೃದಯವನು ಸೆಳಯುತಿರಲು
ನಿಂತಿರ್ದ ತೇರು ರಂಗುಟ್ಟ ಮೇರು ತೆರ ತೆರದಿ ಮೆರೆಯುತಿರಲು
ಮಹಾದ್ವಾರದೆದುರು ಸಾಧುಗಳ ಸದರು ಸಾಲೆರಡು ತುಂಬಿನಿಂದು
ಕೂಡಿರ್ದ ಜನಕೆ ಪಾಮರರ ಮನಕೆ ಪಾವಿತ್ರ್ಯ ಬೀರಲೆಂದು

ಅಲ್ಲೋರ್ವ ಸಾಧು ಇಲ್ಲೋರ್ವ ಸಾಧು ಹೊಳೆವಗ್ನಿ ಕುಂಡದಲ್ಲಿ
ನಡೆಸಿಹರು ಹೋಮ ಸುಡಲೆಂದು ಕಾಮ-ಕ್ರೋಧಗಳ ಕಾಷ್ಠ ಚೆಲ್ಲಿ
ಮಹಾದ್ವಾರದಾಟಿ ಬಿಕ್ಷುಗಣ ಕೋಟಿ ಕಾಯ್ದಿಹುದು ಬಿಕ್ಷೆಗಾಗಿ
ಸಿಕ್ಕಷ್ಟೆಸಾಕು ಇಲ್ಲದ್ದು ಬೇಕು ಎನ್ನರೋ ಹೊಟ್ಟೆಗಾಗಿ

ಎತ್ತೆತ್ತ ನೋಡೆ ಸಿರಿ ಜನರ ಬೀಡೆ ತೋರಿತ್ತು ಎನ್ನ ಕಣ್ಗೆ
ಆ ನೋಟವೆಲ್ಲಿ ಈ ನೊಟವೆಲ್ಲಿ ಅಂತರವು ಭೂಮಿ ಬಾನ್ಗೆ
ಆ ಅಟ್ಟಹಾಸ ಈ ವಿಕಟಹಾಸ ನೆರೆಸಾರುತಿಹುದ ಕೇಳು
ಚೆನ್ನಣ್ಣನಡಿಯ ಕಡವರದ ಹುಡಿಯ ನೆಲದಲ್ಲಿ ಕೂಡ ಗೋಳು

ಮಂಗಳವು ಮೊಳಗಿ ತನು ಮನವು ಬೆಳಗಿ ಕರೆದೊಯ್ಯೆ ಗುಡಿಯ ಒಳಗೆ
ಮನವೆಲ್ಲ ಹಾರಿ ಚೆನ್ನನಲಿ ಸೇರಿ ನಲಿದಿತ್ತು ಅರಿಯದೆನಗೆ
ಮೊಳಗಿದ್ದ ಭೇರಿ ಹೇಳಿತ್ತು ಸಾರಿ ಇಲ್ಲಿಹುದು ಸಗ್ಗವೆಂದು
ಒಡಿತ್ತು ಹೆದರಿ ತಮವೆಲ್ಲ ಚದರಿ ತನಗಿಲ್ಲ ಉಳಿವು ಎಂದು

ಕಲ್ಲಾದರೇನು ಮಣ್ಣಾದರೇನು ಮನವಾಗೆ ಭಕ್ತಿಯಿಂದ
ಕಣ ಕಣವು ಕೂಡ ಕುಣಿಯುವುರು ಗೂಢ ಆಂತರಿಕ ಶಕ್ತಿಯಿಂದ
ಮೂಕಾದರೇನು ಮಾತಿಲ್ಲವೇನು ಕೇಳಿಲ್ಲ ಮನಸಿನಿಂದ
ಆ ಗಂಟೆನಾಲ್ಗೆ ವೇಳಿದುದ ಕಿವಿಗೆ ದೇವ ಭಾಷಯಿಂದ

ಮಂದಿರದ ಹೊರಗೆ ಬರುವನಿತರೊಳಗೆ ಎದುರಿತ್ತು ದೇವ ಸೃಷ್ಟೊ
ಎಲ್ಲೆಲ್ಲು ಭಕ್ತಿ ಚಿಮ್ಮುತಿದೆ ಉಕ್ಕಿ ದೇವನಾ ದಿವ್ಯ ದೃಷ್ಟಿ
ಭಕ್ತಿಯೇ ಜೀವ ಭಕ್ತಿಯೇ ಭಾವ ಮುಕ್ತಿಯನು ಬಯಸುವಂದ
ತರಗೆಲೆಯು ಕೂಡ ತಂಗಾಳಿ ಗೂಡ ಭಜಿಸುವುದೊ ಎನ್ನುವಂದ

ಅಲ್ಲೊಂದು ತೊರೆಯು ಹಾಡುತ್ತೆ ಹರಿಯತಿಹೆದೆಯ್ಯ ದೇವನಾಮ
ತೆರೆ ತೆರೆಯು ಕುಣಿದು ಭಕ್ತಿಯಲಿ ಮಣದು ಸೇರುತಿದೆ ಮುಕ್ತಿ ಧಾಮ
ಮೆಲ್ಗಾಳಿ ತಾನು ಮೆಲ್ಲುಲಿಯಲೇನು ಮುಟ್ಟಿಸಿತೊ ಎನ್ನ ಎದೆಗೆ
‘ಪ್ರತಿ ಜೀವದಲ್ಲು ಭಕ್ತಿಮುಯ ಸೊಲ್ಲು’ ಮಣಿದಿರ್ದೆ ದೇವನಡಿಗೆ

ಜಗಕುಣಿಸಲೆಂದೂ ಬರಿ ಮನಿಸುಗೊಂಡೊ ಬ೦ದಿರಲು ಗಂಗೆ ಇಳೆಗೆ,
ಇಲ್ಲಿರ್ದ ಶಿವನ ಕೈಲಾಸ ಬವನ ಅರಿಯದಲೆ ಸಾರೆ ಬಳಿಗೆ
ಶಿವನನ್ನು ಕಂಡು ಅಚ್ಚರಿಯೊಳಂದು ಓಡಿರಲು ಮುಂದೆ ಗಿರಿಗೆ
ಜಾರಿದಳು ಖೋಡಿ ಮುಂಗಾಣದೋಡಿ ಜಲ ಪಾತವಾಗಿ ಕೆಳಗೆ

‘ಅಯ್ಯಯ್ಯೊ ಬಂದು ಕಾಪಾಡಿ’ಯೆಂದು ಬೇಡಿರಲು ಆರ್ತಳಾಗಿ
ನೀನೆಂಥ ಹುಚ್ಚಿ ಬಾರಿಲ್ಲಿ ಮೆಚ್ಚಿ ನಿಂದಿಹೆನು ರಕ್ಷೆಗಾಗಿ
ಎಂದೆನುತ ತೋಳ ತೆಕ್ಕೆಯಲಿ ಅವಳ ಮೆಲ್ಲಽನೆ ಒರಗಿಸಿಹನು
ಎಲ್ಲೆಲ್ಲು ತಾನು ಅವಿತಿರುವುದನ್ನು ಒಲುಮೆಯಲಿ ತೋರಿಸಿಹನು

ಹೂವಾಗಿ ಮುಗುಳು ತುಂತುರಲಿ ಅರಳುತಿರುವಂಥ ಮಾಟ ನೋಡು
ಸೊಬಗನ್ನೆ ಚೆಲ್ಲುವರಿವಂಥ ಬಿಲ್ಲು ಮಳೆಬಿಲ್ಲಿನಾಟ ನೋಡು
ಮನಹೊಕ್ಕು ಸಪ್ತ ರಂಗವದು ಸುತ್ತ ಎದಯಾಸೆ ಕೆರಳಿಸಿಹುದು
ವರಶಿವನ ಮೇಲು ರತಿ ವತಿಯ ಬಿಲ್ಲು ನೀರಂಬು ಚಿಮ್ಮತಿಹುದು

ಶಿವನೆರಡು ತೋಳ ತೆಕ್ಕೆಯಲ್ಲಿ ಅವಳ ಕಾಣಲ್ಕೆ ಎನಿತು ಹರುಷ
ಸೊಬಗಿನಲಿ ಹಾಡಿ ಶಿವನೊಡನೆ ಆಡಿ ಕುಣಿದಿಹಳು ವರುಷ ವರುಷ
ಶಿವಶರಣರವರು ಅವಿತಿಹರೊ ಕೆಲರು ಕೆಲದಿರುವ ಗವಿಯೊಳಿಂದು
ಗವಿಯನ್ನು ಹೊಕ್ಕು ಶಿವ ಶಕ್ತಿಯುಕ್ಕುತಿರುವಂದ ಅರಿಯಲೆಂದು

ಗವಿಗೆಂದು ಸಾಗೆ ಮಿಂಚಿತ್ತು ಬುಗ್ಗೆ ಚಿಮ್ಮುತಿಹ ಚೆಲುಮೆಯಗ್ನಿ
ಚೆನ್ನಣ್ಣ ಸ್ನಾನ ಗೈದಿರುವ ತಾಣ ಅಳಿಮನವ ತೊಳೆವ ಅಗ್ನಿ
ಇದು ನೋಡು ಅಕ್ಕ ನಾಗಾಂಬೆಯಕ್ಕೆ ಅರಮನೆಯನಾರಿಸಿಹಳು
ಬಸವಣ್ಣನಕ್ಕ ಜಗಕೆಲ್ಲ ತಕ್ಕ ಚೆನ್ನನನು ನೀಡಿದವಳು

ನಗುನಗುತೆ ರಕ್ತ ಸುರಿದಿರ್ದ ಭಕ್ತ ಮಾಚಯ್ಯರಾದಿ ಇಲ್ಲಿ
ಜಗಕೆಂದೆ ಬಂದು ಜಗಕಾಗಿ ಇಂದು ಅಡಗಿಹರು ಕಾಣದಿಲ್ಲಿ
ಅದುಗೋವ ಗವಿಯು ನಸು ಇಣುಕ ರವಿಯು ಚಣವೊಂದು ಕೂಡ ಒಳಗೆ
ಕಳ್ತಲೆಯೆ ತುಂಬಿ ಭೀಕರತೆ ಬಿಂಬಿಸಿಹುದಯ್ಯ ಗೋವಗವಿಗೆ

ಗೋವೊಂದು ಕಲ್ಲು ನಿಂತಿತ್ತು ಹಾಲು ಕರೆಯುತ್ತ ಎದೆಯೊಳಿಂದ
ಹಾಲಿತ್ತು ಅಂದು ನೀರಿಳಿವುದಿಂದು ಕಲಿಕಾಲಕೆದೆಯ ಅಂದ
ವಾಳ್ಗವಿಯ ನೆನೆದು ಕಲಿಕಾಲ ಹಳಿದು ಸಾಗಿದೆನು ಗುಡಿಗೆ ತಿರುಗಿ
ಗತಸೊಬಗ ಇಂದು ಕಾಣ್ದವನೆ ಎಂದು ಚಿಂತಿಸಿದೆ ಮನದಿ ಮರುಗಿ

ಹಸಿದಿರ್ದ ರವಿಯ ಕೆಂಗಣ್ಣ ಕಿಡಿಯ ಪ್ರಖರತೆಗೆ ದೇಹ ನಡುಗೆ
ಮನವೆಲ್ಲ ಬೆಂದು ನೀರೆಲ್ಲಿ ಎಂದು ಸಾಗಿದೆನು ತಿರುಗಿ ತೊರೆಗೆ
ತೊರೆಯಲ್ಲಿ ಮುಳುಗೆ ದಣಿವೆಲ್ಲ ತೊಲಗೆ ಮಾಮರದ ಛಾಯೆಯಲ್ಲಿ
ಸೊಬಗನ್ನೆ ಉಂಡು ಹಸಿವೇಕ ಎಂದು ಮುಲಗಿದೆನು ಹಸಿರಿನಲ್ಲಿ

ವನದಿಂದ ಹೊರಳಿ ಬರುವಾಗ ಮರಳಿ ಮಂಗಳವು ತುಂಬೆ ಎದೆಯ
ಹಾರಿದವು ಹಕ್ಕಿ ಚಿಮ್ಮುತ್ತೆ, ಸೊಕ್ಕಿ ಸಾರಲಿಕ ಗಿರಿಯ ತಡಿಯ
ಅದೋ ಮೇಘ ಮಾಲೆ ತೊಡಿಸಿಹುದು ಮಾಲೆ ತನ್ನಿನಿಯ ಶೈಲತುದಿಗೆ
ಇನ ಸಾಕ್ಷಿಯಾಗಿ ಪತಿ ಪತ್ನಿಯಾಗಿ ನಲಿಯುವುದ ಕಂಡೆ ಮರೆಗೆ

ಆ ಮಧುರಭಾವ ಇಳೆಗೀಯೆ ಜೀವ ತರಗೆಲೆಯು ಕೂಡ ಕುಣಿಯೆ
ಚಿಗುರೆಲೆಯು ನಕ್ಕು ಯೌವನದ ಸೊಕ್ಕು ಬೀರುತ್ತ ತೆಗಳಿನುಡಿಯೆ
‘ನನಗೊಂದು ಕಾಲ-ನಿನೆಗೊಂದು ಕಾಲ ಕಾದಿಹುದು ಕಾಲ ಜಾಲ’
ತರಗೆಲೆಯು ನುಡಿದು ಸಿಟ್ಟಿಂದ ಸಿಡಿದು ‘ಯೌವನನವು ಕಳೆದೆ ಕಾಲ’

ನಿಶೆ ರಾಣಿ ಜಾಣೆ ನುಡಿಸಿರಲು ವೀಣೆ ರವವೆಲ್ಲ ತುಂಬೆ ವನವ
ಆ ರಾಗ ಕರಗಿ ಹೊಸರಾಗ ತಿರುಗಿ ಹೊಗರೇರಿಸಿತ್ತು ನಭವ
ಪೂರ್ಣಿಮೆಯ ಚಂದ್ರ ನನುನಕ್ಕನಿಂದ್ರ ನಿಶೆಯರಸಿ ನೃತ್ಯ ಕಂಡು
ಬೆಳ್ದಿಂಗಳಲ್ಲು ದೇವನಾ ಸೊಲ್ಲು ತಂದಿಹನು ಸಾರಲೆಂದು

ಮನದನ್ನ ತಾನು ಪ್ರಿಯೆಯಾಸೆಯನ್ನು ಪೂರೈಸದಿರಲು ಮೋಡ
ಬೆಳ್ಸೆರಗಿನಾಟ ಚಂದಿರಗೆ ಮಾಟ ಮಾಡಿಹುದು ಕಟ್ಟಿ ಗೂಡ
ಪ್ರಿಯಕರನ ಕಾಯ್ದು ನಿಡಿದಾಗಿ ಸುಯ್ದು ಕಂಬನಿಯ ತುಂಬಿ ನಿಂಡು
ನಸು ಹೊಳೆವ ತಾರೆ ಕಂಬನಿಯ ಸೂರೆಯಾದಂತೆ ತೋರ್ದುವಂದು

ಇರುಳೆಲ್ಲ ಅಳಲಿ ಪ್ರಣಯಿನಿಯು ಬಳಲಿ ತನ್ನಿನಿಯನಾಸೆ ತೊರೆಯೆ
ಕಂಬನಿಯ ಮುತ್ತ ಭುವಿಯಲ್ಲಿ ಬಿತ್ತು ಇಳಿಗಿಳಿವ ತಾರೆ ಮೆರೆಯೆ
ಇರುಳೆಲ್ಲ ಹರಿಯೆ ಮನಮನವನ ನೆನೆಯೆ ಹೊರಟಿಹುದು ಮರಳಿ ಜನವು
ಸಂತಸದ ಕೂಗು ಬಾನಿನಲಿ ತೂಗುತಿರಲಾಗ ಮರಳಿ ಮನವು

ನೆನೆದಿತ್ತು ಗುಡಿಯ ತಿಳಿದೊರೆಯ ತಡಿಯ ಇನ್ನೆಂದು ಕಾಣ್ಬೆನೆಂದು
ಕಾಲ್ದಾರಿವಿಡಿದು ಘಟ್ಟವನು ಇಳಿದು ಸಾಗಿದೆವು ಊರಿಗಂದು
ರಕ್ಕಸನ ಘಟ್ಟ ಮಾರ್ಗದಲಿ ಪಟ್ಟ ಆ ಅಸಮ ಕಷ್ಟವೇನು?
ರಕ್ಕಸನೆ ನಿಂತು ಗಿಡ ಮರದಿ ಅವಿತು ಮಾಡುವನೊ ಮಾಟವನ್ನು

ಧೈರ್ಯದಲಿ ಅಂದು ರಕ್ಕಸನಕೊಂದು ಚೆನ್ನಣ್ಣ ಹೋದನಂತೆ
ರಕ್ತಸನ ಮೂರ್ತಿ ಗಳಿಸಿರ್ದಕೀರ್ತಿ ನಂತರವೆ ಅಳಿಯಿತಂತೆ
ಒಂದೊಂದು ಕಾಯ ರಕ್ಕಸನ ಕಾಯಕೆಸೆಯಲ್ಕೆ ಪುಣ್ಯವೆಂದು
ನುಡಿದಿಹರು ಜನರು ಬರಿ ಹುಚ್ಚಿನವರು ಶಿಲೆ ಪುಣ್ಯವೀವುದೆಂದು?

ತಾಯ್ಗರುಳ ಮಾತು ಮೀರೆದಲೆ ಸೋತು ಮಸೆಯಲ್ಕೆ ಕಾಯನೊಂದು
ಸಿಡಿದಿರ್ದ ಕಾಯೆ ರಕ್ಕಸನ ಮಾಯೆ ಎಂಬಂತೆ ತೋರಿತಂದು
ಝೇಂಕಾರ ನಾದ ನಡುಗಿಸಲು ಪಾದ ಅಂಜಿದೆನು ರಕ್ಕಸಂಗೆ
ತಾಯನ್ನೆ ಅಪ್ಪಿ ಮರು ನುಡಿಯದೊಪ್ಪಿ ಕೊಂಡಿದ್ದೆ ಸುಳ್ಳು ನುಡಿಗೆ

ಬಿಕ್ಷಕ್ಕೆ ಕುಳಿತ ತಂಬೂರಿಯಾತ ದಾಸಯ್ಯ ಅತ್ತ ಬಿಕ್ಕಿ
ಮಸಗಾಯ ಚೂರ ಸಿಡಿತಕ್ಕೆ ತಂತಿ ಹರಿದಿರಲು ನಕ್ಕೆ-ಉಕ್ಕಿ!

ಇಳುಕಲಿನ ಇಳಿತ ಮನಕೆಲ್ಲ ಸತತ ಆಹ್ಲಾದ ನೀಡುತಿರಲು
ಭರಏರಿ ಎಳೆತ ಕಾಲ್ನೋವ ಸೆಳೆತ ತನವನ್ನು ಹಿಂಸಿಸಿರಲು
ಇಳುಕಲವು ಭರದಿ ಕರದೊಯ್ವ ತೆರದಿ ಅವನತಿಯು ಒಯ್ವುದೆಮ್ಮ
ಅಡೆತಡೆಗಳಿರಿಸಿ ಮನವೆಲ್ಲ ದಣಿಸಿ ಉನ್ನತಿಯು ಸಾರ್ವುದೆಮ್ಮ

ಕಿರುದೊರೆಯ ಕೆಲದಿ ಹೂ ಬಿರಿದ ಬನದಿ ಸಿಂತಿಹುದು ಶಿವನ ಪುರವು
`ಕೈಲಾಸವಿದುವೆ ಎಂದೊಪ್ಪುತಿರುವೆ’ ಸೊಬಗಿನಲಿ ತೇಲೆ ಮನವು
ನಗುನಗುತ ನಿಂತ ತನಿವಣ್ಣನಾಂತ ತನಿನಿಂಬೆ ಹಲಸು ಮೆರೆಯೆ
ಚೆಲು ಬಾಳೆ ತೋಟ ಬಲು ಸರಸ ನೋಟ ಬೀರುತ್ತ ಬೀಸಿ ಕರೆಯೆ

ಕೋಗಿಲೆಯ ದನಿಯ ಮೀರಿರ್ದೆ ಇನಿಯ ಇಂಚರವು ಕೇಳುತಿತ್ತು
ಕೈಲಾಸಕಿಂದು ಪಾರ್ಪತಿಯೆ ಬಂದು ಹಾಡುವಳೊ ಎನಿಸುತಿತ್ತು
ಕಣ್ಮನವು ಅರಳಿ ಅಚ್ಚರದಿ ಹೊರಳಿ ನೋಡಿರಲು ವನ್ಯಬಾಲೆ
ನೀಳ್ಗಬ್ಬ ಹೊತ್ತು ರಸಿಕಂಗೆ ತುತ್ತು ತಂದಿದ್ದೆ ಚೆಲುವ ಬಾಲೆ

ಸಿರಿಗಣ್ಣ ಶಚಿಯೊ ಹಾಲ್ಗೆನ್ನೆ ರತಿಯೊ ಮೇಣ್ ಸಿರಿಯೆ ಬಂದಳೇನೋ
ಸೀ ಕಬ್ಬಿನೂಟ ಹುಸಿ ನಗೆಯ ಮಾಟ ಕೂಡಿಸಿಯೆ ತಂದಳೇನೊ!
ಸರಸತಿಯ ತೆರದಿ ಹಾಡಿರಲು ಕೆಲದಿ ಸುಳಿದಿಹುದು ನವಿಲ ಗುಂಪು
ಗರಿಗೆದರಿ ಕುಣಿಯೆ ಮುಂಬಾಗಿ ಮಣಿಯೆ ಮನಕೆಂಥ ಮಧುರ ಸೊಂಪು

ಮುಂಗುರುಳ ನೋಡು ನೀಲಾಳಿದಂಡು ಬಂದುಣಲು ಬಂದ ತೆರದಿ
ಮುಖಕಮಲ ಕಂಡು ಸ್ವರ್ಗೀಯ ಬಂದು ಇಲ್ಲಿಹುದು ಎಂದು ಭರದಿ
ಬಾಗಿರ್ದ ವುರ್ಬು ಬಿಲ್ಲಾಗಿ ತೋರ್ದು ಚಿಮ್ಮಿತ್ತು ಎದೆಗೆ ಕಣೆಯ
ಎದಯಾಳ ಬಗೆದು ಕಣಕಣದಿ ಮಿಡಿದು ಸೆರೆಗೈಯ ಎನ್ನ ಎದೆಯ

ಬಳಿ ಭಯದಿ ಸಾರಿ ಹೆಸರೇನೆ ನಾರಿ ಎಂದೆನ್ನ ಲಜ್ಜೆ ತೂರಿ
ಮುಗುಳೊಂದು ಅರಳೆ, ತಲೆನಾಗೆ ತರಳೆ ಹಾಲ್ಗೆನ್ನೆ ಕೆಂಪು ಏರಿ
ಬಿಕ್ಷೆಯನ್ನು ನೀಡೆ, ಎನುವಂತೆ ನೀಡೆ ಕರವೆರಡು ಬೇಡಿ ಕಬ್ಬ
ತನ್ನೆದೆಯ ಪ್ರೀತಿ ನೀಡಿರ್ದ ರೀತಿ ಮಾಡಿತ್ತು ಎದೆಗೆ ಹಬ್ಬ

ಕಬ್ಬವಳ ಹೃದಯ ರಸವವಳ ಎದೆಯ ತೂರುತ್ತ ಬಂದ ಪ್ರೀತಿ
ನಾ ಸವಿದು ನೋಡಿ ಮರುಸವಿಯ ನೀಡಿ ಬೆಳಗಲ್ಕೆ ಪ್ರೇಮ ಜ್ಯೋತಿ
ಅರೆಚಣದಿ ಮಿಂಚಿ, ಹೃದಯವನು ವಂಚಿಸಿಹಳಲ್ಲೊ ಮುಗ್ಧ ಬಾಲೆ
ಮುಗ್ಧತೆಯೊ ಏನೊ ಚಾತುರ್ಯವೇನೊ ತೋರಿಹಳು ತನ್ನಲೀಲೆ

ಸರಿದೋಡೆ ರಮಣಿ ನೆಗೆವಂತೆ ಹರಿಣಿ ಕಣ್ಬಲೆಗೆ ಸಿಕ್ಕದಂತೆ
ಅಮ್ಮನನು ತೊರೆದು ಬೆಂಬತ್ತಿ ಅಲೆದು ನಾ ಬಲೆಗೆ ಸಿಲುಕಿನಿಂತೆ
ಗೈದಿಹಳೊ ಮಾಟ ಏನೆಲ್ಲ ಕೂಟ ಕುಳ್ಳಿರಿಸಿ ಗುಡಿಸಿಲಲ್ಲಿ
ರಸಬಾಳೆ ನೀಡೆ ಜತೆಗಣ್ಣು ಕೂಡೆ ಹುಸಿಗೋವದರಳು ಚೆಲ್ಲಿ

ಆ ನಿಮಿಷದಲ್ಲೆ ಒಂದೆಂಬ ಸೊಲ್ಲೆ ಮಿಡಿದಿತ್ತು ಎದೆಯ ಆಳ
ಎನಗರಿಯದಂತೆ ಬಳಿಸಾರೆ ಕಾಂತ ನುಡಿದಿತ್ತು ಹೃದಯ ತಾಳ
ಬನಸಿರಿಯ ಹಿರಿಮೆ ಕಂಡೆದೆಯ ಒಲುಮೆ ಉಕ್ಕಿರಲು ಸೊಬಗನುಂಡೆ
ಹಾಡುತ್ತ ನಾನು, ಎನ್ನರಸಿ ತುನು ಹೂ ಕೊಯ್ಯುತಿಹುದ ಕಂಡೆ

ಮಾಮರವದೂಂದು “ಬಾ ಇಲ್ಲಿ” ಎಂದು ಕರೆದಿತ್ತು ತಳಿರ ಬೀಸಿ
‘ಎಲೆರಸಿಕ ಇಂದು ನಿನಗಾಗಿಯೆಂದು ಕಾಯ್ದಿಹೆನು ಹಸಿರ ಹಾಸಿ’
ಪೂತಿರ್ದ ಮಾನ ತಂಣೆಳಲತಾನ ಮರೆಸಿರಲು ಎದೆಯ ನೋವ
ಭೃಂಗಾಳಿ ಹಾಡಿ ಹೂವೊಡನೆ ಆಡಿ ನೀಡಿರಲು ಬನಕೆ ಜೀವ

ತಿಳಿಗೊಳನ ದಡದಿ ತುಂಬಿಹವು ಹಳದಿ ನಸುಗೆಂಪು ಚಿಮ್ಮುವರಲು
ಅರಳಿರ್ದ ನನೆಯು ತುಂಬಿರ್ದ ತೆನೆಯು ನಸುನಗುತ ತೂಗುತಿರಲು
ಕಮ್ಮಲರು ಕುಣಿದು ಅವಳೆಡೆಗೆ ಮಣದು ಸ್ವೀಕರಿಸು ಎಂಬ ಭಾವ
ತೋರಿರಲು ಸರಿದು ಅರಿಯದೊಲು ಹರಿದು ಮುಡಿಸಿದೆನು ಮುಡಿಗೆ ಹೂವ

ತಿಳಿಗೊಳನ ದಡದಿ ಕುಳಿತಿರಲು ಬನದಿ ಬನದೇವಿಯಂತೆ ತೋರಿ
ಆ ಶಾಂತ ಕೊಳದಿ ನೈರ್ಮಲ್ಯ ಜಲದಿ ಪದಲಾಸ್ಯವಾಡೆ ತೂರಿ
ಸುಳಿಸುಳಿವ ಅಲೆಯ ಕವಿಬಾವ ಒಲೆಯ ನೇಯ್ದಿರಲು ಕಾವ್ಯಕುಂಚ
ಅಲೆಯೊಡನೆ ಕುಣಿದು ಸರಸಿಜವು ಮಣಿದು ತಾಕಿರಲು ಎದೆಯ ಅಂಚ

ಎನ್ನೆದೆಯ ಸುರಸ ಜಲದಲಿ ಸರಸ ಅಲೆಯನ್ನೆ ಹುಟ್ಟಿಸಿಹಳು
ಅಲೆಸುಳಿಗೆ ಸಿಕ್ಕು ಎನ್ನೆದಯು ದಿಕ್ಕು ತೋರದೊಲು ಬಳಲಿಸಿಹಳು-
ಅತ್ತೂಮ್ಮೆ ಬಾಗಿ ಇತ್ತೊಮ್ಮೊ ಬಾಗಿ ಏನೊಂದು ಅರಿಯದಂತೆ
ಮೆಲುಗಾಳ್ಗೆ ಸಿಲುಕಿ ತಲೆವಾಗಿ ಬಳುಕಿ ನಳನಳಿದ ಕಮಲದಂತೆ

ಎನ್ನೆದೆಯ ವೀಣೆ ಮಿಡಿದಿಹಳು ಜಾಣೆ ಹೊಮ್ಮಿರಲು ರಾಗ ರಂಗ
ಅಲೆಯಲೆಗೆ ಬಡಿದು ಕಣಕಣವು ಕುಣಿದು ನುಡಿವಂತೆ ಜಲತರಂಗ
ಬಳಿಯಲ್ಲಿ ನಿಂದು ಮುನಿಸೇಕೆ ಎಂದು ದೈನ್ಯದಲಿ ತಪಿಸುತಿರಲು
ಎದೆಗೆದೆಯ ನೀಡಿ ಮುನಿಸೆನ್ನ ಬೇಡಿ ಎಂದವಳು ಬೇಡುತಿರಲು

ಆ ಒಂದೆ ಮಾತು ಅಮೃತವನಾಂತು ಸುರಿದಿತ್ತು ಎನ್ನ ಎದೆಗೆ
ಆ ಒಂದೆ ನಿಮಿಷ ಸವಿದೆನೋ ಹರುಷ ನೀಡಿರಲು ತುಟಿಯ ತುಟಿಗೆ
ಎದೆಯಾಳ ಬಿರಿದು ದಡಕೊಚ್ಚಿ ಬಂದು ಚಿಮ್ಮಿತ್ತು ರಸವು ಉಕ್ಕಿ
ಹಾಡಿರಲು ಹಕ್ಕಿ ಎನ್ನೆದೆಯೊಳುಕ್ಕಿ ನಲ್ಗೀತೆ ಮುದದಿಸೊಕ್ಕಿ

ಪ್ರೇಮಿಗಳ ಮಿಲನ ಜಗಕೆಲ್ಲ ಚಲನಮಿತ್ತಿರಲು ಸಂಜೆಯರುಣ
ಹೊಂಬೆಳಗ ನೀಡಿ ತೆರೆಯೊಡನೆ ಆಡಿ ನರ್ತಿಸುತಲಿರಲು ಕಿರಣ
ತಂಗಾಳಿ ಹಾಡಿ ಗಿಡಬಳ್ಳಿ ಬಾಗಿ ಕರೆದಿಹವು ಪುಷ್ಪ ವರ್ಷ
ಮಂಗಲವ ಹಾಡಿ ಹರಕೆಯನು ನೀಡಿ ಬೀರಿಹವು ಎದೆಯ ಹರ್ಷ

ಅಂದೆನ್ನ ಮನಸು ಇರುಳೆಲ್ಲ ಕನಸು ಕಂಡಿತ್ತು ಚಲುವೆಯೊಡನೆ
ಸಗ್ಗವನು ಸಾರಿ ಅಮೃತನ ಹೀರಿ ಒಂದಾಗಿ ಅಮರರೊಡನೆ
ತಣ್ಣನ್ನ ಕದಿರು ಗುಡಿಸಲಿನ ಬಿದಿರು ಸರಿಸುತ್ತ ಒಳಗೆ ಇಣುಕೆ
ನಸುನಗುತ ಬಂದು ಎದೆಯಲ್ಲಿ ಇಳಿದು ಮನದಾಸೆಯನ್ನು ಕೆಣಕೆ

ಎಲೆವನೆಯೆ ತೊರೆದು ಬಾಗಿಲವ ತೆರೆದು ಹೊರವಂಟ ಬಯಲಿಗಿಳಿದು
ತಿಳಿಚೆನ್ನ ಜೊನ್ನ ತುಂಬಿರಲು ತನ್ನ ಬೆಳ್ನೊರೆಯ ಸುತ್ತ ಸುರಿದು
ತರಗೆಲೆಯು ಅಲುಗೆ ಎನ್ನೊಲವೆ ಬಳಿಗೆ ಬರುತಿಹಳೊ ಎಂದು ನೆನೆದೆ
ಲತೆಯಾಗಿ ಅಡಗಿ ನಿಂದಿಹಳೊ ಬೆಡಗಿ ಎಂದರಸಿ ಉಸಿರುಗರೆದೆ

ಬಾರಿಲ್ಲಿ ಚೆಲುವೆ ಎನ್ನೆದೆಯ ಒಲವೆ ನಿನಗಾಗಿ ಕಾಯುತಿಹೆನು
ಅಭ್ರಾಳಿಯೊಡನೆ ಆಡುತ್ತತಾನೆ ಚಂದಿರನು ಬೆಳಗುತಿಹನು
ಮುಸುಕನ್ನು ದೂಡಿ ತಂಬೆಳಗನೀಡಿ ಕುಣಿಸುತ್ತಲಿಹನು ಬನವ
ಬನವಾಗಿ ಕುಣಿದು ಸುಮವಾಗಿ ಮಣಿದು ನೀಬಂದು ತಣಿಸು ಮನವ

ಅರಳುತ್ತಲಿಹುದು ಮಲ್ಲಿಗೆಯು ಬಿರಿದು ಚೆಲು ಉಷೆಯ ಮುಗುಳಿನಂತೆ
ನಸು ನಗೆಯ ಮೊಗ್ಗೆ ಚಿಮ್ಮಿಸಲಿ ಬಗ್ಗೆ ಮುಂಬೆಳಗು ಚಿಮ್ಮುವಂತೆ
ತಂಗಾಳಿ ಸುಳಿದು ಇರುಳೆಲ್ಲ ಕಳೆದು ಹಕ್ಕಿಗಳು ಉಲಿಯುತಿಹವು
ನಿನಗಾಗಿ ಮುತ್ತು ಮಣಿ ಮಾಲೆ ಹೊತ್ತು ಗಿಡಬಳ್ಳಿ ಕಾಯುತಿಹವು

ನಿನ್ನಿನಿಯ ಪದವ ತಾಲಕ್ಕೆ ನಿನದಗೊಡಲೆಂದು ಹಸಿರು ಹುಲ್ಲು
ಗೆಜ್ಜೆಯನು ಅಂತು ನಿಂದಿಹುದು ಸುತ್ತು ಒಂದಿನಿತು ಕೇಳು ಸೊಲ್ಲು
ಬರವನ್ನು ಕಾಯ್ದು ನಿಡಿದಾಗಿ ಸುಯ್ದು ಅಳಲುತ್ತಲಿರಲು ಶಿಲೆಯ
ಕಾಠಿಣ್ಯ ಕರಗಿ ಮನವೆಲ್ಲ ಮರುಗಿ ನಿಂದಿಹುದು ತುಂಬಿ ಹೃದಯ

ಎನ್ನಳಲನರಿತು ಶಿಲೆಕೂಡಹನಿತು ಕಂಬನಿಯ ಸೂಸುತಿರಲು
ನಿನ್ನೆದೆಯೊಳಿನಿತು ಮಿಡಿಯದೇ ತಂತು ಜಗವೆಲ್ಲ ದ್ರರವಿಸುತಿರಲು
ಶುಚಿಯಾಗಿ ಮಿಂದ ನಗುನಗುತ ಬಂದ ನಸುಲಜ್ಜೆವೆಣ್ಣಿನಂತೆ
ನಿಂದಿಹುದು ಕಮಲ ತನ್ನಿನಿಯ ನಮಲ ಪ್ರೇಮದ ಕಣ್ಣಿನಂತೆ

ತಾವರೆಯ ರಮಣ ಹೊಂಗಿರಣದರುಣ ತನ್ನೊಲುಮೆಯರಸಿ ಗೂಡ
ನಲ್ಗಬ್ಬದೂಟ ಆಡಿರಲು ಆಟ ನಾನಾಡಲಾರ ಕೂಡ?
ಹಕ್ಕಿಗಳ ಜೋಡಿ ಹಾರಿರಲು ಕೂಡಿ ಹಾಡುತ್ತ ಪ್ರೇಮಗೀತೆ
ನಾನೋರ್ವನಲೆದು ನಿನ್ನನ್ನು ತೊರೆದು ಹಾಡುತಿಹೆ ವಿರಹ ಗೀತೆ!

ಅದೊ ನೋಡು ತುಂಬಿ ಸೊಕ್ಕಿ ಎದೆದುಂಬಿ ಹೂವೊಡನೆ ಆಡುತಿಹುದು
ಸುಮ ಸುಮಕ ಹಾರಿ ಸುಧೆಯನ್ನು ಹೀರಿ ಗುಂಯೆಂದು ಹಾಡಿ ನಲಿದು
ಆ ಮೇಘ ಲಲನೆ ಗಿರಿಯಿನಿಯ ನೊಡನೆ ಮುತ್ತಿಟ್ಟು ನಲಿಯುತಿಹಳು
ಗಿರಿಗಾಗೆ ಮೋಡ ಎನಗಾರು ನೋಡ ಹೇಳೆನ್ನ ನೀರೆ ಹೇಳು

ನೆಗೆವೆರಳೆ ತೆರದಿ ಕುಣಿಯುತ್ತ ಭರದಿ ಬಾರೆನ್ನ ಚಲುವ ನಾರಿ
ಜೊತೆವಕ್ಕಿ ತೆರದಿ ಹಾರೋಣ ಮುದದಿ ತೆರೆದಿಹುದು ಸೊಗಕ ದಾರಿ
ಕೋಕಿಲೆಯು ಕುವಿದು ನೀನೆನ್ನನೊಲಿದು ಬಳಿಸಾರ್ವೆ ಎನ್ನುತಿಹುದು
ಮಾಂದಳಿರ ಗೊನೆಯು ಕಟ್ಟಿರ್ದ ತನೆಯು ಅಹುದೆಂದು ತೂಗುತಿಹುದು

ಬನದೇವಿ ಬರಲು ನಲ್ವಕ್ಕಿ ಕೂರಲು ತಮ್ಮೊಲವ ಬೀರುವಂತೆ
ಹಾಡುತ್ತ ತಾವು ಕುಣಿಯುತ್ತಲಿಹೆವು ನಿನ್ಬರವ ಸಾರುವಂತೆ
ಎನ್ನೆದೆಯ ಗೂಡ ಚೆಲುಹಕ್ಕಿ ಕೂಡ ಆಂತರ್ಯ ವ್ಯೋಮದಿಂದ
ನಿಟ್ಟಿಸುರ ನೋಡಿ ಸಂತಸದಿ ಹಾಡಿ ಸಾರಿಹುದು ಬರುವ ಅಂದ

ದೈವವನು ಹಳಿದು ಚೆಲುವೆಯನು ನೆನೆದು ತಪಿಸುತ್ತ ಅಳಲುತಿರಲು
ಕದರಿರ್ದ ಕುರುಳು ನೆವರಿಪ ಬೆರಳು ಆರದೋ ಸೋಂಕುತಿರಲು
ಭೂದೇವಿ ಬಂದು ಕೆಲದಲ್ಲಿ ನಿಂದು ನೇವರಿಪಳೇನೊ ರಮಿಸೆ
ಎನ್ನೆದೆಯ ಕರೆಯ ಕೇಳಿದಳೊ ಹೃದಯ ದೇವತೆಯು ಎಂದು ಅನಿಸೆ

ನಲುಮೆಯಲಿ ಓಲಿ ಮನವೆಲ್ಲ ತೇಲಿ ಸವಿಯುತ್ತಲಿರಲು ಸೊಗವ
ಬಾಗಿದಳು ಚದುರೆ ನೀಡಲಿಕೆ ಮದಿರೆ ಚೆಂದುಟಿಯ ಮುತ್ತಿನೊಲವ
ತುಂಬಿರಲು ಹೃದಯ ತಾಕಿಸುತೆ ಎದೆಯ ಒಂದಾಗಿ ನಾವು ನಲಿಯೆ
ನಮ್ಮೆದಯ ಹಕ್ಕಿ ಹಾರಿರಲು ಸೊಕ್ಕಿ ಉನ್ನತದ ಸವಿಯ ಸವಿಯೆ

ಸುರರೆಲ್ಲ ಬಂದು ಸೊಗ ತುಂಬಿ ತಂದು ಸುರಿದಿರಲು ತುಂಬ ಹರಸಿ
ಚೆನ್ನಣ್ಣನಂದು ಶುಭಮಸ್ತು ಎಂದು ಹರಸಿದನು ಒಲವ ಬಯಸಿ
ಮಲಗಿರಲು ಸುತ್ತ ಮಧುವೀಂಟಿ ಮತ್ತವಾಗಿರ್ದ ದಿಕ್ಕು ಹತ್ತು
ನಾನರಿವ ಮೊದಲು ಬಿರುಗಾಳಿ ಸಿಡಿಲು ಕನಸನ್ನು ಉರುಳಿಸಿತ್ತು

ತಂಗಾಳಿ ಬೀಸಿ ಜಗವನ್ನೆ ಜಯಿಸಿ ಗೈದಿರಲು ಧರೆಯ ಸೆರೆಯ
ನಲ್ಲೆಯನು ಬಿಡಿಸಿ ಕನಸನ್ನು ಕಡಿಸಿ ತೋರಿತ್ತು ತಿರುಗಿ ತಿರೆಯ
ಏನೆಲ್ಲ ನೆನಸೊ ಕಂಡದ್ದು ಕನಸೊ ಎಂದೆದೆಯ ಕೇಳಲಾನು
ನನಸಲ್ಲ ಕನಸು ಎಂದೆನ್ನೆ ಮನಸು ನನ್ನಲ್ಲಿ ನಕ್ಕ ನಾನು

ಮುಂದಿರ್ದ ದಾರಿ ನಿಮಷದಲಿ ಹಾರಿ ದಾಟುವಾ ಸರಳ ದಾರಿ
ಕಳವಳಿಸಿ ಮನವ ತಳಮಳಸಿ ತನುವ ಮುನ್ನದೆದೆ ಜೀವ ಹಾರಿ
ಮನಸೆಲ್ಲ ಕೊಳದ ದಂಡಯಣ ಬನದ ಎಲೆವನೆಯ ಬಾಲೆಯಲ್ಲೆ
ನೆಟ್ಟಿರಲು ತಿರುಗಿ ಬಾರದಲಿ ಒರಗಿ ಕಡು ನೊಂದ ಹೃದಯದಲ್ಲಿ

ಹರಿದಿತ್ತು ಹೊಳೆಯ್ಕು ಮಸುಕಾಗೆ ಕಳೆಯು ಮರಸಿತ್ತು ರಮ್ಯ ಸೆಳಕು
ನೈರಾಶ್ಯ ಛಾಯೆ ತುಂಬಿರಲು, ಮಾಯ ನುಂಗಿಹುದು ಎಲ್ಲ ಥಳಕು
ವಿಘ್ನೇಶ ಘಟ್ಟ ಹೆಸಿರೊಸನ ಉಟ್ಟ ಅಧಿನೃಪನ ಠೀವಿಯಾಂತು
ನಿಂತಿರಲು, ತೊರೆಯು ಹಾಡುತ್ತ ಕುಣಿಯುತಿಹುದೇನೊ ದೊರೆಗೆ ಸೋತು

ದೊರೆಯೊಲಿದರೇನು ತೊರೆ ಕುಣಿದರೇನು ಎನ್ನರಸಿ ತಿರುಗಿ ಬಹಳೆ?
ಗಿರಿಯಾಗೆ ನಾನು ತೊರೆಯಾಗಿ ತಾನು ಬಳಸುವಳೆ ಎನ್ನ ತರಳೆ?
ವಿಘ್ನೇಶನಡಿಯ ತುಂಬಿರ್ದ ಹುಡಿಯ ನೊಸಲಲ್ಲಿ ಮುದದಿ ಹಚ್ಚಿ
ವಿಘ್ನೇಶನೊಲಿದು ಕರುಣಿಸಲಿ ಎಂದು ಬೇಡಿದೆನು ಹೃದಯ ಬಿಚ್ಚಿ

ಕರುಳಿರವ ಕಲ್ಲು ಅದು ಎಂತು ಬಲ್ಲುದೆನ್ನೆದೆಯ ತೀರದಚ್ಛೆ
ಪ್ರತಿದನಿಸಿ ಘಟ್ಟ ನುಡಿಡಿತ್ತು ಅಟ್ಟ ಹಾಸದಲಿ “ನಿನಗೆ ಹುಚ್ಚೆ?”
ಎದುರಿರ್ದ ಪಣತಿ ಬೀರಿತ್ತು ಜ್ಯೋತಿ ಅಂಧತೆಯ ಆಳ ಬೆಳಗಿ
“ಹುಚ್ಚೆಲ್ಲ ಪ್ರೇಮ ಅಲ್ಲಡಗಿ ಕಾಮ ಕುಣಿಸಿಹುದು ತಿರುಗಿ ತಿರುಗಿ”

ಹುಚ್ಚಾಸೆ ಬಿಟ್ಟು ಹೊಸ ಜೀವ ತೊಟ್ಟು ಹೊಸ ಮನುಜನಾಗಿ ಬಂದೆ
ಇರುಳೆಲ್ಲ ಸಂದು ಹೊಂಗಿರಣವೊಂದು ನಗುತಿಹುದ ಕಂಡು ನಿಂದೆ!
ಹಿಂದಿದ್ದ ಇರುಳು ಈಗಿಲ್ಲ ಮರುಳು ಕಳೆದಿಹುದು ಮನಸಿನಿಂದ
ನಿಜ ಬೆಳಗು ಬಂದು ಎಚ್ಚರಿಸಿತಿಂದು ಎನ್ನೆದೆಯ ಕನಸಿನಿಂದ

ಹೂಬಳ್ಳಿ ಕಂಡು ಎದಸೊಗವ ನುಂಡು ಮರೆತಿತ್ತು ಹಳೆಯ ನೆನವ
ನೇಸರನು ಮೂಡಿ ಹೊಸಬೆಳಗ ನೀಡಿ ತೋರಿಹನು ಹೊಸತು ಜಗವ
ಜೀವನದ ಯಾತ್ರೆ ಜಗಕೆಲ್ಲ ಜಾತ್ರೆ ಜನಕೊಂದು ಹಬ್ಬದೂಟ
ಆ ಯಾತ್ರೆ ನಿಮಿಷ ಮನಕೆಲ್ಲ ಹರುಷ ರಸಿಕಂಗೆ ರಸದ ಊಟ

ನಿಬ್ಬಣದ ಮಾಟ ಏನೆಂಥ ಆಟ ಕಣ್ಮನಕೆ ಸರಸ ನೋಟ
ಅಮೃತವು ಕಿವಿಗೆ ವರ್ಣನೆಯ ಸವಿಗೆ ಹೃದಯಕ್ಕೆ ಆಯ್ತೂ ಮಾಟ
ನವ ಜೀವವಾಂತು ಹೊಸಭಾವ ತಂತು ಕುಣಿಸಿಹುದು ಇಳೆಯ ನಿಂದು
ಹಗಲಿರುಳ ಯಾತ್ರೆ ಜಗಕೊಂದು ಜಾತ್ರೆ ಚೈತನ್ಯ ಪಡೆಯಲೆಂದು
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...