ಎಲೆ ಜೀವ, ನೀನಾರೊ ನಾ ತಿಳಿಯೆನಯ್ಯ,
ತಿಳಿವೆನಿದ ನೀನು ನಾನಗಲಬೇಕಯ್ಯ!
ಎಲ್ಲಿ ಕಲೆತೆವೊ ಮೊದಲು, ಮೇಣೆಂದೊ, ಎಂತೊ,
ಇಲ್ಲ ಇಂದಿಗು ನನಗೆ ಮರ್ಮ ಕಾಣಯ್ಯ.
ಎಲೆ ಜೀವ, ಬಾಳಿದೆವು ಬಹುಕಾಲ ಇಲ್ಲಿ,
ಹೊಳೆವ ಸಿರಿದಿನಗಳಲಿ, ದುರ್ದಿನಗಳಲ್ಲಿ.
ಹೊಂದಿ ಕೆಳೆತನ ಸವಿದು, ಅಗಲುವುದು ಕಡಿದು;
ಒಂದೆರಡು ನಿಟ್ಟುಸಿರು, ಕಣ್ಣೀರು, ಬಿಡದು.
ಹೇಳದೆಯೆ ಕದ್ದು ನಡೆ; ಮೆಲ್ಲನೆಚ್ಚರ ಕೊಡದೆ
ನಿನ್ನ ಸಮಯವ ನೋಡಿ ಜಾರೈ!
ಹೊರಟೆನಿರುಳಾಯ್ತನದೆ, ನಲಿವ ನಾಡೆಲ್ಲಲ್ಲಿ
ಏಳು ಬೆಳಗಾಯ್ತೆನುತ ಬಾರೈ!
*****
MRS. BARBAULD (1743 – 1825) Life






