
ಅರೆ ಯಾವುದಿಲ್ಲಿ?
ಜ್ವಲಿಸುವ ವಸಂತವಿದೆ.
ತಿಳಿನೀಲಿ ಗಗನವಿದೆ,
ಕೊರತೆ ಇನ್ನೆಲ್ಲಿ?
ಜಗವೆಲ್ಲ ಬೆಳಗುವುದು – ಕಣ್ಗೆ ಪಾಳೆಲ್ಲ!
ಸೊಗಸಾದ ಕಟ್ಟಿಹುದು – ಚಿತ್ರಪಟವಿಲ್ಲ!
ಮಾವಿನೆಳತಳಿರೇನು, ಬಿರಿದ ಹೂವೇನು,
ಮಲ್ಲಿಗೆಯ ಮನೆಯೇನು ಬರಿದು ಮನೆ ತಾನು!
ಬಾ, ಚೆಲುವೆ, ಅರಕೆಯನ್ನು ಪರಿಪೂರ್ಣಮಾಡು,
ನೀಲಗಗನವ ಬಗಿದು ನನ್ನೆದೆಯ ಕೂಡು;
ಮಿನುಗುತ ವಸಂತಕ್ಕೆ ಹೊಸಕಳೆಯ ನೀಡು;
ಮಲ್ಲಿಗೆಯ ಸೊಬಗನಿಮ್ಮಡಿಸಿ ಉಸಿರಾಡು,
ಜಡವಾಗಿ ಸತ್ತಿಲ್ಲಿ
ಕೆಡೆದಿರುವುದೆಲ್ಲ,
ಜೀವಕಳೆ ತುಂಬುವುದು,
ಪ್ರೇಮವುಕ್ಕುವುದು!
ಪ್ರೇಮವುಕ್ಕುವುದು.
*****
BROWNING (1812 – 1889) : Wanting is What?














