ಪಾಪಾತ್ಮ ರಾಜ

ಪಾಪಾತ್ಮ ರಾಜನ ರಾಜ್ಯದಲ್ಲಿ ಸಂಪತ್ತು ಬಹಳವಿತ್ತು. ಅದೆಲ್ಲ ಅರಮನೆ, ದಂಡು, ಪರಿವಾರ ಅವುಗಳಿಗೇ ಖರ್ಚಾಗಿ ಬಿಡುತ್ತಿತ್ತು. ಆದರೆ ರಾಜನಿಗೆ ಹಣವನ್ನು ಕೂಡಹಾಕಬೇಕೆಂಬ ಹವ್ಯಾಸ ಬಹಳ. ಅದಕ್ಕಾಗಿ ಅವನು ಹೆಂಡತಿ, ಮಕ್ಕಳು, ರಾಜ್ಯ ಬಿಟ್ಟುಕೊಟ್ಟು ಕೈಯಲ್ಲಿ ಸಾವಿರ ರೂಪಾಯಿ ತೆಗೆದುಕೊಂಡು ದೇಶಾಂತರಕ್ಕೆ ಹೋಗಿಬಿಟ್ಟನು.

ಹನ್ನೆರಡು ಯೋಜನ ದಾರಿ ದಾಟಿ ಹೋದನು. ಮೂರುದಿನ ಊಟ ಮಾಡಿರಲಿಲ್ಲ. ದಾರಿಯಲ್ಲಿ ಒಂದು ಆಲದಮರವನ್ನು ನೋಡಿ ಅದರ ಹಣ್ಣುಗಳನ್ನು ತಿನ್ನಬೇಕೆಂದು ಹತ್ತಿರ ಹೋದನು. ಅಷ್ಟರಲ್ಲಿ ಮರದ ಮೇಲೆ ಕುಳಿತ ಹಕ್ಕಿಗಳೆಲ್ಲ ಕೂಗಿದವು – “ಈತನು ಮಹಾಧನಲೋಭಿ. ಹಣದಾಶೆಗಾಗಿ ತನ್ನನ್ನು ನಂಬಿದ ಹೆಂಡರು ಮಕ್ಕಳನ್ನು ಸಹ ಬಿಟ್ಟು ಬಂದ ಪಾಪಿ. ಈತನಿಗೆ ಆಶ್ರಯ ಕೊಡಬೇಡ.”

ಆಲದ ಮರವು ಎಲೆಗಳನ್ನೆಲ್ಲ ಉದುರಿಸಿ ಅವನಿಗೆ ನೆರಳು ಸಿಗದಂತೆ ಮಾಡಿತು. ತಿನ್ನುವಾಸೆಯಿಂದ ಹಣ್ಣುಗಳಿಗೆ ಕೈ ಹಾಕಿದರೆ, ಹಣ್ಣಿನ ತುಂಬ ಹುಳುಗಳೇ ಬುಚುಗುಡುತ್ತಿದ್ದವು. ಅವನು ನಿರಾಶನಾಗಿ ಅಲ್ಲಿಂದೆದ್ದನು.

ಮತ್ತೆ ಹನ್ನೆರಡು ಗಾವುದ ನಡೆದು ಹೋಗಲು, ರಾಜನು ಮಗಳ ಊರನ್ನು ತಲುಪಿದನು. ಮಗಳಿಗೆ ಬಡತನ ಬಂದಿತ್ತು. ಕಟ್ಟಿಗೆ ಹೊರೆತಂದು ಮಾರಿಕೊಂಡು ಉಪಜೀವನ ಸಾಗಿಸುತ್ತಿದ್ದಳು. ತನ್ನ ಬಳಿಯಲ್ಲಿರುವ ಹಣವನ್ನು ಕಂಗಾಲಳಾದ ಮಗಳು ನೋಡಿದರೆ ದೋಚದೆ ಬಿಡಳೆಂದು ಬಗೆದು, ಎರಡು ಬಟ್ಟೆಯ ತುಂಡುಗಳಲ್ಲಿ ಐದೈದು ನೂರು ನಾಣ್ಯಗಳನ್ನು ಹರಹಿ, ತನ್ನ ಎರಡೂ ಕಾಲುಗಳಿಗೆ ಸುತ್ತಿಕೊಂಡು ಮೇಲೆ ಹುರಿಯಿಂದ ಬಿಗಿದನು. ನಡೆಯುವುದಕ್ಕೆ ಕಷ್ಟವಾದರೂ, ಕಾಲುಗಳಿಗೆ ನೋವಾದರೂ ಸಹಿಸಿಕೊಂಡು ಮಗಳ ಮನೆಗೆ ಹೋದನು.

ಮಗಳು ಬಡವಿಯಾದರೂ ಬಹಳ ದಿನಕ್ಕೆ ಬಂದ ತಂದೆಯನ್ನು ಆನಂದದಿಂದ ಬರಮಾಡಿಕೊಂಡಳು. ತಾನು ಅರಹೊಟ್ಟೆಯುಂಡು, ತಂದೆಗೆ ಊಟದಿಂದ ತೃಪ್ತಿ ಪಡಿಸಿದಳು. ಒಂದೆರಡು ದಿನಗಳಲ್ಲಿ ದೀಪಾವಳಿ ಹಬ್ಬ ಬಂತು. ಮಗಳ ಬಳಿಯಲ್ಲಿ ಏತಕ್ಕೂ ಹಣವಿರಲಿಲ್ಲ. ಅದು ಗೊತ್ತಿದ್ದರು ತನ್ನಲ್ಲಿರುವ ಹಣ ತೆಗೆದು ಕೊಡಲಿಲ್ಲ.

ಕಾಲುನೋವಿನಿಂದ ಮಿಡುಕುವ ತಂದೆಯನ್ನು ಉಪಚರಿಸಬೇಕೆಂದು ಮಗಳು ಹತ್ತಿರಕ್ಕೆ ಬಂದರೂ ತಂದೆ ತನ್ನನ್ನು ಮುಟ್ಟಗೊಡಲಿಲ್ಲ. ಆದರೆ ಆತನಿಗೆ ನಿದ್ರೆ ಹತ್ತಿದಾಗ ಮಗಳು ಆತನ ಕಾಲಬಟ್ಟಿ ಬಿಚ್ಚುವಷ್ಟರಲ್ಲಿ ನಾಣ್ಯಗಳೆಲ್ಲ ಚೆಲ್ಲಾಡಿದವು. ತಂದೆಗೆ ಎಚ್ಚರವೂ ಆಯಿತು. “ಇಷ್ಟು ಹಣ ಹತ್ತಿರ ಇರಿಸಿಕೊಂಡೂ, ನಮ್ಮ ಗೋಳಾಟದಲ್ಲಿ ನೆರವಾಗಲಿಲ್ಲವಲ್ಲ ನೀನು” ಎಂದು ತಂದೆಗೆ ಮಗಳು ಸ್ಪಷ್ಟವಾಗಿಯೆ ನುಡಿದಳು.

“ನಾನು ಈ ಹಣಕ್ಕಾಗಿಯೇ ಮನೆಯನ್ನೂ ರಾಜ್ಯವನ್ನೂ ಬಿಟ್ಟು ಬಂದಿದ್ದೇನೆ. ನನ್ನ ಜೀವಹೋಗುವ ಪ್ರಸಂಗ ಬಂದರೂ ನಾನು ಯಾರಿಗೂ ಹಣ ಕೊಡುವುದಿಲ್ಲ” ಎಂದು ತಂದೆ ಹೇಳಿಬಿಟ್ಟು ಮುಂದಿನ ಹಾದಿ ಹಿಡಿದನು.

ಒಂದು ಕಟ್ಟಡವಿ. ಹೊತ್ತು ಮುಳುಗಿದೆ. ಮುಂದೆ ಒಂದು ಗುಹೆ ಕಾಣಿಸಿತು. ಹತ್ತಿರ ಹೋದರೆ ಅದರ ಬಾಗಿಲಲ್ಲಿ ಸತ್ತ ಪ್ರಾಣಿಗಳ ಅಸ್ಥಿಪಂಜರಗಳು ಹರಡಿಕೊಂಡಿದ್ದವು. ಅದನ್ನು ಕಂಡು ರಾಜನಿಗೆ ಭಯವೆನಿಸಿತು. ಅದರೂ, ಗುಹೆಯ ಬಾಗಿಲಲ್ಲಿ ಕುಳಿತುಕೊಂಡನು. ಅಷ್ಟರಲ್ಲಿ ಮನುಷ್ಯಪ್ರಾಣಿಯ ವಾಸನೆಹಿಡಿದು ಒಂದು ಹುಲಿ ಅಲ್ಲಿಗೆ ಬಂದುದೇ ಅವನ ಮೇಲೆ ಹಾರಿ ಕೊಂದು ತಿಂದು, ಉಳಿದುದನ್ನು ಗುಹೆಯಲ್ಲಿ ಒಗೆದು ಮತ್ತೆ ಹೋಯಿತು ಅರಣ್ಯಕ್ಕೆ.

ರಾಜನ ಅಸ್ಥಿಪಂಜರವನ್ನು ನರಿಗಳು ಗುಹೆಯೊಳಗಿಂದ ಹೊರಗೆ ಎಳತಂದು ಹೊಟ್ಟೆತುಂಬ ತಿಂದವು. ಹದ್ದು ಕಾಗೆಗಳು ನೆರೆದು ಅವನ ದೇಹವನ್ನು ಹರಿದುಕೊಂಡು ತಿನ್ನುವಾಗ ಬೆಳ್ಳಿಯ ರೂಪಾಯಿಗಳಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವು.

ಆ ಅರಣ್ಯದಲ್ಲಿ ಏಳು ಜನ ಕಳ್ಳ ಸೋದರರಿದ್ದರು. ಅವರು ಕಳವು ಮಾಡಿ ತಂದ ಹಣವನ್ನು ನಿತ್ಯದಂತೆ ಗುಹೆಯ ಮುಂದೆ ಕುಳಿತು ಹಂಚಿಕೊಳ್ಳುವಾಗ ಸತ್ತು ಬಿದ್ದ ಹೆಣದ ಸುತ್ತಲು ಚಿಲ್ಲಾಡಿದ ಹಣವನ್ನೆಲ್ಲ ಒಟ್ಟುಗೂಡಿಸಿ ಎಣಿಸಿ ನೋಡಿದರೆ ಸಾವಿರ ರೂಪಾಯಿ ಇದ್ದವು.

ಮನೆಯಿಂದ ಬುತ್ತಿ ತರುವುದಕ್ಕಾಗಿ- ಕಳ್ಳರು ತಮ್ಮ ಚಿಕ್ಕ ತಮ್ಮನನ್ನು ಊರೊಳಗೆ ಕಳಿಸಿದ್ದರು. ಬುತ್ತಿಕಟ್ಟಿಕೊಂಡು ತಿರುಗಿ ಬರುವಾಗ ಅವನಲ್ಲಿ ದುರ್ಬುದ್ಧಿ ಹುಟ್ಟಿಕೊಂಡಿತು. ಆರು ಜನ ಅಣ್ಣಂದಿರನ್ನೆಲ್ಲ ಕೊಂದುಹಾಕಿದರೆ ಅಷ್ಟೆಲ್ಲ ದ್ರವ್ಯ ತನ್ನದಾಗುವದೆಂದು ಇಲಿಪಾಷಾಣ, ಶಂಖಪಾಷಾಣ ಎಂಬ ವಿಷಗಳನ್ನು ಅರಣ್ಯದಲ್ಲಿ ದೊರಕಿಸಿ ಅಣ್ಣಂದಿರ ಬುತ್ತಿಯಲ್ಲಿ ಬೆರೆಸಿದನು. ಅದರಲ್ಲಿ ತನ್ನ ಬುತ್ತಿಯೂ ಇದ್ದುದನ್ನು ಮರೆತೇಬಿಟ್ಟನು.

ಎಲ್ಲರೂ ಕೂಡಿ ತಂತಮ್ಮ ಮನೆಯಿಂದ ತರಿಸಿಕೊಂಡ ಬುತ್ತಿಗಳನ್ನು ಬಿಚ್ಚಿ ಉಣ್ಣಲು, ವಿಷವೇರಿ ಸತ್ತುಬಿದ್ದರು.

ಆ ಊರಿನ ರಾಜ, ಪ್ರಧಾನಿ ಬೇಟೆಯಾಡುತ್ತ ಆ ಸಂದರ್ಭದಲ್ಲಿ ಗುಹೆಯ ಬಳಿ ಬಂದರು. ಏಳು ಜನ ಸತ್ತುಬಿದ್ದುದನ್ನು ಕಂಡರು. ಅವರೆಲ್ಲ ಕಳ್ಳರೇ ಎಂದು ನಿರ್ಧರಿಸಿದರು. ಅಲ್ಲಿ ಸೂರೆಗೊಂಡ ಹಣವನ್ನೆಲ್ಲ ಚೀಲು ತುಂಬಿ ಕುದುರೆಗಳ ಮೇಲೆ ಹೇರಿಸಲು ರಾಜನು ಪ್ರಧಾನಿಗೆ ತಿಳಿಸಿದನು. ಅದರಂತೆ ಪ್ರಧಾನಿಯು ಹಣವನ್ನೆಲ್ಲ ಗಂಟುಬಿಚ್ಚಿ ಕುದುರೆಗಳ ಮೇಲಿಟ್ಟು ಹಗ್ಗದಿಂದ ಬಿಗಿಸಿದನು, ರಾಜನೂ ಪ್ರಧಾನಿಯೂ ತಂತಮ್ಮ ಕುದುರೆ ಹತ್ತಿ ಊರಕಡೆಗೆ ಸಾಗಿದರು.

ಪ್ರಧಾನಿಯ ಮನದಲ್ಲಿ ವಿಕಲ್ಪವು ಮೊಳೆಯಿತು, ಅಷ್ಟೆಲ್ಲ ದ್ರವ್ಯವು ತನ್ನದೇ ಆಗಲೆಂದು. ಸೊಂಟದೊಳಗಿನ ಚಂದ್ರಹಾರದಿಂದ ರಾಜನ ಕುತ್ತಿಗೆಗೆ ಜಡಿದನು. ಅದರಿಂದ ಅವನ ರುಂಡ-ಮುಂಡಗಳು ಬೇರ್ಪಟ್ಟು ಬಿದ್ದವು. ಆದರೆ ರಾಜನ ರುಂಡವು ಟುಣುಪುಣು ಜಿಗಿದಾಡತೊಡಗಿತು – “ಮಂತ್ರೀ, ನನ್ನ ಉಪ್ಪನ್ನುಂಡು ದ್ರವ್ಯದಾಶೆಯಿಂದ ನನ್ನ ಹೆಣವನ್ನೇ ಕೆಡವಿದಿಯಲ್ಲ ! ಹಣವನ್ನು ಅದೆಷ್ಟು ಚಲ್ಲಿದರೆ ಈ ಸತ್ತ ಜೀವವು ಬಂದೀತು ?” ಎಂದು ದವಡೆಕಚ್ಚಿ ಕೇಳಿದಂತಾಯಿತು. ಮರುಕ್ಷಣವೇ ರುಂಡವು ಉರುಳುತ್ತ ಹೋಗಿ ಹತ್ತಿರದ ಬಾವಿಯಲ್ಲಿ ಬಿದ್ದುಕೊಂಡಿತು.

ಮಂತ್ರಿಗೆ ಅತಿಶಯ ಪಶ್ಚಾತಾಪವಾಯಿತು. ಅರಮನೆಯಲ್ಲಿ ಕೇಳಿದರೇ ಅವರಿಗೆ ಏನೆಂದು ಹೇಳಲಿ ? ಹಣದಾಶೆಯಿಂದ ನಾನು ಪರಮನೀಚನಾದೆ ಎಂದು ಎಲ್ಲ ಅನರ್ಥಗಳಿಗೂ ಮೂಲವಾದ ಹಣವನ್ನು ಬಾವಿಗೆ ಚೆಲ್ಲಿದನು. ಆ ಹಣದ ಸಹವಾಸದಿಂದ ತನಗೆ ದುರ್ಬುದ್ಧಿ ಬಂದಿತಲ್ಲದೆ, ತನಗೇನೂ ಅರಮನೆಯಲ್ಲಿ ಕಡಿಮೆಯಿರಲಿಲ್ಲವಲ್ಲ! ಆದ್ದರಿಂದ ಆ ಹಣವು ಪಾಪಿಯ ಹಣವೇ ಇರಬೇಕು. ಅಸಹ್ಯವಾದ ಈ ವೇದನೆಯು ಇಲ್ಲದಾಗಬೇಕಾದರೆ ನಾನೂ ರಾಜನ ರುಂಡ ಬಿದ್ದ ಬಾವಿಯಲ್ಲಿಯೇ ಬಿದ್ದು ಸಾಯುವುದೇ ಉಪಾಯವೆಂದು ಅತ್ತ ತೆರಳಿದನು.

“ಸ್ವಾಮಿದ್ರೋಹಿ. ಪಾಪೀ ! ಈ ಬಾವಿಯಲ್ಲಿ ಬಿದ್ದು ಸತ್ತು ನೀರನ್ನು ಅಪವಿತ್ರ ಮಾಡಬೇಡ. ಆ ಸಾವಿರರೂಪಾಯಿಗಳ ಆಶೆಗೆ ಬಿದ್ದು ಈಗಾಗಲೇ ಒಂಬತ್ತು ಜನರು ಪ್ರಾಣತೆತ್ತಿದ್ದಾರೆ. ನೀನೊಬ್ಬ ಹತ್ತನೆಯವನು. ಮತ್ತೆಲ್ಲಾದರೂ ಹೋಗು” ಎಂದು ಬಾವಿಯೊಳಗಿನ ರಾಜನ ರುಂಡವು ಹೇಳಿದಂತಾಯಿತು.

ಮಂತ್ರಿ ಬಾವಿಗೆ ಬೀಳುವುದನ್ನು ಬಿಟ್ಟುಕೊಟ್ಟು ಕುದುರೆ ಹತ್ತಿ ಹನ್ನೆರಡುಗಾವುದ ದೂರ ಹೋದನು. ಅಲ್ಲಿಯ ಒಂದು ಮರಹತ್ತಿ ಕೆಳಗೆ ಬಿದ್ದು ಸಾಯಬೇಕೆಂದು ಯೋಚಿಸಿದನು. ಆದರೆ ಮರದಿಂದ ಹಾರಿದಾಗ ಸಾಯದೆ ಬರಿ ಕೈಕಾಲು ಮುರಿದರೇನುಗತಿ ಮುಂದೆ? ಅದರಿಂದ ಉರುಲು ಹಾಕಿಕೊಂಡು ಸಾಯುವುದೇ ಒಳ್ಳೆಯದೆಂದು ಬಗೆದನು. ಸತ್ತುಬಿದ್ದರೆ ಪೆಟ್ಟುಹತ್ತಬಾರದೆಂದು ಸುತ್ತಲಿನ ಅಡವಿಯಿಂದ ಬೆರಣಿಗಳನ್ನು ಆಯ್ದು ತಂದು, ಮರದ ಕೆಳಗೆ ರಾಸಿಹಾಕಿ ಬಳಿಕ ಉರುಲು ಹಾಕಿಕೊಂಡು ಸತ್ತನು.

ಒಂದು ಹುಲಿ ಮರವನ್ನೇರಿ, ಅಲ್ಲಿಂದ ಅವನ ಹೆಣದ ಮೇಲೆ ಜಿಗಿದು ಕುಳಿತಿದ್ದರಿಂದ ಆ ಭಾರಕ್ಕೆ ಹಗ್ಗ ಹರಿದು ಹೆಣವು ಬೆರಣಿಯ ರಾಸಿಯ ಮೇಲೆ ಬಿತ್ತು. ಹುಲಿ ನೆಲಕ್ಕೆ ಹಾರಿ ಅವನ ಮಾಂಸ ತಿಂದು ಹೋಯಿತು. ಉಳಿದುದನ್ನು ನರಿಗಳು ಬಂದು ಹರಕೊಂಡು ತಿಂದವು.

ಬೇಟೆಗೆಂದು ಹೋದ ರಾಜನು ಇನ್ನೂ ಬರಲಿಲ್ಲವೆಂದು ರಾಣಿಗೆ ಬಹಳ ಚಿಂತೆಯಾಯಿತು. ಅವನನ್ನು ಹುಡುಕಲು ಹೋದ ಚಾರರು, ಒಂದು ಅಡವಿಯಲ್ಲಿ ಯಾರವೋ ಅಸ್ಥಿಪಂಜರಗಳು ಮಾತ್ರ ಬಿದ್ದಿವೆಯೆಂದೂ, ಹರಕುಬಟ್ಟೆ – ಬೆಳ್ಳಿಯ ನಾಣ್ಯಗಳು ಹರಡಿವೆಯೆಂದೂ ಸುದ್ದಿ ತಂದರು.

ನಾಲ್ಕು ದಿನಗಳಾದ ಬಳಿಕ ರಾಣಿ ಸೈನ್ಯದೊಡನೆ ಅರಣ್ಯಕ್ಕೆ ಹೋಗಿ ಶೋಧ ಮಾಡಿದಾಗ ರಾಜನ ಕಿರೀಟ. ಕರ್ಣಕುಂಡಲ ಸಿಕ್ಕಿದವು. ಅಸ್ಥಿಪಂಜರಗಳಿಗೆ ಅಗ್ನಿಸಂಸ್ಕಾರಮಾಡಿಸಿ, ರಾಜಧಾನಿಗೆ ಬಂದಳು. ಆ ಬಳಿಕ ಅಪರಕರ್ಮ ಮಾಡಿಸುವುದಕ್ಕೆ ಏರ್ಪಾಡು ನಡೆಸಿದಳು.

ರಾಣಿಯು ಮಗನನ್ನು ಹತ್ತಿರ ಕರೆದು ಅವನಿಗೆ ಹೇಳಬೇಕಾದುದನ್ನೆಲ್ಲ ಹೇಳಿ. ತಾನು ದುಃಖದಿಂದ ಅನ್ನ ನೀರು ಬಿಟ್ಟು ಕೊರಗಿ ಕೊರಗಿ ಸತ್ತುಹೋದಳು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯೆ ನಿನ್ನ ಕಂದನಾದೆನಲ್ಲ
Next post ದೀಪಗಳ ದಾರಿಯಲಿ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…