ಕಾಡಲು ಬೇಡಲು ಸುಮ್ಮನೆ ಹಾಡಲು
ಅತ್ತಿಗೆ ಬೇಕು ನನಗತ್ತಿಗೆ ಬೇಕು
ಅಣ್ಣನ ಹತ್ತಿರ ವಕಾಲತು ಮಾಡಲು
ಅತ್ತಿಗೆ ಬೇಕು

ಅಣ್ಣನ ಮಾಫಿಯ ನಿಶ್ಶರ್‍ತ ಪಡೆಯಲು
ಅತ್ತಿಗೆ ಬೇಕು
ಅಂಗಿಯೊ ಚಡ್ಡಿಯೊ ಹರಿದರೆ ಹೊಲಿಯಲು
ಅತ್ತಿಗೆ ಬೇಕು

ತಲೆಗೆಣ್ಣೆ ಹಚ್ಚಿ ಮೀಯಲು ದೂಡಲು
ಅತ್ತಿಗೆ ಬೇಕು
ಸೇಮಿಗೆ ಕಾಯ್ಹಾಲು ಹೆಚ್ಚೇ ತಿನಿಸಲು
ಅತ್ತಿಗೆ ಬೇಕು

ಸುಮ್ಮನೆ ನಗಲು ಹರಟೆ ಕೊಚ್ಚಲು
ಅತ್ತಿಗೆ ಬೇಕು
ದೂರ ಹೊರಟಾಗ ನಾಲ್ಕಾಸು ಕೊಡಲು
ಅತ್ತಿಗೆ ಬೇಕು

ಮಾತುಮಾತಿಗೆ ಜಾಗ್ರತೆ ಹೇಳಲು
ಅತ್ತಿಗೆ ಬೇಕು
ದಡಮೆಗೆ ಬಂದು ಬೀಳುಕೊಡಲು
ಅತ್ತಿಗೆ ಬೇಕು

ಒಂದೊಂದ್ಸಲ ನನಗಮ್ಮನಿಗಿಂತಲು
ಅತ್ತಿಗೆಯೇ ಬೇಕು
ಅಮ್ಮನ ಪ್ರೀತಿಯಂತು ಇದ್ದೇ ಇದೆ
ಅತ್ತಿಗೆ ಪ್ರೀತಿಗೆ ಪುಣ್ಯವೆ ಬೇಕು
ಅಂಥಾ ಅತ್ತಿಗೆ ಬೇಕು
*****