ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ
ತುರುಬೀನ ಗಿಣಿಯಾಗಿ ಹಾಡ್ಯಾನೆ
ಹುಳವಿಲ್ಲ ಪಕಳ್ಯಾಗ ಹುಳಿಯಿಲ್ಲ ಕವಳ್ಯಾಗ
ಹುಳುಹುಳು ಹುಡಿಗೀಯ ನೋಡ್ಯಾನೆ ||೧||
ಆ ಗಂಡ ಈ ಗಂಡ ಯಾಗಂಡ ಯಾತಕ್ಕ
ಈ ಮಿಂಡ ಹುಚಮುಂಡ ಬಂದಾನೆ
ಕತ್ಲಾಗ ಕರಿಬೆಕ್ಕು ಕಣ್ಕಿಸಿದು ಕಂಡಾಂಗ
ಕೊತವಾಲ ಕರಿಹೆಣ್ಣು ಎಳದಾನೆ ||೨||
ಹೂದೋಟ ಹುಡುಗಾಗಿ ಕುಂಟಾಟ ಕುರುಬಾಗಿ
ಹುಡುಗೀಯ ಜಡಿಬಿಚ್ಚಿ ಬಾಚ್ಯಾನೆ
ಹಿಕ್ಕುಗಟ್ಟಿದ ಕೂದ್ಲಾ ಹೆಕ್ಕೆಕ್ಕಿ ಹಿಕ್ಯಾನೆ
ಬೊಗಬೊಗಸಿ ಹೇನ್ಕಂಡು ನಕ್ಕಾನೆ ||೩||
ಜರತಾರಿ ಚಲುವಯ್ಯ ಮುರತಾಪ ಮುರಿಗೆಯ್ಯ
ಮುದಕೇರ ಹುಡಿಗೇರ ಮಾಡ್ಯಾನೆ
ಮರೆಮಾಚು ಗೊತ್ತಿಲ್ಲ ನಾಚೀಗಿ ಕಲಿತಿಲ್ಲ
ದಾರ್‍ಯಾಗ ಉಟಸೀರಿ ಉಚ್ಯಾನೆ ||೪||
*****