ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ
ಕಣ್ಣೀರ ಸುರಿಸುತ್ತಾ ಕೊರಗುವೇಕೆ!
ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ
ಸೀತೆ ಮಿಥಿಲೆ ತೊರೆದು ಹೋಗುವಳೆಂದೆ!
ಸೀತೆ ಮನ ತುಂಬಿದವ ಶ್ರೀರಾಮ
ಶ್ರೀರಾಮ ವರಿಸಿದ ಹೆಣ್ಣು ಸೀತೆ
ಇಬ್ಬರಾಸೆಗಳಿಂದು ಕೈಗೂಡಿ ಅವರಿಂದು
ಸತಿಪತಿಗಳಾಗಿಹುದು ದೈವಲೀಲೆ |
ಇಂದು ಮಿಥಿಲಾಪುರವೂ ವೈಭವದಿ ಮಿಂಚಿಹುದು
ಅರಮನೆಯ ತುಂಬೆಲ್ಲಾ ಜನಸಾಗರ
ಜನಕರಾಜನ ಕಣ್ಣು ತುಂಬಿ ನಿಂತಿದೆ ಇಂದು
ಸಂತೋಷದಲಿ ದುಃಖ ಕೂಡಿಕೊಂಡು |
ನೋಡು ಗಿಳಿಯೆ ನಿನ್ನ ಆ ಗೆಳತಿ ಸೀತೆಯನು
ಹಿರಿಯ ಸಂತಸದಲ್ಲು ದುಃಖಭಾವ
ಚಿಗುರು ಬೆರಳುಗಳಿಂದ ತಂದೆ ಕಣ್ಣೀರನ್ನು
ಒರೆಸಿ ನಗಿಸುತಲಿಹುದು ಕಾಣದೇನು!
ಸಲಹಿದಪ್ಪನ ಹೊರತು ಆತ್ಮೀಯರಾರಿಹರು!
ನೀನಲ್ಲವೇ ಅವಳ ಪ್ರೀತಿ ಗೆಳತಿ!
ನಿನ್ನ ಮರೆಯುವಳೇನೇ, ನಿನ್ನ ಬಿಟ್ಹೋಗುವಳೆ!
ತವರು ನೆನಪಿನ ಒಡವೆ ನೀನೆ ತಾನೆ!
ನೋಡು ಅರಮನೆ ಮುಂದೆ ಕನಕರಥ ನಿಂತಿಹುದು
ಶ್ರೀರಾಮ ಅದರಲ್ಲಿ ಕುಳಿತಿಹನು
ಕಣ್ಣ ಕುಡಿ ನೋಟದಲೆ ರಾಮ, ಸೀತೆಯ ಕರೆವ
ನಿನಗೆ ಆಯಿತೆ ಲಜ್ಜೆ! ಘಾಟಿ ನೀನು|
ನಿನ್ನ ಇನಿದನಿ ನಿನ್ನ ಇಂಪಾದ ಸವಿನುಡಿಯ
ಎಲ್ಲೂ ಕೇಳದೆ ಸೀತೆ ಹುಡುಕುತಿಹಳು
ಬಾ ನನ್ನ ತೊಡೆವೇರು ಎನುತ ಕರೆಯುತಿಹಳು
ಪಿಸುಮಾತು ಮೆಲು ದನಿಯ ದಾಟಿಯಲ್ಲಿ|
ನವ ದಂಪತಿಗಳ ನಡುವೆ ನನ್ನ ಇರುವಿಕೆ ಸರಿಯೇ
ಎಂದೇಕೆ ಬೇಸರ ಪಡುತಲಿರುವೆ ||
ಸೀತೆ ಪ್ರತಿರೂಪದಲಿ ಆ ರಥದ ಕೆಳೆಯು ನೀನು
ಪಯಣಿಸಮ್ಮ ಗಿಳಿಯೆ ಮುಂದೆ ನೀನು !
ಬಾ ಗಿಳಿಯೆ ರಥವೇರು ಸೀತೆ ಕರೆಯುತಲಿಹಳು
ಹೊತ್ತಾಯ್ತು ಇನ್ನೇಕೆ ಚಿಂತೆ ನಿನಗೆ!
ಮೌನ ಬಿಡು ಸುತ್ತೆಲ್ಲ ಚೈತ್ರ ಚೆಲುವಿದೆ ನೋಡು
ಹಾಡುತ್ತ ನೀ ಸಾಗು ಹೆಮ್ಮೆಯಿಂದ |
*****