೧
ನಿಜ ಮಾರಾಯರೆ
ನಿಮ್ಮಂತೆ ದೊಡ್ಡಜಾತಿಯ ಗುಡ್ಡಗರ್ಭದಲ್ಲಿ
ಹುಟ್ಟಿದವ ನಾನಲ್ಲ;
ಅಂಥ ದೌರ್ಭಾಗ್ಯ ನನ್ನದಲ್ಲ.
ದಿಡ್ಡಿಬಾಗಿಲ ಬಳಿ ಗೊಡ್ಡು ಬಾಯಿಯ ತೆರೆದು
ಬುಗುಬುಗು ಬಂಡಿ ಬಿಡುವವನಲ್ಲ;
ಚಂದ್ರಬೆಳಕಿನಲ್ಲಿ ಲಾಂದ್ರ ಹುಡುಕುವ ನಿಮ್ಮ
ಸಂದಿಮನ ನನಗಿಲ್ಲ.
ನ್ಯಾಯ ಬುತ್ತಿಕಟ್ಟಿ ನೆತ್ತಿ ಮೇಲಿಟ್ಟುಕೊಂಡ
ನಕ್ಕಿ ಮುಖದ ಮಾರಾಯರೆ
ಮತ್ತೆಮತ್ತೇಕೆ ಎಳೆಯುವಿರಿ ಕಬ್ಬಿಣದ ಮೈಮೇಲೆ
ದಬ್ಬಳದ ಬರೆ?
ನನಗೆ ನೆನಪಿದೆ: ನಾನು ನಿಮ್ಮವನಲ್ಲ
ನಿಮ್ಮ ಹಳೆ ಆಸ್ತಿ ಅಸ್ಥಿ ನನಗೆ ಬೇಕಿಲ್ಲ
ಬುರುಗು ಬುದ್ಧಿ ನನ್ನದಲ್ಲ.
ಒಂದು ವೇಳೆ
ನಿಮ್ಮ ಏರ್‌ಕಂಡೀಷನ್ಡ್ ಮನೆಯಲ್ಲಿ ಹುಟ್ಟಿದ್ದರೆ
ಜಂಗಿಸಿದರೂ ಜಗ್ಗದ ದೊಡ್ಡ ಗೋಡೆಯ
ಗೂಡೆವನದಲ್ಲಿ ನನ್ನ ಸಾಕಿದ್ದರೆ
ಲಂಗರು ಹಾಕಿ ನೀವು ನಿಂತಿದ್ದರೆ
ಜುಟ್ಟು ಜುಟ್ಟಿಗೆ ಜೋಲಿ ಕಟ್ಟಿ
ಕೆಂಪು ಕಹಳೆಯೂದುತ್ತಿದ್ದೆ.
ನಿಮ್ಮ ಗಟಾರಿನ ಮುಂದೆ ಗುಟುರು ಹಾಕುತ್ತಿದ್ದೆ.
ಬೆಲೆಯಿಲ್ಲದ ಎಲೆಗಳಿಗೆ ಕೊಳೆತ ಕಸಕಡ್ಡಿ ಗುಡ್ಡೆಗಳಿಗೆ
ಸುಂಟರಗಾಳಿಯ ಹಂಟರಾಗುತ್ತಿದ್ದೆ:
ನಾನು ನಾನೇ ಆಗುತ್ತಿದ್ದೆ.
೨
ನಿಮಗೂ ಅಷ್ಟೆ ಮಾರಾಯರೆ
ನನ್ನನ್ನು ನಿಮ್ಮವನು ಎಂದುಕೊಂಡವರೆ
ನನ್ನ ಬಾಳಿನ ಸುತ್ತ ಬೇಲಿ ಕಟ್ಟುವವರೆ
ಬೇಸಿಗೆಯಲ್ಲೇ ನಿಮ್ಮ ವರ್ಷವೃಷ್ಟಿ!
ಬಂಜೆಬಾನಿಂದ ಪುಷ್ಪವೃಷ್ಟಿ!
ನೀವು ಹಾಕುವ ಹಾರ ಬಲು ಭಾರ ಸ್ವಾಮಿ
ನಡೆಯಲಾರೆ ನಾನು ತಡೆಯಲಾರೆ
ಅಲ್ಲಿ ಕರೆಯುವ ಆ ಕೆಂಪು ಕಂಗಳ ಬಿಟ್ಟು
ತಣ್ಣನೆಯ ತಂಗಳನು ತಿನ್ನಲಾರೆ.
ನಿಮ್ಮವರಾದ ನನ್ನ ಅಪ್ಪ ಅಮ್ಮನ ಖುಷಿಯ
ಕಂದನಾದದ್ದು ನನ್ನ ತಪ್ಪಲ್ಲ;
ನಾನು ನಿಮ್ಮವನೂ ಅಲ್ಲ.
೩
ಹೊರಟೆ;
ಭೂತಬಾಯಿಗೆ ಬಿರಟೆ
ಹೊಡೆದು ಹೊರಟೆ
ಕಳ್ಳು ಕುಡಿದು ಕಾಡಿಸುವ ಕೊಳ್ಳಿದೆವ್ವಗಳಿಗೆ ದಕ್ಕದೆ
ದಮ್ಮು ಕಟ್ಟಿ ಹೊರಟೆ.
ಮರಳು ನೆಲದಲ್ಲಿ ದೈತ್ಯ ನೆರಳು
ಗೋಮಾಳೆ ಹಿಚುಕುವ ಭೂತ ಬೆರಳು
ಅಡ್ಡ ಹಳಿಗಳ ಮೇಲೆ ಚಕ್ರದುರುಳು.
ಕೊರಳ ಕೊಡದೆ ಕ್ಷಣಮಾತ್ರ ಕಂಪಿಸದೆ
ನನ್ನವರ ನಾನು ಹುಡುಕಿ ಹೊರಟೆ
ಅಲ್ಲೊಂದು ಇಲ್ಲೊಂದು ನನ್ನವೇ ಮುಖ ಕಂಡು
ಮುಂಬಾಗಿಲ ಮುಗುಳ್ನಗೆಯಲ್ಲಿ ಮೈಮರೆತು
ಅದು ಹುಣ್ಣಿಮೆ ಹೊತ್ತು!
ಕ್ಷಣ ಕಳೆದು ಕಣ್ಣು ಬಿಟ್ಟರೆ ಅಯ್ಯೋ! ಕಗ್ಗತ್ತಲು!
ನಗ್ನಕಪ್ಪಿನಲ್ಲಿ ವಿಕಟ ನಗೆ ಎತ್ತಲು.
ಬಾಯ್ತೆಗೆದ ಭೂತಭೂಮಿಯ ಕೋರೆದಾಡೆಗಳಂತೆ ಕೊಳ್ಳಿ-
ಕುಣಿತ.
ನುಗ್ಗಲೇಬೇಕೆಂಬ ನೊಗ ಹೊತ್ತು ನಿಂತ ನಾನು
ಅನಾಥ
*****