ಶ್ರಾವಣ ಮಾಸದ ಆರಂಭದೊಡನೆ ಹಬ್ಬಗಳು ಸಾಲು ಸಾಲಾಗಿ ಬರಲಾರಂಭಿಸಿದವು. ಅಂದು ಗೋಕುಲಾಷ್ಟಮಿ. ಎದುರು ಮನೆ ಮೀನಾಕ್ಷಮ್ಮವರನ್ನು ನನ್ನ ಮಡದಿ ಲಲ್ಲೂ ಅರಸಿನ – ಕುಂಕುಮಕ್ಕೆ ಆಹ್ವಾನಿಸಿದಳು. “ರೀ ಲಲಿತಾರವರೇ, ನಿಮ್ಮದೇವರ ಮನೆಯಲ್ಲಿರುವ ಆ ಮಂದಾಸನ ತುಂಬಾ ಚಿನ್ನಾಗಿದೆ; ಎಲ್ಲಿಕೊಂಡಿದ್ದು?” ಕೇಳಿದರು ಮೀನಾಕ್ಷಮ್ಮ. “ಮೂರು ವರ್ಷದ ಹಿಂದೆ ನಮ್ಮ ಯಜಮಾನರು ಕುಮಟಾಕ್ಕೆ ಹೋಗಿದ್ದರು. ಆಲ್ಲಿಂದ ಕೊಂಡುಕೊಂಡು ಬಂದರು. ಕರೀಮರದ್ದು, ಕುಸುರಿ ಕೆಲಸಮಾಡಿದೆ. ತುಂಬಾ ಚಿನ್ನಾಗಿದೆ. ಈ ಊರಿನಲ್ಲೂ ಖರೀದಿಗೆ ಸಿಗುತ್ತದೆ. ಆದರೆ ಅಲ್ಲಿ ಕೊಳ್ಳೋದರಿಂದ ಚಾಯ್ಸ್ ಸೆಲೆಕ್ಷನ್ ಗೆ ಅವಕಾಶವಿರುತ್ತೆ. ಹೇಗೂ ನಮ್ಮ ಯಜಮಾನರು ಕಾರವಾರದಲ್ಲೇ ನೌಕರಿಯಲ್ಲಿರೋದು. ಕುಮಟ ಅಲ್ಲಿಗೆ ಭಾರಿ ಹತ್ತಿರ. ಒಂದು ಮಂಟಪವನ್ನು ಖರೀದಿಸಿ ತರಲು ಹೇಳುತ್ತೇನೆ. ನೀವು ಇದರ ಬಗ್ಗೆ ತಲೆ ಕಡಿಸಿಕೊಳ್ಳಬೇಡಿ. ಒಳ್ಳೆಯ ಕರಿಮರದ ಮಂಟಪವನ್ನೇ ತರೋಣಂತೆ.” ನನ್ನ ಮಡದಿಯ ಅಂಬೋಣ. ಮಾರನೆಯ ಬೆಳಗ್ಗೆ ಮೀನಾಕ್ಷಮ್ಮನವರು ಮನೆಗೆ ಬಂದು “ನಿಮ್ಮ ಮನೆಯಲ್ಲಿರೋ ತರಹಮಂಟಪಕ್ಕೆ ಈಗ ಏನು ಬೆಲೆ ಹೇಳುತ್ತಾರೋ?” ನನ್ನ ಕಡೆ ದೃಷ್ಟಿ ಇಟ್ಟು ಉತ್ತರಕ್ಕಾಗಿ ತವಕಿಸಿದರು. ಈಗ ಮೂರು ವರ್ಷಗಳ ಕಳೆಗೆ ೧,೫೦೦/- ರೂ. ಕೊಟ್ಟಿದ್ದೆ. ಈಗ ಬೆಲೆಗಳೆಲ್ಲಾ ಏರಿಬಿಟ್ಟಿವೆ ನೋಡಿ. ಬಹುಶಃ ೨೫೦೦/-ರೂ. ಆಗಬಹುದು’ ಎಂದೆ. ತಕ್ಷಣವೇ ೫೦೦/-ರೂ. ಅಡ್ವಾನ್ಸ್ ಕೊಟ್ಟು “ಹೇಗೂ ಮುಂದಿನ ವಾರ ರಜಾಕ್ಕೆ ಬರುತ್ತೀರಿ; ಆಗಹಿಡಿಡುಕೊಂಡು ಬಂದರಾಯಿತು” ಎಂದು ಹೇಳುತ್ತಾ ಮನೆ ಕಡೆ ಹೆಜ್ಜೆ ಹಾಕಿದರು.
ಕಾರವಾರದಿಂದ ಮುಂದಿನ ವಾರ ಇಲ್ಲಿಗೆ ಬರುವವನಿದ್ದೆ. ಹೊರಡುವುದು ನಾಳೆ ಎನ್ನುವಾಗ ಕುಮಟ್ಟಾಕ್ಕೆ ಕಚೇರಿ ಕೆಲಸ ಮುಗಿಸಿ ಸಂಜೆ ಬಸ್ಸಿಗೆ ಹೊರಟೆ. ನಾಲ್ಕಾರು ಅಂಗಡಿಗಳನ್ನು ಸಂದರ್‍ಶಿಸಿದೆ. ಇವಲ್ಲದೆ ಮಂಟಪ ತಯಾರು ಮಾಡುವ ಮನೆಗಳಿಗೂ ಭೇಟಿ ಕೊಟ್ಟೆ. ನನಗೆ ಒಳ್ಳೆಯದಾದ, ನೋಡಿದ ತಕ್ಷಣ ಇಷ್ಟವಾಗುವ ಮಂಟಪಗಳು ಸಿಗಲಿಲ್ಲ. ಪುನಃ ಅಂಗಡಿಗಳಿಗೆ ಮತ್ತೆ ಭೇಟಿ ಕೊಟ್ಟೆ ಆಲ್ಲಿಯೂ ಆದೇ ಪರಿಸ್ಥಿತಿ ಆಯಿತು. ಮಂದಾಸನ ತಯಾರು ಮಾಡಿ ಪರ ಊರುಗಳಿಗೆ ಕಳುಹಿಸುವ ಈ ಕುಮಟದಲ್ಲೇ ಮಂಟಪಗಳಿಗೆ ತತ್ವಾರ ಆಯಿತಲ್ಲಾ ಎಂದು ಸಂಕಟಪಟ್ಟೆ. ದಾರಿಯಲ್ಲಿ ನನ್ನ ಮಿತ್ರ ಅವನೂ ಕಾರವಾರದಿಂದ ಬೇರೊಂದು ಕಾರ್ಯಾರ್ಥವಾಗಿ ಬಂದಿದ್ದನಾದ್ದರಿಂದ ಸಿಕ್ಕಾಗ ಮಂಟಪದ ಬಗ್ಗೆ ಆವನಲ್ಲಿ ಪ್ರಸ್ತಾಪಿಸಿದೆ. ‘ನೋಡಿ, ಆ ಬಸ್ ಸ್ಟಾಂಡ್ ಎದುರು ಗಲ್ಲಿಯಲ್ಲಿ ನಾಲ್ಕು ಮಾರು ನಡೆದರೆ ಕೆತ್ತನೆ ಕೆಲಸ ಮಾಡಿದ ಕರೀಮರದ ಮಂಟಪಗಳು ಹೇರಳವಾಗಿ ಸಿಗುತ್ತವೆ. ನಿಮ್ಮ ಇಷ್ಟಕ್ಕೆ ಬಂದಿದ್ದನ್ನು ಖರೀದಿಸಿದರೆ ಅವರೇ ಪ್ಯಾಕ್ ಮಾಡಿ ನಿಮಗೆ ಬಸ್ ಸ್ಟಾಂಡಿಗೆ ಬಂದು ಡೆಲಿವರಿ ಕೊಡುತ್ತಾರೆ. ನೀವು ಭಾರ ಹೊರುವುದನ್ನು ತಪ್ಪಿಸುತ್ತಾರೆ’ ಎಂದ. ‘ಆದೂ ಸರಿ’ ಎನ್ನುತ್ತಾ ಆ ಆಂಗಡಿಗೆ ಭೇಟಿ ಇತ್ತೆ. ರಾತ್ರಿ ಎಂಟು ಘಂಟೆ ಆಗಿತ್ತು. ಆಲ್ಲಿ ವಿಚಾರಿಸಿದಾಗ ನನ್ನ ಮನಸ್ಸಿಗೆ ಹಿಡಿಸುವಂತಹ ಒಂದು ಮಂದಾಸನವನ್ನು ಮೇಲಿನಿಂದ ಕೆಳಗೆ ಇಳಿಸಿ ಧೂಳು ಕೊಡವಿ, “ನೋಡಿ ಸರ್, ದಿ ಬೆಸ್ಟ್ ಪೀಸ್” ಎಂದ ಆಂಗಡಿಯವ. “ಯಾರೋ ಆರ್ಡರ್ ಕೊಟ್ಟು ಅಡ್ವಾನ್ಸ್ ಮಾಡಿ ಈ ಮಂದಾಸನವನ್ನು ಸಲೆಕ್ಟ್ ಮಾಡಿ ಇನ್ನು ಕೊಂಡೊಯ್ಯುವುದರೊಳಗೇ ಇದ್ದಾರೆ. ಅವರ ಸುಳಿವೇ ಇಲ್ಲ. ನೀವು ಸುಮ್ಮನೆ ಇದನ್ನು ಒಯ್ದು ಬಿಡಿ” ಎಂದೆಲ್ಲಾ ಕೊರೆದ. ಬೆಲೆ ವಿಚಾರಿಸಿದಾಗ ಬೇರಯವರಿಗ ೩೫೦೦/-ರೂ, ನಿಮಗಾದರೆ ೩೦೦೦/- ರೂ.ಗೇ ಕೊಡುತ್ತೇನೆ; ಏಕೆಂದರ ನೀವು ಪದೇ ಪದೇ ನಮ್ಮ ಅಂಗಡಿಗೆ ಬರುತ್ತಿರಬೇಕು” ಎಂದ. “ಆಯ್ತು ನೂರು ರೂ. ಕಡಿಮೆ ಕೊಡಿ” ಎಂದ ಅಂಗಡಿಯವ. ಬೆಲೆ ಕಡಿಮೆ ಮಾಡುವ ವಿಚಾರದಲ್ಲಿ ನನ್ನ ಬೇಳೆಕಾಳು ಏನೂ ಬೇಯಲಿಲ್ಲ. “ಚೆನ್ನಾಗಿ ಪ್ಯಾಕ್ ಮಾಡಿ ಬಿಲ್ ಸಮೇತ ಅದನ್ನು ಬಸ್ ಸ್ಟಾಂಡ್ ಗೆ ಒಯ್ದು ಅವರ ಸೀಟಿನ ಅಡಿ ಇಟ್ಟು ಬಾ” ಕೆಲಸದವನಿಗೆ ಮಾಲೀಕ ನಿರ್ದೇಶಿಸಿದ.
ಮಾರನೆಯ ಬೆಳಗ್ಗೆ ಹತ್ತು ಗಂಟೆಗೆಲ್ಲಾ ಊರು ತಲುಪಿ ಆಟೋ ಹಿಡಿದು ಮನೆ ಸೇರಿದೆ. ಆಟೋನಿಂದ ಕೆಳಗೆ ಲಗೇಜ್ ಸಮೇತ ನಾನು ಇಳಿಯುತ್ತಿದ್ದುದನ್ನು ಎದುರುಮನೆ ಮೀನಾಕ್ಷಮ್ಮ ಅವರ ಮನೆ ಕಿಟಕಿಯಲ್ಲಿ ಇಣಿಕಿ ನೋಡುತ್ತಿದ್ದುದನ್ನು ಗಮನಿಸಿದೆ. ಒಂದು ಗಂಟೆಯ ನಂತರ ನಮ್ಮಮನೆಗೆ ಬಂದು ಮಂಟಪದ ಪ್ಯಾಕ್ ಬಿಚ್ಚಲು ಹೊರಟರು. “ಎಷ್ಟು ಹಣ ನಾನೀಗ ಕೊಡಬೇಕು?” ಎಂದು ಕೇಳಿದಾಗ ಸೂಕ್ತ ಉತ್ತರ ಕೊಟ್ಟೆ ಮಂಟಪವನ್ನು ಕೈಲಿ ಹಿಡಿದು ಹಿಂದು ಮುಂದೆ ಎಲ್ಲಾ ತಿರುಗಿಸಿ “ಎಷ್ಟು ಮುದ್ದಾದ ಮಂಟಪವನ್ನು ಖರೀದಿ ಮಾಡಿ ತಂದಿದ್ದೀರಿ; ನಿಮಗೆ ನಿಜಕ್ಕೂ ಧನ್ಯವಾದಗಳು…..ಗಾಬರಿಯಿಂದ “ರೀ ಲಲಿತಾ, ಇಲ್ನೋಡ್ರೀ ಮಂಟಪದ ಬೆನ್ನು ಹಿಂದೆ ಸೀಳು ಬಿಟ್ಟಿದೆ; ಉದ್ದಕ್ಕೂ ಬಿರುಕು ಬಿಟ್ಟಿದ್ದು ಕಂಡೂ ಕಾಣದ ಹಾಗೆ ಅಂಟಿನ ಟೀಪು ಹಚ್ಚಿ ಬಿಟ್ಟಿದ್ದಾನೆ. ಹಗಲಲ್ಲೂ ಕಾಣದ ಹಾಗೆ ಐಬು ಮುಚ್ಚಿದ್ದಾನೆ. ಒಡೆದದ್ದು ಶ್ರೇಷ್ಠವಲ್ಲ. ಈ ಮಂಟಪ ನನಗ ಬೇಡ. ನನ್ನ ಅಡ್ವಾನ್ಸ್ ಹಣ ೫೦೦/- ರೂ. ವಾಪಸ್ ಮಾಡಿಬಿಡಿ” ಹೀಗನ್ನುತ್ತಾ ಸಿಡಸಿಡನೆ ಆರ್‍ಭಟಿಸುತ್ತಾ ಜಾಗ ಖಾಲಿ ಮಾಡಿದರು.
ಹೌದು, ನಾನು ಮೋಸ ಹೋಗಿದ್ದೆ. ತಕ್ಷಣವೇ ಬಿಲ್ ತೆರದು ಅಂಗಡಿಯ ಫೋನ್ ನಂಬರ್‌ಗೆ ಅಂದರೆ ಕುಮಟಾಕ್ಕೆ ಫೋನಾಯಿಸಿದೆ. ‘ನೀವೆಲ್ಲೋ ಈ ವ್ಯವಹಾರಕ್ಕೆ ಹೊಸಬರೆಂದು ಕಾಣುತ್ತೆ. ನಮ್ಮ ಅಂಗಡಿಯಲ್ಲಿ ಖರೀದಿಯಾದ ಮಾಲು ಯಾವುದೇ ಕಾರಣಕ್ಕಾಗಿ ವಾಪಸ್ಸಾಗುವುದಿಲ್ಲ’ ಎಂದ. ನಾನು ಇನ್ನಷ್ಟು ವಿವರವಾಗಿ ಮಾತಾಡಲು ಹೊರಟರೆ “ಒಂದು ಕೆಲಸ ಮಾಡಿ; ಆ ಬಿಲ್ಲಿನಲ್ಲಿ ಕೆಳಗಡೆ ವಿ.ಸೂ.: ಅಂತ ಇದೆ. ಆದು ಓದಿ ಗಟ್ಟಿಯಾಗಿ ನನಗೆ ಕೇಳುವಂತೆ.” ಅಂದ ಅಂಗಡಿಯವ. “ಒಮ್ಮೆ ಖರೀದಿಸಿದ ಮಾಲನ್ನು ಹಿಂದಕ್ಕೆ ಪಡೆಯುವಂತಿಲ್ಲ; ಬದಲಾಯಿಸಲು ಸಾಧ್ಯವಿಲ್ಲ” ಎಂದಿತ್ತು. ಓದಿದ.‘ಹೂಂ ಅಷ್ಟೇ; ಎಲ್ಲಾ ನೀವು ಇಲ್ಲೇ ನೋಡಿಕೊಳ್ಳಬೇಕಾಗಿತ್ತು” ಎನ್ನುತ್ತ ಫೋನ್ ಕುಟ್ಟಿದ! ಈಗ ಮಂದಾಸನವು ಅಟ್ಟ ಏರಿ ಮಂದಹಾಸ ಬೀರುತ್ತಾ ಇದೆ.
*****