ಮಾತಲ್ಲ ಮಂತ್ರ, ಅರ್ಥದಾಚೆಗೆ ಮಾತ
ಹಾರಿಸಿಬಿಡುವ ತಂತ್ರ; ಕತ್ತಿಗೆ ಗಂಟು ಬಿದ್ದ
ಅರ್ಥದ ಕಣ್ಣಿ ಕಳಚಿ ಅಂತರಿಕ್ಷಕ್ಕೆ ಜಿಗಿದು
ನಕ್ಷತ್ರವಾಯಿತು ಶಬ್ಧ.
ನಾದಲಯಗಳ ಜೋಡು ಸಾರೋಟು ಹತ್ತಿ
ರೂಪಕದ ಮೆರವಣಿಗೆ ಬರವಣಿಗೆ;
ಬಡ ಪದವ ಕವಿತೆ ಮಾಡುವ ಅತಾರ್ಕಿಕ ಹೆಣಿಗೆ ಯಕ್ಷಿಣಿಗೆ.
ಲೋಟದಲ್ಲಿದೆ ಹೌದೆ ನೀರು ? ತಟ್ಟೆಯ ಮುಚ್ಚಿ
ಮತ್ತೆ ತೆಗೆದರೆ ಬಿಯರು!
ಆಟಕ್ಕೆ ಮಾತನ್ನು ಹೂಡಿ ಎಸೆದನೊ ದಾಳ
ಕೇಳುಕೇಳಿದ ಗರ,
ನಾಲ್ಕೇ ಜಿಗಿತ ಕಾಯಿ ಹಣ್ಣಾಗಿ ಬಿಡುವ ವರ.
ಖಿಯಾಲಿ ಹತ್ತಿತೊ ಹರಟೆ ಕಣ್ಣೆದುರೆ ಒಣಗೊರಟೆ
ಕುಡಿಯೊಡೆದು ಸಸಿಯಾಗಿ ಗಿಡವಾಗಿ ಮರವಾಗಿ
ಚಿಗುರಿ ಹೂತುಂಬಿ ಹರೆಯಾಡಿ ಹಬ್ಬುವ ನೆರಳು!
ಸಾಧನಕೇರಿಯಲ್ಲಿ ಸಿದ್ಧಿಗೇರಿದ ಜೋಗಿ
ಖಾಲಿ ಜೇಬಿನ ಆರ್ಥಶ್ರೀಮಂತ; ಹೋಗಂತ
ಹೇಳಿದನೊ ಹೋಗಿ, ಬಾ ಎಂದನೋ ತಲೆಬಾಗಿ
ಠಣ್ಣೆಂದು ಕುಣಿಕುಣಿದು ಶಬ್ಧವರಹದ ಸಾಲು
ಹೇಗೆ ಬರುವುವು ನೋಡಿ! ಅರ್ಥ ಆತ್ತಿರಲಿ ಬಿಡಿ
ಅನರ್ಥ ಅಪಾರ್ಥಗಳ ಗಲ್ಲಿ ಪಡಖಾನೆಯಲಿ
ಕುಡಿದು ಮತ್ತೇರಿ
ದನಿಯೆತ್ತಿ ಹಾಡಿ ಪದ ಬಾರಿಸಿವೆ ಜಯಭೇರಿ
ಕುಡುಗೋಲ ಹಿಡಿದ ಏ ಉನ್ಮತ್ತ ಕರಿಯ !
ಏನು ಕೆಲಸವೊ ಇಲ್ಲಿ ನಿನಗೆ ?
ಕುಡುಗೋಲ ಕೆಳಗಿಟ್ಟು, ಕೈಯೆತ್ತಿ ಹಣೆಗಿಟ್ಟು
ಸಲ್ಲಿಸು ನಮಸ್ಕಾರ, ಒಪ್ಪಿಕೊ ಪರಾಭವ!
****
ನಭದಲ್ಲಿ ಬೇರು, ನೆಲದಲ್ಲಿ ಅರಳಿರುವ ಫಲ
ಜ್ವಲಿಸುವ ಆತ್ಮ ತೊಟ್ಟ ಹಿಡಿಮೂಳೆಗಳ ಚೀಲ
ಮೈಯ ಮುಚ್ಚದ ಅರಿವೆ, ಬೋಳುತಲೆ, ಪಾದುಕೆ
ಬಡಪಾಯಿ ರೈತನೆ, ಮಹಿಮಾವಂತ ಋಷಿಯೆ?
ಎರಡೂ ಕೂಡಿ ಮೊಳೆತ ಲೋಕಾಲೋಕ ಕಸಿಯೆ
ಒಮ್ಮೊಮ್ಮೆ ಕೂತನೋ ಚಂಡಿ ಉಪವಾಸ ಹಿಡಿದು
ಮಿಲಿಯಗಟ್ಟಲೆ ಜನ ಇಡಿಕಿರಿದ ಭೂಖಂಡ
ಕಾಯುತ್ತದೆ ಕಳವಳಿಸಿ ತುದಿಗಾಲಿನಲ್ಲಿ ನಿಂತು,
ಬೇಡುತ್ತದೆ ಕೈಮುಗಿದು ಉಪವಾಸ ನಿಲ್ಲಿಸು ಎಂದು.
ಅಲ್ಲಾಡದ ಕಲ್ಲುಜೀವ, ಕಟ್ಟಿಟ್ಟ ಬಿರುಗಾಳಿ
ನಿಜನಡತೆ; ಆದರೂ ಕಂಪನಿ ನಾಟಕದ ಶೈಲಿ!
ತಿಳಿಯದು ಹಡಗಿಗೆ ತನ್ನ ತೇಲಿಸಿ ಮುಂದೊಯ್ಯುವ
ಕಡಲಿನ ನಿಗೂಢ ಜಾಲ, ಮಣ್ಣುಮಂತ್ರದ ಮೇಳ.
ಗೀತೆಯ ಹಾಲು ಹೀರಿ ಗಟ್ಟಿ ಮುಟ್ಟಾದ ಮುದುಕ
ವಾಸ್ತವದ ಬಟ್ಟಲಲ್ಲಿ ಚರಿತ್ರೆ ಪುರಾಣಗಳ
ಕಲೆಸಿ ಉಂಡ ಆಧುನಿಕ.
ಮುಟ್ಟುವಂತಿಲ್ಲ ಹಿಮಾಲಯಕ್ಕಿಂತ ಎತ್ತರ
ಬಿತ್ತದಲ್ಲಿ ಅಡಗಿರುವ ಅರಳಿಯ ವಿಸ್ತಾರ
ಮಡಿಲೊಳಗೆ ಏಳು ಬಣ್ಣಗಳ ಬಚ್ಚಿಟ್ಟ ಬೆಳಕು;
ರಾಜಕಾರಣದ ಸುಡುಗಾಡಿನಲ್ಲೂ
ಸತ್ಯಬ್ರಹ್ಮನ ಧ್ಯಾನ, ಎಲ್ಲವನ್ನೂ ಆತ್ಮದೊರೆಗೆ ಹಚ್ಚುವ ಮಾನ
ಕೊಲ್ಲುವ ಸಿಡಿಗುಂಡೂ ಹೊರಗೆ ತಂದದ್ದು ಅಮರ
‘ಹೇ ರಾಮ ರಾಮ’
ಕುಡುಗೋಲ ಹಿಡಿದ ಏ ಉನ್ಮತ್ತ ಕರಿಯ !
ಏನು ಕೆಲಸವೊ ಇಲ್ಲಿ ನಿನಗೆ ?
ಕುಡುಗೋಲ ಕೆಳಗಿಟ್ಟು ಪಾದುಕೆ ಮೇಲೆ ಹಣೆಯಿಟ್ಟು
ಸಲ್ಲಿಸು ನಮಸ್ಕಾರ, ಒಪ್ಪಿಕೊ ಪರಾಭವ!
* * * *
ಚಂದಿಯುಟ್ಟಿರುವ ಮಗು, ಮಲಮೂತ್ರ ಸುರಿವ ಮೈ
ತುಂಡುಬೆರಳಿನ ಕುಷ್ಠಕಾಯ; ಮಗುವನ್ನು
ಎತ್ತಿ ಎದೆಗಪ್ಪಿ ಉಪಚರಿಸಿ ಉಸಿರೂದಿ
ಮತ್ತೆ ಬದುಕಿಗೆ ಕಳಿಸಿಕೊಡುವ ಕೌಶಲ್ಯ,
ಸೀರೆಯುಟ್ಟಿದೆ ಕರುಣೆ ಬರೆದ ಕವಿತೆ.
ಯೌವನದ ದಿನದಲ್ಲಿ ತನ್ನ ಸೈನ್ಯ ಸಮೇತ
ಯುದ್ಧಕ್ಕೆ ಬಂದ ಮಾರ
ಮುಗ್ಗರಿಸಿ ಬಿದ್ದ ಇವಳ ಮನೆ ಹೊಸ್ತಿಲಿನ ಮೇಲೆ
ತುಂಡಾಗಿ ಹೋಯಿತು ಬಿಲ್ಲದಾರ,
ಕ್ರಿಸ್ತನೆದೆಗೇರಿತು ಈ ರತ್ನಹಾರ.
ಕರ್ತವ್ಯ ಕರುಣೆ ವಾತ್ಸಲ್ಯಗಳ ಗಾಯತ್ರಿ
ಸದಾ ಗಂಭೀರೆ
ಆಗೀಗ ನಕ್ಕರೀ ಧೀರೆ
ಆಕಾಶದಲ್ಲಿ ಫಕ್ಕನೆ ಹಾರಿ ಹೋಗುವುದು ಬಿಳಿಹಕ್ಕಿ ಹಿಂಡು
ಮಲ್ಲಿಗೆಯ ವನದಲ್ಲಿ ಸಿಳ್ಳು ಹಾಕುತ್ತ
ಎಲೆ ನಡುವೆ ಹಾಯುವುದು ತಂಗಾಳಿ ದಂಡು.
ಗದ್ದಲದ ನಡುವಿದ್ದೂ ಸುದ್ದಿ ಬೇಡದ ಸೇವೆ
ಬಂಧಿಸುವ ಕರ್ಮವೇ ಯೋಗವಾಗುವ ಪೂಜೆ,
ಗಂಡಿನ ಹಂಗೇ ಇರದೆ ಕೋಟಿ ಕೋಟಿ ಜನಕ್ಕೆ
ತಾಯಾದ ಭಾಗ್ಯ; ಮನುಕುಲದ ಆರೋಗ್ಯ.
ಎಲ್ಲಿ ಹುಟ್ಟಿದ ಹೆಣ್ಣು ಎಂದು ಜಾತಕ ಕುರಿತು
ಸೊಲ್ಲೆತ್ತಲಿಲ್ಲ ಯಾರೂ
ಜ್ವಲಂತ ಭಕ್ತಿ ಶ್ರದ್ಧೆ ಪ್ರೀತಿ ಪಥದಲ್ಲಿ
ಸಾಗಿ ಬಂದರೆ ತೇರು ಬಾಗದಿರುವವರಾರು ?
ಮಣ್ಣಗೂಡಿಂದ ಹರಿವ ಅನಂತ ಕರುಣೆಯ ತೊರೆಯ
ಬೆರಗಾಗಿ ನೋಡುತಿದೆ ಚುಕ್ಕಿಗಳ ಮೇಳ
ಲೋಕ ಹಾಡುತ್ತಿರುವ ಕರ್ಮಯೋಗಕ್ಕೆ
ಅಲೌಕಿಕದ ತಾಳ.
ಕಂಡುಗೋಲ ಹಿಡಿದ ಏ ಉನ್ಮತ್ತ ಕರಿಯ!
ಏನು ಕೆಲಸವೊ ಇಲ್ಲಿ ನಿನಗೆ ?
ಕುಡುಗೋಲ ಕೆಳಗಿಟ್ಟು, ಮಿಂದು ಮೈ ಮಡಿಯುಟ್ಟು
ಸಲ್ಲಿಸು ನಮಸ್ಕಾರ, ಒಪ್ಪಿಕೊ ಪರಾಭವ!
*****